ಬೆಳಗಾವಿ: ಕೆಲವು ದಿನಗಳ ಹಿಂದೆ ಮುಖ್ಯಮಂತ್ರಿಯಾಗುವ ಇಂಗಿತ ವ್ಯಕ್ತಪಡಿಸಿದ್ದ ಸಚಿವ ಉಮೇಶ್ ಕತ್ತಿ, ಇದೀಗ ಮತ್ತೊಮ್ಮೆ ಅದೇ ಆಸೆ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಪುನಃ ಚರ್ಚೆ ಆಗಲಾರಂಭಿಸಿರುವ ಬೆನ್ನಿಗೇ ಅವರು ತಮ್ಮ ಆಸೆಯನ್ನು ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ.
ಬೆಳಗಾವಿಯಲ್ಲಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್ ಕರೆದ ಸಂಘಟನಾತ್ಮಕ ಸಭೆಗೆ ಬಂದಿದ್ದ ಸಂದರ್ಭದಲ್ಲಿ ಮಾತನಾಡಿರುವ ಆಹಾರ ಸಚಿವ ಉಮೇಶ್ ಕತ್ತಿ, ಈ ವಿಷಯ ತಿಳಿಸಿದರು. ರಾಜ್ಯದಲ್ಲಿ ಮುಖ್ಯಮಂತ್ರಿ ಇದ್ದಾರೆ, ಸರ್ಕಾರವಿದೆ, ಒಳ್ಳೆಯ ಆಡಳಿತ ನಡೆಯುತ್ತಿದೆ. ಆದರೂ ಕಳೆದ ವರ್ಷದಿಂದ ಸಿಎಂ ಬದಲಾವಣೆ ಕೂಗು ಇದ್ದೇ ಇದೆ. ಅದು ಯಾರು ಬದಲಾಯಿಸುತ್ತಿದ್ದಾರೋ ನನ್ನ ಗಮನಕ್ಕೆ ಬಂದಿಲ್ಲ ಎಂದಿರುವ ಅವರು ಸಿಎಂ ಹುದ್ದೆ ಖಾಲಿಯಾದರೆ ನೆಕ್ಸ್ಟ್ ನಾನೇ ಇದ್ದೇನೆ, ಮುಖ್ಯಮಂತ್ರಿ ಸ್ಥಾನಕ್ಕೆ ಮುಂದೆ ನಂದೇ ನಂಬರ್ ಇದೆ ಎಂದಿದ್ದಾರೆ.
ಹುಕ್ಕೇರಿ ಮತಕ್ಷೇತ್ರದ ಜನ 8 ಬಾರಿ ಶಾಸಕನಾಗಿ ಮಾಡಿ ಆಶೀರ್ವಾದ ಮಾಡಿದ್ದಾರೆ. ಎಂಟು ಬಾರಿ ಶಾಸಕನಾದ ಮೇಲೆ ಮಂತ್ರಿ ಆಗಬೇಕೆಂಬ ಆಸೆ ಇತ್ತು. ನಾಲ್ಕು ಬಾರಿ ರಾಜ್ಯದ ಮಂತ್ರಿಯಾಗಿ ನಾನು ಕೆಲಸ ಮಾಡಿದ್ದೇನೆ. ರಾಜ್ಯದ ಮುಖ್ಯಮಂತ್ರಿ ಆಗಲು ಎಲ್ಲ ಯೋಗ್ಯತೆಗಳು ನನ್ನಲ್ಲಿ ಇವೆ. ಯಾವುದೇ ರೀತಿಯ ಬ್ಲ್ಯಾಕ್ಸ್ಪಾಟ್ ನನ್ನಲ್ಲಿಲ್ಲ, ಕಳಂಕರಹಿತ ವ್ಯಕ್ತಿತ್ವ ಇದೆ. ರಾಜ್ಯದ ಜನ ಆಶೀರ್ವದಿಸಿದರೆ, ಪಕ್ಷದ ಹೈಕಮಾಂಡ್ ಮನಸ್ಸು ಮಾಡಿದರೆ ನಾನು ಸಿಎಂ ಆಗುವ ಆಸೆ ಉಳ್ಳವನು. ಪಕ್ಷ ಮನಸ್ಸು ಮಾಡಿದರೆ ರಾಜ್ಯದ ಸಿಎಂ ಆಗಬೇಕೆಂದು ಮನಸು ಮಾಡಿದ್ದೇನೆ. ಆದರೆ ಸದ್ಯಕ್ಕೆ ಸಿಎಂ ಖುರ್ಚಿ ಖಾಲಿ ಇಲ್ಲ, ಹೀಗಾಗಿ ಅದರ ಬಗ್ಗೆ ಚರ್ಚಿಸಲ್ಲ ಎಂಬುದಾಗಿ ಹೇಳಿದ್ದಾರೆ.
ನಳಿನ್ ಕುಮಾರ್ ಕಟೀಲ್ ಅವರದ್ದು ಎನ್ನಲಾದ ಆಡಿಯೋ ವೈರಲ್ ವಿಚಾರವಾಗಿಯೂ ಮಾತನಾಡಿರುವ ಉಮೇಶ್ ಕತ್ತಿ, ನಳಿನ್ ಕುಮಾರ್ ಕಟೀಲ್ ಆಡಿಯೋ ಬಗ್ಗೆ ಅವರು ತಮ್ಮ ಅನಿಸಿಕೆ ಹೇಳಿರಬಹುದು. ಅದನ್ನು ಕೇಳಿಲ್ಲ, ಕೇಳಿದ ಮೇಲೆ ಪ್ರತಿಕ್ರಿಯಿಸುವೆ ಎಂದಿದ್ದಾರೆ. ಸಿಎಂ ಹುದ್ದೆ ಖಾಲಿ ಇಲ್ಲ, ಖಾಲಿ ಆದಾಗ ಆ ಬಗ್ಗೆ ವಿಚಾರ ಮಾಡ್ತೀನಿ. ಈಗ ಸಿಎಂ ಸ್ಥಾನ ಬದಲಾವಣೆಯಾದರೆ ಉತ್ತರ ಕರ್ನಾಟಕಕ್ಕೆ ಕೊಡಬೇಕೆಂಬುದು ನಮ್ಮ ವಾದ. ನಸೀಬು ಗಟ್ಟಿ ಇದ್ದರೆ ಹೈಕಮಾಂಡ್ ನಿರ್ಣಯ ಮಾಡಿದರೆ ನಾನೇ ಸಿಎಂ ಆಗಬೇಕೆಂಬ ಆಸೆ ಇಟ್ಟುಕೊಂಡಿದ್ದೇನೆ. ಆದರೆ ಅದಕ್ಕಾಗಿ ಬೆಳಗಾವಿಯಲ್ಲಿ ನಾನು ಯಾವುದೇ ಸಭೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.