Breaking News

ವಿಧಾನಸೌಧದ ಕಾರಿಡಾರ್​ನಲ್ಲಿ ಮಾಧ್ಯಮ ನಿರ್ಬಂಧ ಆದೇಶ ಹಿಂಪಡೆದ ಸಿಎಂ.


ಬೆಂಗಳೂರು: ವಿಧಾನಸೌಧದ ಕಾರಿಡಾರ್​ನಲ್ಲಿ ಮಾಧ್ಯಮ ನಿರ್ಬಂಧ ಎಂಬ ಆದೇಶವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಾಪಸ್ ಪಡೆದಿದ್ದಾರೆ. ಈ ಆದೇಶ ಹಿಂಪಡೆಯದಿದ್ದರೆ ಎಲ್ಲಾ ಸರ್ಕಾರಿ ಕಾರ್ಯಕ್ರಮ ಹಾಗೂ ಮುಖ್ಯಮಂತ್ರಿಗಳ ಕಾರ್ಯಕ್ರಮ ಬಾಯ್ಕಾಟ್ ಮಾಡಲು ಮಾಧ್ಯಮ ಪ್ರತಿನಿಧಿಗಳು ತೀರ್ಮಾನಿಸಿದ್ದರು. ಆ ಹಿನ್ನೆಲೆಯಲ್ಲಿ, ಇದೀಗ ವಿಧಾನಸೌಧದ ಕಾರಿಡಾರ್​ನಲ್ಲಿ ಮಾಧ್ಯಮ ನಿರ್ಬಂಧ ಆದೇಶ ಹಿಂಪಡೆಯಲು ಮುಖ್ಯಮಂತ್ರಿ ಸೂಚಿಸಿದ್ದಾರೆ.

ಮಾಧ್ಯಮ ನಿರ್ಬಂಧ ಹಿಂಪಡೆಯುವ ಬಗ್ಗೆ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್​ಗೆ ಬಿ.ಎಸ್. ಯಡಿಯೂರಪ್ಪ ಸೂಚನೆ ನೀಡಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮದವರಿಗೆ ತೊಂದರೆಯಾಗದಂತೆ ನಡೆದುಕೊಳ್ಳಲು ಪೊಲೀಸರಿಗೂ ಸಿಎಂ ಸೂಚನೆ ನೀಡಿರುವುದು ತಿಳಿದುಬಂದಿದೆ.

ಇದಕ್ಕೂ ಮೊದಲು, ಇಂದು ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಪೊಲೀಸರಿಂದ ಅಡ್ಡಿ ಆಗಿತ್ತು.

ಸಿಎಂ ಸಭೆ ನಡೆಯುವ ಜಾಗದಲ್ಲಿ ಪೊಲೀಸರಿಂದ ಅಡ್ಡಿಯಾಗಿತ್ತು. ಮಾಧ್ಯಮದವರನ್ನು ಪ್ರೆಸ್ ರೂಂ ಒಳಗೆ ಪೊಲೀಸರು ತಳ್ಳಿದ್ದರು. ಬಲವಂತವಾಗಿ ಮಾಧ್ಯಮದವರನ್ನು ತಳ್ಳಿದ್ದರು.

ಕಳೆದ ವಾರ ಮಾಧ್ಯಮಗಳಿಗೆ ನಿರ್ಬಂಧಿಸಿ ಆದೇಶ ಹೊರಡಿಸಲಾಗಿತ್ತು. ಕಾರಿಡಾರ್​ಗಳಲ್ಲಿ ಮಾಧ್ಯಮದವರು ಓಡಾಡದಂತೆ ಆದೇಶ ನೀಡಲಾಗಿತ್ತು. ಸಿಎಂ ಅನುಮೋದನೆ ಮೇರೆಗೆ ಮಾಧ್ಯಮಗಳಿಗೆ ನಿರ್ಬಂಧ ಹೇರಲಾಗಿತ್ತು. ಕೇವಲ ಕೆಂಗಲ್ ಗೇಟ್​ನಲ್ಲಿ ಮಾತ್ರ ಚಿತ್ರೀಕರಣಕ್ಕೆ ಅವಕಾಶ ನೀಡಲಾಗಿತ್ತು. ಆದರೆ, ಬಳಿಕ ಇದೀಗ ಮಾಧ್ಯಮ ನಿರ್ಬಂಧ ಆದೇಶ ಹಿಂಪಡೆಯಲಾಗಿದೆ.

ವಿಧಾನಸೌಧದಲ್ಲಿ ಪತ್ರಕರ್ತರ ಪ್ರವೇಶ ನಿಷೇಧಕ್ಕೆ ಆಪ್ ಪಕ್ಷ ಖಂಡನೆ
ವಿಧಾನಸೌಧದ ಕಾರಿಡಾರ್‌ಗಳಿಗೆ ಪತ್ರಕರ್ತರಿಗೆ ಪ್ರವೇಶವನ್ನು ನಿಷೇಧಿಸಿರುವ ಸರ್ಕಾರದ ಕ್ರಮವನ್ನು ಆಮ್‌ ಆದ್ಮಿ ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್‌ ಸದಂ ಖಂಡಿಸಿದ್ದಾರೆ. ಮಾಧ್ಯಮಗಳಿಗೆ ತಿಳಿದರೆ ತೊಂದರೆಯಾಗುವಂತಹ ಯಾವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ಪ್ರಶ್ನಿಸಿದ್ದಾರೆ.

ಮಾಧ್ಯಮವನ್ನು ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆಂದು ಕರೆಯಲಾಗುತ್ತದೆ. ಆಡಳಿತದಲ್ಲಿ ಪಾರದರ್ಶಕತೆ ತರುವ ಕೆಲಸವನ್ನು ಮಾಧ್ಯಮಗಳು ಮಾಡುತ್ತಿವೆ. ಸರ್ಕಾರದ ಲೋಪದೋಷಗಳು, ಜನಪ್ರತಿನಿಧಿಗಳು ಮಾಡುವ ಸರಿತಪ್ಪುಗಳು ಜನರಿಗೆ ತಿಳಿಯುವುದೇ ಮಾಧ್ಯಮಗಳಿಂದ. ಹೀಗಿರುವಾಗ ರಾಜ್ಯ ಸರ್ಕಾರವು ವಿಧಾನಸೌಧದಲ್ಲೇ ಪತ್ರಕರ್ತರ ಹಕ್ಕುಗಳನ್ನು ಮೊಟಕುಗೊಳಿಸುತ್ತಿರುವುದು ಅಪಾಯಕಾರಿ ಬೆಳವಣಿಗೆ ಎಂದು ಜಗದೀಶ್‌ ಸದಂ ಹೇಳಿದ್ದಾರೆ.

ಕೆಂಗಲ್‌ ಹನುಮಂತಯ್ಯನವರು ಒಳ್ಳೆಯ ಉದ್ದೇಶದಿಂದ ವಿಧಾನಸೌಧವನ್ನು ಕಟ್ಟಿಸಿದ್ದಾರೆ. ಆದರೆ ಆ ಪವಿತ್ರ ಕಟ್ಟಡದ ಆವರಣವು ಇಂದು ಕಮಿಷನ್‌ ದಂಧೆ, ವರ್ಗಾವಣೆ ದಂಧೆಗೆ ಬಳಕೆಯಾಗುತ್ತಿರುವುದು ದುರಂತ. ಮುಖ್ಯಮಂತ್ರಿ ಹಾಗೂ ಸಚಿವರು ಬಹುತೇಕ ಅಕ್ರಮಗಳ ಡೀಲ್‌ಗಳನ್ನು ವಿಧಾನಸೌಧದಲ್ಲಿ ಕುದುರಿಸುತ್ತಿದ್ದಾರೆ. ಅಕ್ರಮಕ್ಕೆ ಸೇತುವೆಯಾಗಿರುವ ಬ್ರೋಕರ್‌ಗಳು ವಿಧಾನಸೌಧದ ತುಂಬ ತುಂಬಿಕೊಂಡಿದ್ದಾರೆ. ಜೊತೆಗೆ, ಕೆಲವು ಸಚಿವರು ಅಧಿಕಾರ ಉಳಿಸಿಕೊಳ್ಳಲು ಹಾಗೂ ಕೆಲವು ಶಾಸಕರು ಸಚಿವ ಸ್ಥಾನ ಪಡೆಯಲು ಹಣದ ಹೊಳೆ ಹರಿಸುತ್ತಿದ್ದಾರೆ ಎನ್ನಲಾಗಿದೆ. ಇವೆಲ್ಲ ಕ್ಯಾಮೆರಾಗಳಲ್ಲಿ ಸೆರೆಯಾಗಬಾರದು, ಮಾಧ್ಯಮಗಳ ಮೂಲಕ ಜನರಿಗೆ ತಿಳಿಯಬಾರದು ಎಂಬ ಕಾರಣಕ್ಕೆ ಪತ್ರಕರ್ತರಿಗೆ ಪ್ರವೇಶ ನಿಷೇಧಿಸಿರಬಹುದು. ರಾಜ್ಯದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ ಆಗುತ್ತಿರುವುದಕ್ಕೆ ಇದೊಂದು ನಿದರ್ಶನ ಎಂದು ಜಗದೀಶ್‌ ಸದಂ ಕಿಡಿಕಾರಿದ್ದಾರೆ.

ರಾಜ್ಯದ ಬಿಜೆಪಿ ನಾಯಕರಿಗೆ ಪತ್ರಕರ್ತರನ್ನು ಕಂಡರೆ ಹೆದರಿಕೆಯಾಗುವುದು ಸಹಜ. ಏಕೆಂದರೆ ವಿಧಾನಸಭೆಯಲ್ಲಿ ಮೂವರು ಶಾಸಕರು ನೀಲಿಚಿತ್ರ ವೀಕ್ಷಿಸುತ್ತಿರುವುದನ್ನು ಪತ್ರಕರ್ತರು ಈ ಹಿಂದೆ ಬಯಲಿಗೆಳೆದೆದ್ದಿದ್ದರು. ವಿಧಾನಸೌಧದಲ್ಲಿ ನಡೆಯುವ ಭ್ರಷ್ಟಾಚಾರಗಳನ್ನು ಮಾಧ್ಯಮಗಳು ತೆರೆದಿಡುತ್ತಲೇ ಇವೆ. ತಮ್ಮ ಹುಳುಕುಗಳನ್ನು ಮುಚ್ಚಿಟ್ಟಕೊಳ್ಳಲು ಪತ್ರಕರ್ತರಿಗೆ ನಿರ್ಬಂಧ ವಿಧಿಸಿರುವ ತಮ್ಮ ಆದೇಶವನ್ನು ಮುಖ್ಯಮಂತ್ರಿಗಳು ಕೂಡಲೇ ಹಿಂಪಡೆಯಬೇಕು. ವಿಧಾನಸೌಧದ ಕಾರಿಡಾರ್‌ಗಳಲ್ಲಿ ವರದಿಗಾರಿಕೆ ಮಾಡಲು ಪತ್ರಕರ್ತರಿಗೆ ಅವಕಾಶ ನೀಡಬೇಕು. ಈ ಮೂಲಕ ಪತ್ರಕರ್ತರಿಗಿರುವ ಹಕ್ಕುಗಳನ್ನು ಗೌರವಿಸಬೇಕು ಎಂದು ಜಗದೀಶ್‌ ಸದಂ ಆಗ್ರಹಿಸಿದ್ದಾರೆ.


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

ಏಕಾಏಕಿ ವಾಹಣ ತಡೆಯುವಂತಿಲ್ಲ; ಪೋಲಿಸರಿಗೆ ಡಿಜಿಪಿ ಪ್ರವೀಣ್ ಸೂದ್ ಸೂಚನೆ!

ಬೆಂಗಳೂರು: ನಗರದ ವಾಹನ ಸವಾರರಿಗೆ ಗುಡ್ ನ್ಯೂಸ್ ಇಲ್ಲಿದೆ. ಅನಗತ್ಯ ವಾಹನ ತಪಾಸಣೆಗೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ