ಪುಣೆ, ನವೆಂಬರ್ 26: ಕೊರೊನಾ ವೈರಸ್ ಸೋಂಕಿಗೆ ಲಸಿಕೆ ಅಂತಿಮಗೊಂಡು ಮಾರುಕಟ್ಟೆಗೆ ಬರುವ ಆಶಯ ವ್ಯಕ್ತವಾಗಿದ್ದು, ಕೋವಿಡ್ 19 ಲಸಿಕೆ ಉತ್ಪಾದನೆ ಮತ್ತು ಹಂಚಿಕೆಯ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಜೆನ್ನೋವಾ ಬಯೋಫಾರ್ಮಸಿಟಿಕಲ್ಸ್ ಸಂಸ್ಥೆಗಳಿಗೆ ಶನಿವಾರ ಅಥವಾ ಭಾನುವಾರ ಭೇಟಿ ನೀಡುವ ಸಾಧ್ಯತೆ ಇದೆ.
ಈ ಎರಡೂ ಸಂಸ್ಥೆಗಳು ಮಹಾರಾಷ್ಟ್ರದ ಪುಣೆಯಲ್ಲಿದ್ದು, ಲಸಿಕೆ ಉತ್ಪಾದನೆ ಮತ್ತು ಪರೀಕ್ಷೆಯ ವಿವಿಧ ಹಂತಗಳಲ್ಲಿವೆ. ಮೋದಿ ಅವರು ಪುಣೆಗೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ಪುಣೆ ವಿಭಾಗೀಯ ಆಯುಕ್ತ ಸೌರಭ್ ರಾವ್ ತಿಳಿಸಿದ್ದಾರೆ.
ಸೆರಮ್ ಸಂಸ್ಥೆಯು ಆಕ್ಸ್‌ಫರ್ಡ್-ಆಸ್ಟ್ರಾಜೆನಿಕಾ ಲಸಿಕೆಯನ್ನು ಭಾರತದಲ್ಲಿ ಉತ್ಪಾದಿಸುವ ಮತ್ತು ಪ್ರಯೋಗಿಸುವ ಕಾರ್ಯ ನಡೆಸುತ್ತಿದೆ.ಜೆನ್ನೋವಾರ ಬಯೋಫಾರ್ಮಸಿಟಿಕಲ್ಸ್ ತನ್ನದೇ ಲಸಿಕೆಯನ್ನು ಅಭಿವೃದ್ಧಿಪಡಿಸುತ್ತಿದ್ದು, ಮೊದಲ ಹಂತದ ಮಾನವ ಪ್ರಯೋಗಕ್ಕೆ ಸಿದ್ಧತೆ ನಡೆಸಿದೆ.
ಮೋದಿ ಅವರ ಭೇಟಿ ಹಿನ್ನೆಲೆಯಲ್ಲಿ ಪುಣೆಗೆ ವಿದೇಶಿ ರಾಯಭಾರಿಗಳು ಮತ್ತು ಹೈ ಕಮಿಷನರ್‌ಗಳ ನವೆಂಬರ್ 27ರ ಭೇಟಿಯನ್ನು ಡಿಸೆಂಬರ್ 4ಕ್ಕೆ ಮುಂದೂಡಲಾಗಿದೆ. ಪುಣೆಗೆ ಒಂದು ದಿನದ ಪ್ರವಾಸ ಕೈಗೊಳ್ಳಲಿರುವ ಭಾರತದಲ್ಲಿನ ವಿದೇಶಿ ರಾಯಭಾರಿಗಳು ಈ ಎರಡೂ ಸಂಸ್ಥೆಗಳಿಗೆ ಭೇಟಿ ನೀಡುವ ಕಾರ್ಯಕ್ರಮವಿದೆ. ಶನಿವಾರ ಮೋದಿ ಅವರ ಭೇಟಿಯ ಹಿನ್ನೆಲೆಯಲ್ಲಿ ನಗರ ಹಾಗೂ ಸಂಸ್ಥೆಗಳಲ್ಲಿ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಈ ಪ್ರವಾಸವನ್ನು ಮುಂದಕ್ಕೆ ಹಾಕಲಾಗಿದೆ.
ಭಾರತದಲ್ಲಿ ಪ್ರಯೋಗವಾಗುತ್ತಿರುವ ಕೋವಿಶೀಲ್ಡ್ ಲಸಿಕೆಯ ಮೂರನೇ ಹಂತದ ಪರೀಕ್ಷೆ ನಡೆಯುತ್ತಿದೆ. ಬ್ರಿಟನ್‌ನಲ್ಲಿ ಈಗಾಗಲೇ ಮೂರನೇ ಹಂತದ ಪ್ರಯೋಗದ ಫಲಿತಾಂಶ ಬಿಡುಗಡೆಯಾಗಿದ್ದು, ಒಂದು ತಿಂಗಳ ಒಳಗೆ ಭಾರತದ ಪ್ರಯೋಗಗಳ ಡೇಟಾ ಬಿಡುಗಡೆ ಮಾಡುವ ನಿರೀಕ್ಷೆಯಿದೆ ಎಂದು ಸೆರಮ್ ಸಂಸ್ಥೆಯ ಸಿಇಒ ಅದಾರ್ ಪೂನಾವಲ್ಲ ತಿಳಿಸಿದ್ದಾರೆ.