ಗೋಕಾಕ: ಬರುವ ಶನಿವಾರ ದಿನಾಂಕ 12 ರಂದು ಗೋಕಾಕದಲ್ಲಿ ಬೃಹತ್ ಲೋಕ್ ಅದಾಲತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಕಕ್ಷದಾರರರು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿ ಗೋಕಾಕ ಇದರ ಸದಸ್ಯ ಕಾರ್ಯದರ್ಶಿ ರಾಜು ಗೋಳಸಾರ್ ಅವರು ತಿಳಿಸಿದ್ದಾರೆ.
ಗೋಕಾಕ ನ್ಯಾಯಾಲಯದ ಆವರಣದಲ್ಲಿ ಜನ ಸಾಮಾನ್ಯರಿಗೆ ಕಾನೂನಿನ ಅರಿವನ್ನುಂಟು ಮಾಡಿ ಉಚಿತ ಕಾನೂನು ನೆರವು ನೀಡಲಾಗುವುದು. ಬಾಕಿ ಇರುವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸಲಾಗುವುದು ಎಂದವರು ತಿಳಿಸಿದ್ದಾರೆ. ಜನ ಸಾಮಾನ್ಯರಿಗೆ ಕಾನೂನಿನ ಬಗ್ಗೆ ಅರಿವನ್ನುಂಟು ಮಾಡಿ ಉಚಿತ ಕಾನೂನು ನೆರವು ಮತ್ತು ಸಲಹೆಯನ್ನು ನೀಡುವುದು ಹಾಗೂ ಲೋಕ ಅದಾಲತ್ ಮೂಲಕ ನ್ಯಾಯಾಲಯಗಳಲ್ಲಿ ಅಥವಾ ಇತರ ಕಛೇರಿಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸುವುದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಉದ್ದೇಶವಾಗಿರುತ್ತದೆ.
1987 ರ ಕಾನೂನು ಸೇವೆಗಳ ಪ್ರಾಧಿಕಾರದಕಾಯ್ದೆ ಕಲಂ 12 ರ ಪ್ರಕಾರ ಉಚಿತ ಕಾನೂನು ಸಲಹೆ ಮತ್ತು ನೆರವನ್ನು ನೀಡಲಾಗುತ್ತದೆ. ಈ ನೆರವು ಪಡೆಯುವವರು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಕ್ಕೆ ಸೇರಿರಬೇಕು, ಮಾನಸಿಕ ಅಥವಾ ಬೆರಾವುದೇ ನ್ಯೂನ್ಯತೆಯನ್ನು ಹೊಂದಿರುವವರು, ಮಹಿಳೆ ಮಕ್ಕಳು, ಕಾರ್ಖಾನೆ ಕಾರ್ಮಿಕರು, ಗುಂಪು ಘರ್ಷಣೆ, ಗಲಭೆ, ಪ್ರವಾಹ, ಭೂಕಂಪ, ಕೈಗಾರಿಕಾ ವಿನಾಶ ಮುಂತಾದವುಗಳಿಗೆ ತುತ್ತಾದವರು ಮತ್ತು ದೈಹಿಕ ವ್ಯಾಪಾರ ಅಥವಾ ಜೀತಕ್ಕೋಳಗದವರು ಈ ನೆರವು ಪಡೆಯಬಹುದು.
ಅಲ್ಲದೆ ರಕ್ಷಣೆ, ಗೃಹ ಮನೋರೋಗಿಗಳ ಆಸ್ಪತ್ರೆ ಮುಂತಾದವುಗಳಲ್ಲಿ ಅಭಿರಕ್ಷೆಯಲಿರುವವರು ಹಾಗೂ ಮತೀಯ ಕಾನೂನಿನಿಂದ ದೌರ್ಜನ್ಯಕ್ಕೆ ಬಲಿಯಾದವರು ಮತ್ತು ವಾರ್ಷಿಕ ಆದಾಯ 3 ಲಕ್ಷಕ್ಕಿಂತ ಕಡಿಮೆ ಇರುವ ಎಲ್ಲಾ ವರ್ಗದವರು ಈ ಸೌಲಭ್ಯ ಪಡೆಯಬಹುದು ಎಂದು ಹೇಳಿದ್ದಾರೆ
ಉಚಿತ ಕಾನೂನು ನೆರವನ್ನು ನಿಮ್ಮ ಸಮೀಪದ ನ್ಯಾಯಾಲಯದ ಆವರಣದಲ್ಲಿರುವ ತಾಲೂಕು ಕಾನೂನು ಸೇವಾ ಸಮಿತಿಯಲ್ಲಿ ಅಥವಾ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಂಖ್ಯೆ 0831-2423216 ಗೆ ಕರೆ ಮಾಡಿ ನೆರವು ಪಡೆಯಬಹುದು ಅಲ್ಲದೇ ನಿಮ್ಮ ಮೊಬೈಲ್ ಪ್ಲೇ ಸ್ಟೋರನಲ್ಲಿ ಅಥವಾ ಆಫ್ ಸ್ಟೋರ್ ನಲ್ಲಿ ಡೌನ್ಲೋಡ್ ಮಾಡಿ ಉಚಿತ ಕಾನೂನು ನೆರವು ಮತ್ತು ಸಲಹೆ ಪಡೆಯಬಹುದಾಗಿದೆ.