Breaking News

ವ್ಯಾಕ್ಸಿನ್ ಡಿಪೋದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ: ಜಂಟಿ ಸಭೆ ನಡೆಸಿ ಗೊಂದಲ ಪರಿಹರಿಸಲು ಸಚಿವ ಸತೀಶ್ ಜಾರಕಿಹೊಳಿ ನಿರ್ದೇಶನ


ಬೆಳಗಾವಿ, ಜು.1(ಕರ್ನಾಟಕ ವಾರ್ತೆ): ವ್ಯಾಕ್ಸಿನ್ ಡಿಪೋ ದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಕಾಮಗಾರಿ ಆರಂಭಿಸಿರುವುದಕ್ಕೆ ಸಂಬಂಧಿಸಿದಂತೆ ಸ್ಮಾರ್ಟ್ ಸಿಟಿ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳ ಜಂಟಿ ಸಭೆ ನಡೆಸಿ ಗೊಂದಲವನ್ನು ಬಗೆಹರಿಸಿಕೊಳ್ಳಬೇಕು ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಸೂಚನೆ ನೀಡಿದರು.

ಬೆಳಗಾವಿ ಸ್ಮಾರ್ಟ್ ಸಿಟಿ ಕಚೇರಿಯಲ್ಲಿ ಶನಿವಾರ (ಜು.1) ನಡೆದ ಸ್ಮಾರ್ಟ್ ಸಿಟಿ ಅನುಷ್ಠಾನ ಹಾಗೂ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವ್ಯಾಕ್ಸಿನ್ ಡಿಪೋದಲ್ಲಿನ ಕಾಮಗಾರಿಗೆ ಅನುಮತಿ ಪಡೆದುಕೊಂಡಿರುವ ಹಾಗೂ ಕಾಮಗಾರಿ ಪೂರ್ಣಗೊಂಡ ಬಳಿಕ ಸಮರ್ಪಕ ನಿರ್ವಹಣೆಯ ವಿಷಯಗಳ ಕುರಿತು ಸಭೆಯಲ್ಲಿ ಚರ್ಚಿಸಬೇಕು ಎಂದರು.

ಸ್ಮಾರ್ಟ್ ಸಿಟಿ ಕಾಮಗಾರಿ ಆರಂಭಿಸಲು ಆರೋಗ್ಯ ಇಲಾಖೆಯಿಂದ ಯಾವುದೇ ರೀತಿಯ ಪರವಾನಿಗೆ ನೀಡಿರುವುದಿಲ್ಲ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಕೇವಲ ಹೆರಿಟೇಜ್ ಪಾರ್ಕ್ ಅಭಿವೃದ್ಧಿಪಡಿಸಲು ಒಪ್ಪಿಗೆ ನೀಡಲಾಗಿದೆ ಎಂದು ಹೇಳಿದ್ದಾರೆ. ಆದ್ದರಿಂದ ಈ ಗೊಂದಲಕ್ಕೆ ಸ್ಪಷ್ಟೀಕರಣ ನೀಡಬೇಕು ಎಂದು ಹೇಳಿದರು.

ಒಂದು ವೇಳೆ ಲಿಖಿತವಾಗಿ ಪರವಾನಿಗೆ ನೀಡಿದ್ದರೆ ಅದರ ಬಗ್ಗೆ ಅಧಿಕಾರಿಗಳು ವಿವರಣೆ ನೀಡಬೇಕು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಕಾಮಗಾರಿ ಪೂರ್ಣಗೊಳಿಸಲು ನಿರ್ದೇಶನ:

ಸ್ಮಾರ್ಟ್ ಸಿಟಿ ಯೋಜನೆಯಡಿ ಉಳಿತಾಯವಾಗಿರುವ 19 ಕೋಟಿ ರೂಪಾಯಿಗೆ ಸಂಬಂಧಿಸಿದಂತೆ ಸೂಕ್ತ ಪ್ರಸ್ತಾವನೆ ಸಿದ್ಧಪಡಿಸಬೇಕು. ನಗರ ಬಸ್ ನಿಲ್ದಾಣ ಮತ್ತು ಟಿಳಕವಾಡಿಯ ಕಲಾಮಂದಿರ ಸೇರಿದಂತೆ ಚಾಲ್ತಿಯಲ್ಲಿರುವ ಕಾಮಗಾರಿಗಳನ್ನು ಆದಷ್ಟು ಬೇಗನೆ ಪೂರ್ಣಗೊಳಿಸಬೇಕು ಎಂದು ಸಚಿವ ಜಾರಕಿಹೊಳಿ ತಿಳಿಸಿದರು.

ವಿಶ್ವೇಶ್ವರಯ್ಯ ನಗರದಲ್ಲಿ 51 ಕೋಟಿ ವೆಚ್ಚದಲ್ಲಿ ಸ್ಥಾಪಿಸಲಾಗಿರುವ ಇಂಟಿಗ್ರೇಟೆಡ್ ಕಮಾಂಡ್ ಅಂಡ್ ಕಂಟ್ರೋಲ್‌ ಸೆಂಟರ್ ಅನ್ನು ಮಹಾನಗರ ಪಾಲಿಕೆ, ಪೊಲೀಸ್, ಆರೋಗ್ಯ, ಸಾರಿಗೆ ಮತ್ತಿತರ ಇಲಾಖೆಯವರು ಪ್ರಯೋಜನ ಪಡೆದುಕೊಳ್ಳಬೇಕು.

ಉಳಿತಾಯ‌ದ ಹಣ ಬಳಕೆಗೆ ಸಂಬಂಧಿಸಿದಂತೆ ಪ್ರಸ್ತಾವನೆ ಸಿದ್ಧಪಡಿಸಿದ ಬಳಿಕ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ತಿಳಿಸಿದರು.

ಅಂಗನವಾಡಿ ಅಭಿವೃದ್ಧಿ; ಅಧಿಕ ಖರ್ಚು-ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅಸಮಾಧಾನ:

ಅಂಗನವಾಡಿ ಕೇಂದ್ರ ಅಭಿವೃದ್ಧಿಗೆ 80 ಲಕ್ಷ ಖರ್ಚು ಮಾಡಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ಕಾಮಗಾರಿಗಳ ಛಾಯಾಚಿತ್ರ ಗಮನಿಸಿದರೆ ಅಷ್ಟೊಂದು ದುಡ್ಡು ಖರ್ಚು ಮಾಡಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದರು. ಈ ಬಗ್ಗೆ ವಿಸ್ತೃತವಾಗಿ ಮಾಹಿತಿಯನ್ನು ನೀಡುವಂತೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೆಲವೆಡೆ ಅವೈಜ್ಞಾನಿಕವಾಗಿ ಸೈಕಲ್ ಟ್ರ್ಯಾಕ್ ಮಾಡಲಾಗಿದೆ. ಈ ಬಗ್ಗೆ ಗಮನಹರಿಸಬೇಕು. ಇದೇ ರೀತಿ ನಿರಂತರ ನೀರು ಯೋಜನೆಯ ಕಾಮಗಾರಿಗಳಿಂದ ರಸ್ತೆಗಳು ಹಾಳು ಮಾಡಲಾಗುತ್ತಿದೆ. ಅವುಗಳನ್ನು ದುರಸ್ತಿಗೆ ಸೂಚನೆ ನೀಡಬೇಕು ಎಂದರು.

ಗ್ರಾಮೀಣ ಕ್ಷೇತ್ರದ ನಿರ್ಲಕ್ಷ್ಯ-ಅಧಿಕಾರಿಗಳ ವಿರುದ್ಧ ಆಕ್ರೋಶ:

ಬೆಳಗಾವಿ ನಗರದಲ್ಲಿ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಲಾಗಿದ್ದು, ಆದರೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಅಭಿವೃದ್ಧಿಗೆ ಒಂದು ರೂಪಾಯಿ ಅನುದಾನ ಕೂಡ ನೀಡಿರುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದಕ್ಷಿಣ ಮತ್ತು ಉತ್ತರ ಕ್ಷೇತ್ರದಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಆದರೆ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಗ್ರಾಮೀಣ ಕ್ಷೇತ್ರದಲ್ಲಿ ಯಾವ ಕಾಮಗಾರಿ ಕೈಗೊಳ್ಳಲಾಗಿದೆ ಎಂಬುದರ ಬಗ್ಗೆ ಲಿಖಿತವಾಗಿ ಮಾಹಿತಿಯನ್ನು ನೀಡುವಂತೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಅಧಿಕಾರಿಗಳಿಗೆ ತಿಳಿಸಿದರು.

ಗ್ರಾಮೀಣ ಕ್ಷೇತ್ರದ ವ್ಯಾಪ್ತಿಯಲ್ಲಿ ಕನಿಷ್ಠ ಕೆಲಸವನ್ನೂ ಕೈಗೊಳ್ಳದೇ ನಿರಾಸಕ್ತಿ ತೋರಲಾಗಿದೆ ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.

ಉಳಿತಾಯ ಹಣದ ಪ್ರಸ್ತಾವನೆಯಲ್ಲಿ ನಮ್ಮ ಕ್ಷೇತ್ರದ ಕಾಮಗಾರಿಗಳಿಗೆ ಮಾತ್ರ ಆದ್ಯತೆ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರನ್ನು ಲಕ್ಷ್ಮೀ ಹೆಬ್ಬಾಳಕರ್ ಒತ್ತಾಯಿಸಿದರು.

ಒಂದು ಸಣ್ಣ ಉದ್ಯಾನ ಅಭಿವೃದ್ಧಿಗೆ ಮನವಿ ಮಾಡಿಕೊಂಡರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಂಸದರಾದ ಮಂಗಲ ಅಂಗಡಿ ಬೇಸರ ವ್ಯಕ್ತಪಡಿಸಿದರು.

ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಆಸಿಫ್(ರಾಜು ಸೇಠ್, 

ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಂಡ ಕಾಮಗಾರಿಗಳ ಬಗ್ಗೆ ಅಧಿಕಾರಿಗಳ ಜತೆ ಚರ್ಚೆ ನಡೆಸಿದರಲ್ಲದೇ ಪ್ರತಿಯೊಂದು ಕಾಮಗಾರಿಗಳ ಬಗ್ಗೆ ವಿಸ್ತೃತವಾದ ಮಾಹಿತಿಯನ್ನು ಒದಗಿಸುವಂತೆ ತಿಳಿಸಿದರು.

ನಿಯಮ ಉಲ್ಲಂಘನೆ- ತನಿಖೆಗೆ ಅಭಯ್ ಪಾಟೀಲ ಒತ್ತಾಯ:

ವ್ಯಾಕ್ಸಿನ್ ಡಿಪೋ ದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಾಗಿ ಮರಗಳನ್ನು ಕತ್ತರಿಸಿದ್ದರೆ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ್ ಪಾಟೀಲ ಹೇಳಿದರು.

ಸ್ಮಾರ್ಟ್ ಸಿಟಿ ಕಾಮಗಾರಿ ಗುಣಮಟ್ಟದ ಬಗ್ಗೆ ಹಾಗೂ ನಿಯಮಾವಳಿ ಉಲ್ಲಂಘನೆ ಕುರಿತು ದೂರುಗಳಿದ್ದರೆ ಸಂಪೂರ್ಣವಾಗಿ ಎಲ್ಲ ಕಾಮಗಾರಿಗಳ ಬಗ್ಗೆಯೂ ಸಮಗ್ರ ತನಿಖೆ ನಡೆಸಬೇಕು ಎಂದು ಶಾಸಕ ಅಭಯ್ ಪಾಟೀಲ ಒತ್ತಾಯಿಸಿದರು.

ವೈಟ್ ಟಾಪಿಂಗ್ ಖರ್ಚು-ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ಅಚ್ಚರಿ:

ಸ್ಮಾರ್ಟ್ ಸಿಟಿ ಯೋಜನೆಯಡಿ ಉಳಿತಾಯ ಹಣದಲ್ಲಿ ಹೊಸ ಕಾಮಗಾರಿ ಕೈಗೊಳ್ಳಲು ಪ್ರಸ್ತಾವನೆ ಸಿದ್ಧಪಡಿಸುವಾಗ ತಮ್ಮ ಗಮನಕ್ಜೆ ತರಬೇಕು ಎಂದು ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ್ ಹಟ್ಟಿಹೊಳಿ ಅಧಿಕಾರಿಗಳಿಗೆ ತಿಳಿಸಿದರು.

ನಗರದಲ್ಲಿ ಒಟ್ಟು 53 ಕಿ.ಮೀ. ವೈಟ್ ಟಾಪಿಂಗ್ ಮಾಡಲು ಅತೀ ಹೆಚ್ಚು ಹಣ ಖರ್ಚು ಮಾಡಿರುವ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದರು.

ಆದಾಯ ನಿರ್ವಹಣೆಗೆ ಸಮಿತಿ-ಜಿಲ್ಲಾಧಿಕಾರಿ:

ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿಪಡಿಸಲಾಗುತ್ತಿರುವ ವಿವಿಧ ಗ್ಯಾಲರಿ, ಕಲಾಮಂದಿರ ಇತ್ಯಾದಿಗಳಿಂದ ಎಷ್ಟು ಆದಾಯ ಬರಬಹುದು ಎಂಬುದರ ಬಗ್ಗೆ ಈಗಾಗಲೇ ಚರ್ಚಿಸಲಾಗಿದೆ. ಇದುವರೆಗೆ ಯಾವುದೇ ರೀತಿಯ ಆದಾಯ ಆರಂಭವಾಗಿರುವುದಿಲ್ಲ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.

ಆದಾಯ ಆರಂಭಗೊಂಡ ಬಳಿಕ ತಮ್ಮ ಅಧ್ಯಕ್ಷತೆಯ ಸಮಿತಿಯ ವತಿಯಿಂದ ನಿರ್ವಹಣೆ ಮಾಡಲಾಗುವುದು ಎಂದರು.

ಬೆಳಗಾವಿ ಸ್ಮಾರ್ಟ್ ಸಿಟಿ ವ್ಯಸ್ಥಾಪಕ ನಿರ್ದೇಶಕರಾದ ಸಯೀದಾ ಆಫ್ರೀನ್ ಬಾನು ಬಳ್ಳಾರಿ ಹಾಗೂ ಸ್ಮಾರ್ಟ್ ಸಿಟಿ ಅಧಿಕಾರಿಗಳು ಒಟ್ಟಾರೆ ಯೋಜನೆಯ ಅನುಷ್ಠಾನದ ಕುರಿತು ಮಾಹಿತಿ ನೀಡಿದರು.

ಒಟ್ಟಾರೆ 930 ಕೋಟಿ ವೆಚ್ಚದಲ್ಲಿ 102 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಅದರಲ್ಲಿ 96 ಕಾಮಗಾರಿಗಳು ಪೂರ್ಣಗೊಂಡಿವೆ. ಆರು ಚಾಲ್ತಿಯಲ್ಲಿವೆ.

ಇದಲ್ಲದೇ ಪಿಪಿಪಿ ಮಾದರಿಯಲ್ಲಿ 211 ಕೋಟಿ ರೂಪಾಯಿ ವೆಚ್ಚದಲ್ಲಿ 6 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಒಂದು ಪೂರ್ಣಗೊಂಡಿತ್ತದೆ.

ಇದುವರೆಗೆ ಕೇಂದ್ರ ಸರಕಾರದಿಂದ 441 ಕೋಟಿ ಹಾಗೂ ರಾಜ್ಯ ಸರಕಾರದಿಂದ 439 ಕೋಟಿ ರೂಪಾಯಿ ಹೀಗೆ ಒಟ್ಟು 880 ಕೋಟಿ ಬಿಡುಗಡೆಯಾಗಿರುತ್ತದೆ. ಸದ್ಯ ಕೇಂದ್ರ ಸರಕಾರದಿಂದ 49 ಕೋಟಿ ಹಾಗೂ ರಾಜ್ಯ ಸರಕಾರದಿಂದ 61 ಕೋಟಿ ಅನುದಾನ ಸೇರಿ 110 ಕೋಟಿ ಬಿಡುಗಡೆಗೆ ಬಾಕಿ ಇರುತ್ತದೆ ಎಂದು ಸ್ಮಾರ್ಟ್ ಸಿಟಿ ಯೋಜನೆಯ ಅಧಿಕಾರಿಗಳು ಸಭೆಗೆ ಮಾಹಿತಿಯನ್ನು ನೀಡಿದರು.

ಮಹಾನಗರ ಪಾಲಿಕೆಯ ಆಯುಕ್ತರಾದ ಅಶೋಕ ದುಡಗುಂಟಿ ಸೇರಿದಂತೆ ಸ್ಮಾರ್ಟ್ ಸಿಟಿ ಯೋಜನೆಯ ಎಲ್ಲ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

****


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

ರೈತರ ಖಾತೆಗಳಿಗೆ ಪರಿಹಾರವನ್ನು ಜಮೆ ಮಾಡಿ; ಅಧಿಕಾರಿಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸೂಚನೆ

ಗೋಕಾಕ : ಕಳೆದ ಆಗಷ್ಟ್ ತಿಂಗಳಲ್ಲಿ ಸಂಭವಿಸಿದ ಅತಿವೃಷ್ಟಿ ಮತ್ತು ಪ್ರವಾಹದಿಂದ ಹಾನಿಗೀಡಾಗಿರುವ ರೈತರ ಬೆಳೆಗಳಿಗೆ ಪರಿಹಾರ ಮೊತ್ತವನ್ನು ವಿತರಿಸುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ