ಗೋಕಾಕ: ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳಿಂದ ಗೋಕಾಕ ಮಹಾವಿದ್ಯಾಲಯಕ್ಕೆ ಹಾಗೂ ಶಾಲೆ, ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಸೂಕ್ತ ಬಸ್ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳು ನಿತ್ಯ ಪರದಾಡುವಂತಾಗಿದೆ.
ಬಸ್ ಬಾರದೆ ಹೋದರೆ ಶಾಲೆ, ಕಾಲೇಜು ವಿದ್ಯಾರ್ಥಿಗಳು ತರಗತಿಗಳಿಂದ ವಂಚಿತರಾಗಬೇಕಾಗಿದೆ. ಹೆಚ್ಚಿನ ಬಸ್ ಸೌಲಭ್ಯ ಕಲ್ಪಿಸುವಂತೆ ವಿದ್ಯಾರ್ಥಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಕ್ರಮ ಕೈಗೊಂಡಿಲ್ಲ. ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಂದ ಮನೆಗೆ ತೆರಳಬೇಕಾದರೂ ಬಸ್‌ಗಳಿಲ್ಲದೆ, ಪರ್ಯಾಯ ಮಾರ್ಗವಿಲ್ಲದೆ ಕಷ್ಟ ಪಡುತ್ತಿದ್ದಾರೆ.
ಈ ಬಗ್ಗೆ ಹಲವು ಗ್ರಾಮಗಳ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿ, ಸ್ಥಳೀಯ ಕೆಎಸ್‌ಆರ್‌ಟಿಸಿ ಘಟಕದ ವ್ಯವಸ್ಥಾಪಕರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.
ಗ್ರಾಮೀಣ ಭಾಗಗಳಿಗೆ ಒಂದೊಂದೆ ಬಸ್‌ಗಳು ಸಂಚರಿಸುತ್ತಿದ್ದು ವಿದ್ಯಾರ್ಥಿಗಳಿಗೆ ಆ ಬಸ್ ತಪ್ಪಿದರೆ ಅಂದು ತರಗತಿಗೇ ಗೈರಾಗಬೇಕಿದೆ. ಕೆಲವು ಕಡೆಗಳಲ್ಲಿ ಪರ್ಯಾಯ ವಾಹನಗಳು ಬಾರದೆ ಗ್ರಾಮದಿಂದ ರಸ್ತೆಯವರೆಗೂ ನಡೆದುಕೊಂಡು ಬಂದು ಬಸ್ ಹಿಡಿಯಬೇಕು.
ಸಾಕಷ್ಟು ಬಾರಿ ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟನೆ ಮಾಡುವ ಸಂದರ್ಭದಲ್ಲಿ ಪೋಲಿಸ್ ಇಲಾಖೆ ವಿದ್ಯಾರ್ಥಿಗಳಿಗೆ ಮನವೊಲಿಸಿ, ಕೆಎಸ್ಸಾರ್ಟಿಸಿ ಅವರಿಗೆ ಪತ್ರ ಬರೆದಿದ್ದರು ಅಧಿಕಾರಿಗಳು ಮಾತ್ರ ತಲೆಕೊಳ್ಳದೇ ವಿದ್ಯಾರ್ಥಿಗಳು ಜೀವನದಲ್ಲಿ ಚೆಲ್ಲಾಟ ಆಡುತ್ತಿದ್ದಾರೆ.
ಇದರ ಬಗ್ಗೆ ಆದಷ್ಟು ಬೇಗ ಸಾರಿಗೆ ಸಚಿವರು ಕ್ರಮ ಕೈಗೊಂಡು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.