ಬೆಳಗಾವಿ ಮಹಾನಗರ ಪಾಲಿಕೆ ಮೇಲಿನ ಕನ್ನಡದ ಧ್ವಜ ತೆರವುಗೊಳಿಸಲು ಎಂಇಎಸ್ ನಡೆಸಿದ ಪ್ರಯತ್ನ ಖಂಡಿಸಿ ಗೋಕಾಕ ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣದ ನೂರಾರು ಕಾರ್ಯಕರ್ತರು ಘಟಪ್ರಭಾದಲ್ಲಿ ಪ್ರತಿಭಟನೆ ನಡೆಸಿದರು.
ಗೋಕಾಕ ತಾಲೂಕು ಘಟಪ್ರಭಾ ಮೃತ್ಯುಂಜಯ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣದ ನೂರಾರು ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಎಂಇಎಸ್ ಉದ್ಧಟತನದ ವಿರುದ್ಧ ಘೋಷಣೆ ಮೊಳಗಿಸಿದರು. ಕೂಡಲೇ ಗದ್ದಲಕೋರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಸಂಚಾಲಕ ರೆಹಮಾನ್ ಮೊಕಾಶಿ ಮಾತನಾಡಿ, ಮಹಾರಾಷ್ಟ್ರ ಏಕೀಕರಣ ಸಮಿತಿಯವರು ಪದೇ ಪದೇ ಕಿತಾಪತಿ ಮಾಡುತ್ತಿದ್ದಾರೆ. ಕರ್ನಾಟಕದ ಅನ್ನ ತಿಂದು ಉಂಡ ಮನೆಗೆ ದ್ರೋಹ ಬಗೆಯುವ ಕೆಲಸ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳು ಕೂಡಲೇ ಎಂಇಎಸ್ ಸಂಘಟನೆಯನ್ನು ನಿಷೇಧಿಸಬೇಕು. ಇಲ್ಲದಿದ್ದಲ್ಲಿ ಅವರನ್ನು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾದ್ಯಕ್ಷರ ನೇತೃತ್ವದಲ್ಲಿ ಮಹಾರಾಷ್ಟ್ರಕ್ಕೆ ಕಳುಹಿಸಲು ವ್ಯವಸ್ಥೆ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಕರವೇ ತಾಲ್ಲೂಕು ಅದ್ಯಕ್ಷ ಶೆಟ್ಟೆಪ್ಪಾ ಗಾಡಿವಡ್ಡರ ಯುವ ಘಟಕದ ಅದ್ಯಕ್ಷ ಆಕಾಶ ಭಂಡಿ ರವಿ ನಾವಿ ರಾಜು ಮುತ್ತೆನ್ನವರ ಸಂಜು ಗಾಡಿವಡ್ಡರ ಅಮೀರ ಜಗದಾಳ ರಾಜು ದೊಡಮನಿ ಶಂಕರ್ ಗಾಡಿವಡ್ಡರ ಸೇರಿದಂತೆ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.