ಬೆಳಗಾವಿ ನ 30 : ಗಡಿಭಾಗದ ಕನ್ನಡಿಗರ ಸಮಸ್ಯೆ ಆಲಿಸಲಿಕ್ಕೆ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಡಿಸೆಂಬರ್ ಮೊದಲನೇ ವಾರದಲ್ಲಿ ಮಹಾರಾಷ್ಟ್ರ ಕನ್ನಡರಿಗೆ ಆಹ್ವಾನ ನೀಡಿದ್ದಾರೆ ಎಂದು ಸಾಂಗ್ಲಿ ಎಪಿಎಂಸಿ ಮಾಜಿ ಉಪಾಧ್ಯಕ್ಷ ಹಾಗೂ ಕನ್ನಡ ಹೋರಾಟಗಾರ ಮಹಾದೇವ ಅಂಕಲಗಿ ಹೇಳಿದರು.
ಬುಧವಾರದಂದು ಮಹಾರಾಷ್ಟ್ರ ರಾಜ್ಯದ ಜತ್ತ ತಾಲೂಕಿನ ಮಡಗ್ಯಾಳ ಗ್ರಾಮದಲ್ಲಿ ಕರವೇ ಗೋಕಾಕ ತಾಲೂಕು ಘಟಕದ ಅಧ್ಯಕ್ಷ ಬಸವರಾಜ ಖಾನಪ್ಪನವರ ಅವರಿಂದ ಸತ್ಕಾರ ಸ್ವೀಕರಿಸಿ ಅವರು ಮಾತನಾಡಿದರು.
ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಹಾರಾಷ್ಟ್ರ ರಾಜ್ಯದ ಗಡಿಬಾಗದಲ್ಲಿ ವಾಸಿಸುವ ಕನ್ನಡ ಜನರ ಮೇಲೆ ಪ್ರೀತಿ ತೋರಿದ್ದಾರೆ. 2012 ರಲ್ಲಿ ಸದಾನಂದಗೌಡ ಅವರು ಮುಖ್ಯಮಂತ್ರಿಯಾಗಿದ್ದಾಗ ಸಹ ನಾವು ಮನವಿ ಸಲ್ಲಿಸಿದ್ದವು ನಮ್ಮ ಮನವಿ ಪತ್ರಕ್ಕೆ ಸ್ವಂದಿಸಿ ಅವರೂ ಸಹ ನಮಗೆ ಭರವಸೆ ನೀಡಿದರು. ಈಗ ಬೊಮ್ಮಾಯಿ ಸಾಹೇಬರು ನಮಗೆ ಬೇಟಿಯಾಗಲು ಅವಕಾಶ ನೀಡಿದ್ದಾರೆ ಎಂದ ಅವರು ಬೊಮ್ಮಾಯಿ ಸಾಹೇಬರಿಗೆ ಮಹಾರಾಷ್ಟ್ರ ಕನ್ನಡಿಗರು ಆಭಾರಿಯಾಗಿದ್ದೇವೆ. ಕರ್ನಾಟಕ ಸರಕಾರದ ಮೇಲೆ ನಮಗೆ ಸಂಪೂರ್ಣ ಭರವಸೆ ಇದೆ.ಆದಷ್ಟೂ ಬೇಗ ಮಹಾರಾಷ್ಟ್ರದ ಕನ್ನಡಿಗರ ಸಮಸ್ಯೆಗಳಿಗೆ ಸ್ವಂದಿಸಿ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಕಳೆದ ಹಲವು ದಶಕಗಳಿಂದ ಮಹಾರಾಷ್ಟ್ರ ಕನ್ನಡಿಗರು ನೀರಾವರಿ ಮತ್ತು ಶೈಕ್ಷಣಿಕ ಸೌಲಭ್ಯಗಳಿಗೆ ಆಗ್ರಹಿಸಿ ಹೋರಾಟ ನಡೆಸುತ್ತಾ ಬಂದಿದ್ದೇವೆ ನ್ಯಾಯ ಸಿಗುವವರೆಗೆ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ಹೇಳಿದರು.
ಕರವೇ ಮುಖಂಡ ಬಸವರಾಜ ಖಾನಪ್ಪನವರ ಮಾತನಾಡಿ ಮಹಾರಾಷ್ಟ್ರ ಸರಕಾರ ಗಡಿಬಾಗದ ಅಭಿವೃದ್ಧಿಗೆ ನಿರ್ಲಕ್ಷ್ಯ ತೊರುತ್ತಿದೆ ನೀರಾವರಿ ಸೌಲಭ್ಯಗಳಾಗಲಿ, ಶೈಕ್ಷಣಿಕ ಸೌಲಭ್ಯಗಳಾಗಲಿ ಒದಗಿಸುವಲ್ಲಿ ಮಲತಾಯಿ ಧೋರಣೆ ತೋರುತ್ತಿರುವ ಇದನ್ನು ಕರವೇ ಖಂಡಿಸುತ್ತೇವೆ. ಮಹಾರಾಷ್ಟ್ರ ಕನ್ನಡಿಗರು ಕರ್ನಾಟಕ ರಾಜ್ಯಕ್ಕೆ ಸೇರುವ ಠರಾವುಗಳನ್ನು ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಧ್ಯೆ ಪ್ರವೇಶಿಸಿ ಗಡಿಬಾಗದ ಕನ್ನಡಿಗರ ಸಮಸ್ಯೆಗಳನ್ನು ಪರಿಹರಿಸಿ ಅವರನ್ನು ಕರ್ನಾಟಕಕ್ಕೆ ಸೇರಿಸಕೊಳ್ಳಬೇಕು ಎಂದು ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ಮಹಾ ಕನ್ನಡಿಗರಿಗೆ ಕನ್ನಡ ಧ್ವಜ ಹಸ್ತಾಂತರಿಸಿ ಕರ್ನಾಟಕಕ್ಕೆ ಆಹ್ವಾನಿಸಲಾಯಿತು.
ಈ ಸಂದರ್ಭದಲ್ಲಿ ಮಹಾರಾಷ್ಟ್ರ ಕನ್ನಡ ಮುಖಂಡರಾದ ಕೇಶವರಾವ ಪಾಟೀಲ, ಪ್ರಕಾಶ ಕಣಮಾಡೆ, ಅರವಿಂದ್ ಮಾಳಿ, ಬಾಳಪ್ಪ ಗೇಜಗೆ, ಗುರುರಾಜ ಲವಗಿ ಉಪಸ್ಥಿತರಿದ್ದರು.