ಬೆಂಗಳೂರು: ವಿಧಾನಸಭಾ ಸ್ಪೀಕರ್ ಆಗಿ 2 ವರ್ಷಗಳಲ್ಲಿ ಅನೇಕ ಕಠಿಣ ನಿಲುವುಗಳನ್ನು ತೆಗೆದುಕೊಂಡಿದ್ದೇನೆ. ಸಭಾಧ್ಯಕ್ಷನಾಗಿ ನಿಸ್ಪಕ್ಷಪಾತ ಧೋರಣೆ ಅನುಸರಿಸಿದ್ದೇನೆ. ಸದಸ್ಯರನ್ನು ಜವಾಬ್ದಾರಿಯಿಂದ ನಿಭಾಯಿಸಿದ್ದೇನೆ. ಕನಿಷ್ಠ 60 ದಿನ ಅಧಿವೇಶನ ನಡೆಸಲು ಸೂಚಿಸಿದ್ದೇನೆ. ಆದರೆ ಒಂದು ಕೆಲಸ ಸಾಧ್ಯವಾಗಿಲ್ಲ ಎಂಬ ಬೇಸರವಿದೆ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸ್ಪೀಕರ್ ಕಾಗೇರಿ, ವಿಧಾನಸಭೆಯಲ್ಲಿ ಇ-ವಿಧಾನ್ ಜಾರಿ ಸಾಧ್ಯವಾಗಿಲ್ಲ. ಇದಕ್ಕೆ ರಾಜ್ಯ ಸರ್ಕಾರದ ಧೋರಣೆ ಹಾಗೂ ನಿಲುವುಗಳೇ ಕಾರಣ. ಅನುದಾನದ ನೆರವಿಗೆ ಸರ್ಕಾರವನ್ನೇ ಅವಲಂಬಿಸಿದ್ದೇವೆ. ಸರ್ಕಾರ ಸ್ಪಂದಿಸಿಲ್ಲ. ಅಧಿಕಾರಶಾಹಿ ಧೋರಣೆ ಅನುಸರಿಸಿದೆ ಎಂದು ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ಇ-ವಿಧಾನ್ ಜಾರಿಗೆ ಹಿಂದಿನ ಎಲ್ಲಾ ಸ್ಪೀಕರ್ ಗಳೂ ಈ ಪ್ರಯತ್ನ ಮಾಡಿದ್ದರು.
ಆದರೂ ಸರ್ಕಾರದ ಅಧಿಕಾರಶಾಹಿಯಿಂದಾಗಿ ಸಾಧ್ಯವಾಗಿಲ್ಲ. ಐಟಿ ಕ್ಯಾಪಿಟಲ್ ಖ್ಯಾತಿಯ ರಾಜ್ಯದಲ್ಲಿ ಇ-ವಿಧಾನ್ ಇಲ್ಲ ಎಂಬುದು ಬೇಸರದ ಸಂಗತಿ. ಸಣ್ಣಪುಟ್ಟ ರಾಜ್ಯಗಳಾದ ಕೇರಳ, ಹಿಮಾಚಲಪ್ರದೇಶಗಳಲ್ಲಿ ಇ-ವಿಧಾನ್ ಜಾರಿಯಲ್ಲಿದೆ. ಆದರೆ ನಮ್ಮ ರಾಜ್ಯದಲ್ಲಿ ಇಲ್ಲ. ಇ-ವಿಧಾನ್ ಜಾರಿಗೆ ನಾನು ಯತ್ನಿಸಿದರೂ ಸಾಧ್ಯವಾಗಿಲ್ಲ ಎಂಬುದು ನೋವಿನ ಸಂಗತಿ. ಸರ್ಕಾರದ ಅಧಿಕಾರಶಾಹಿ ಧೋರಣೆ ಬದಲಾಗಬೇಕು ಎಂದು ಹೇಳಿದರು.
CKNEWSKANNADA / BRASTACHARDARSHAN CK NEWS KANNADA