ಹುಕ್ಕೇರಿ: ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರು ಯಮಕನಮರಡಿಯ ಶಹಾಬಂದರ ಮತ್ತು ಇಸ್ಲಾಂಪೂರ ಗ್ರಾಮಗಳ ವಾಲ್ಮೀಕಿ ವೃತ್ತದಲ್ಲಿ ಮೂರ್ತಿ ಪ್ರತಿಷ್ಠಾಪಣೆ ಮಾಡುವ ಸ್ಥಳದಲ್ಲಿ ಬಸ್ ಶೆಲ್ಟರ್ ನಿರ್ಮಾಣ ಮಾಡುತ್ತಿರುವುದನ್ನು ಖಂಡಿಸಿ ವಾಲ್ಮೀಕಿ, ರೈತ, ದಲಿತ ಸಂಘಟನೆಗಳು ವಾಲ್ಮೀಕಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ಮಾಡಿ ಬೃಹತ್ ಪ್ರತಿಭಟನೆ ನಡೆಸಿ ನಂತರ ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ವಾಲ್ಮೀಕಿ, ರೈತ, ದಲಿತ ಸಂಘಟನೆಗಳ ಮುಖಂಡರು ಸಂಸದ ಅಣ್ಣಾಸಾಹೇಬ ಜೊಲ್ಲೆ, ಸಚಿವೆ ಶಶಿಕಲಾ ಜೊಲ್ಲೆ, ಬಿಜೆಪಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದ ಪ್ರತಿಭಟನಾಕಾರರು ಅನುದಾನ ಹಿಂಪಡೆಯುವರೆಗೂ ಅಹೋ ರಾತ್ರಿ ಧರಣಿ ನಡೆಸಲು ತೀರ್ಮಾಣಿಸಿದ್ದಾರೆ.
ಈ ವೇಳೆ ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾದ ರಾಜ್ಯ ಉಪಾಧ್ಯಕ್ಷ ರಾಜಶೇಖರ ತಳವಾರ ಮಾತನಾಡಿ, ಶಹಾಬಂದರ, ಇಸ್ಲಾಂಪೂರ ಗ್ರಾಮಗಳ ನಡುವೆ ಇರುವ ವಾಲ್ಮೀಕಿ ವೃತ್ತದಲ್ಲಿ ವಾಲ್ಮೀಕಿ ಮೂರ್ತಿ ಪ್ರತಿಷ್ಠಾಪಣೆ ಮಾಡಲು ಎರಡು ಊರಿನ ಗ್ರಾಮಸ್ಥರು ಮೂರು ತಿಂಗಳ ಹಿಂದೆಯೇ ನಿರ್ಧರಿಸಿದ್ದರು. ಆದರೆ ಈಗ ಸಂಸದ ಅಣ್ಣಾಸಾಹೇಬ ಜೊಲ್ಲೆ ವಾಲ್ಮೀಕಿ ವೃತ್ತದಲ್ಲಿ ಮೂರ್ತಿ ಪ್ರತಿಷ್ಠಾಪಣೆ ಮಾಡುವ ಸ್ಥಳದಲ್ಲಿ ಬಸ್ ಶೆಲ್ಟರ್ ನಿರ್ಮಾಣ ಮಾಡಲು ಮುಂದಾಗಿದ್ದು ಖಂಡನೀಯ. ಸಂಸದ ಜೊಲ್ಲೆ ಅವರ ನಿರ್ಧಾರಕ್ಕೆ ನಮ್ಮ ವಿರೋಧ ಇದೆ. ವಾಲ್ಮೀಕಿ ಮೂರ್ತಿ ಪ್ರತಿಷ್ಠಾಪಣೆ ಮಾಡಲು ನಿರ್ಧರಿಸಿದ್ದ ಸ್ಥಳದಲ್ಲಿ ನಾವು ಬಸ್ ಶೆಲ್ಟರ್ ನಿರ್ಮಿಸಲು ಬಿಡಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಚಿವೆ ಶಶಿಕಲಾ ಜೊಲ್ಲೆ ಅವರು ಮಕ್ಕಳಿಗೆ ನೀಡುವ ಮೊಟ್ಟೆಯಲ್ಲಿಯೂ ಕಮಿಷನ್ ತಿಂದ ವಿಚಾರ ಇಡೀ ರಾಜ್ಯಕ್ಕೆ ಗೊತ್ತಿದ್ದ ವಿಚಾರ. ಮಕ್ಕಳಿಗೆ ನೀಡುವ ಮೊಟ್ಟೆಯಲ್ಲಿ ಕಮಿಷನ್ ತಿನ್ನುವ ಜೊಲ್ಲೆ ಕುಟುಂಬ ಯಮಕನಮರಡಿ ಕ್ಷೇತ್ರದಲ್ಲಿ ಅಭಿವೃದ್ಧಿಗೆ ಮುಂದಾಗಿರುವುದು ಹಾಸ್ಯಾಸ್ಪದವಾಗಿದೆ. ಯಾವುದೇ ದುರುದ್ದೇಶ ಇಟ್ಟುಕೊಂಡು ಯಮಕನಮರಡಿ ಕ್ಷೇತ್ರದಲ್ಲಿ ದ್ವೇಷ ರಾಜಕಾರಣ ಮಾಡಿದರೆ ನಾವು ಸಹಿಸಲ್ಲ. ನಿಮಗೆ ಚುನಾವಣೆಯಲ್ಲಿ ತಕ್ಕ ಉತ್ತರ ನೀಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ರಾಜ್ಯದಲ್ಲಿ ವಾಲ್ಮೀಕಿ ಮೂರ್ತಿ ಪ್ರತಿಷ್ಠಾಪಣೆಗೆ ಎಲ್ಲಿಯೂ ಇನ್ನೂವರೆಗೆ ಯಾರು ವಿರೋಧಿಸಿಲ್ಲ. ಆದರೆ ಇಲ್ಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ ವಾಲ್ಮೀಕಿ ಮೂರ್ತಿ ಪ್ರತಿಷ್ಠಾಪಣೆ ವಿರೋಧ ಮಾಡುತ್ತಿದ್ದಾರೆ. ರಾಮನ ಹೆಸರಿನಲ್ಲಿ ರಾಜಕೀಯ ಮಾಡುವ ಬಿಜೆಪಿಯವರಿಗೆ ರಾಮನನ್ನು ಬೆಳಕಿಗೆ ತಂದ ವಾಲ್ಮೀಕಿ ಮಾತ್ರ ಬೇಡಾಗಿದ್ದಾರೆ. ಇದೇ ನಿಲುವು ಮುಂದುವರೆದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಕಿಡಿ ಕಾರಿದರು.
ದಲಿತ ಸಂಘರ್ಷ ಸಮಿತಿ (ಕಾದ್ರೋಳ್ಳಿ ಬಣ) ರಾಜ್ಯಾಧ್ಯಕ್ಷ ಚಂದ್ರಕಾಂತ್ ಕಾದ್ರೋಳ್ಳಿ ಮಾತನಾಡಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಯಾವುದೇ ಜಾತಿ ವಿರೋಧಿ ಅಲ್ಲ. ಅವರು ಬುದ್ದ, ಬಸವಣ್ಣ, ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರಗಳನ್ನು ಸಮಾಜಕ್ಕೆ ತಿಳಿಸುವ ಕೆಲಸ ಮಾಡುತ್ತಿದ್ದಾರೆ. ಅವರು ಹಿಂದುಳಿದ ಸಮಾಜ ಸೇರಿದಂತೆ ಎಲ್ಲಾ ಸಮಾಜಗಳನ್ನು ಒಗ್ಗೂಡಿಸಿಕೊಂಡು ಹೋಗುತ್ತಿದ್ದು, ಅವರ ವಿರುದ್ಧ ಷಡ್ಯಂತ್ರ ರೂಪಿಸಿ ಅವರ ಹೆಸರಿಗೆ ಧಕ್ಕೆ ತರು ಕೆಲಸ ಮಾಡಿದರೆ ರಾಜ್ಯಾದ್ಯಂತ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಕರ್ನಾಟಕಾ ವಾಲ್ಮೀಕಿ ವೇದಿಕೆ ರಾಜ್ಯ ಸಂಚಾಲಕ ವಿಜಯ ತಳವಾರ, ದಲಿತ ಸಂಘಟನೆಗಳ ಮುಖಂಡರಾದ ಕರೆಪ್ಪ ಗುಡ್ಡೇನ್ನೆವರ್, ವಿಠ್ಠಲ ಮಾದರ, ಕರೆಪ್ಪ ಗುಡ್ಡೆನ್ನವರ್, ಸುರೇಶ ಗವನ್ನವರ್, ಬಸವರಾಜ ಲಗಮ್ಮನ್ನವರ್, ಮಾರುತಿ ನಾಯ್ಕ, ಅಡಿವೆಪ್ಪ ಕರೆನ್ನವರ್, ಭಿಮರಾವ್ ಕಳ್ಳಿಮನಿ, ಮಹಾಲಿಂಗ ಗಗ್ಗರಿ, ಮೀಲಿಂದ್ ಐಹೊಳೆ, ಕುಮಾರ ತಳವಾರ, ಶಶಿಕಾಂತ, ರಮೇಶ ತಳವಾರ, ಕಲ್ಲಪ್ಪ ಹುಣಸಿಗಿಡದ, ಸಂತ್ರಾಮ ತಳವಾರ, ತುಕಾರಾಮ ಮಾದರ,ಈರಪ್ಪ, ಹರೀಶ್ ಸೇರಿದಂತೆ ವಾಲ್ಮೀಕಿ ಹಾಗೂ ದಲಿತ ಸಂಘಟನೆಗಳ ಕಾರ್ಯಕರ್ತರು, ಶಹಾಬಂದರ, ಇಸ್ಲಾಂಪೂರ ಗ್ರಾಮದ ಹಲವು ಗ್ರಾಮಸ್ಥರು ಇದ್ದರು.