ಹಾಸನ: ಅಪಘಾತದಲ್ಲಿ ಮೃತಪಟ್ಟ ನೌಕರನ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ನಗರದ ಎಂ.ಜಿ. ರಸ್ತೆಯಲ್ಲಿರುವ ಜಿಯೋ ಡಿಜಿಟಲ್ ಲೈಫ್ ಕಚೇರಿ ಎದುರು ಮಂಗಳವಾರ ಶವವಿಟ್ಟು ಮೃತನ ಸಂಬಂಧಿಕರು ಧರಣಿ ನಡೆಸಿದರು.
ತಾಲ್ಲೂಕಿನ ಸಾಲಗಾಮೆ ಹೋಬಳಿಯ ಸುಂಡಳ್ಳಿ ಗ್ರಾಮದ ಸ್ವಾಮಿ (33) ಮೃತ ವ್ಯಕ್ತಿ. ಹನ್ನೊಂದು ವರ್ಷಗಳಿಂದ ಅರಸೀಕೆರೆ ತಾಲ್ಲೂಕಿನ ಬಾಣವಾರ ಹಾಗೂ ಜಾವಗಲ್ ಹೋಬಳಿಯ ಟವರ್ ಟೆಕ್ನಿಷಿಯನ್ ಆಗಿ ಸ್ವಾಮಿ ಕೆಲಸ ಮಾಡುತ್ತಿದ್ದರು.
ಜಾವಗಲ್ನಲ್ಲಿ ಸೋಮವಾರ ರಾತ್ರಿ ಕೆಲಸ ಟವರ್ ರಿಪೇರಿ ಕೆಲಸ ಮುಗಿಸಿ, ವಾಪಸ್ ಬೈಕ್ನಲ್ಲಿ ಸ್ವಾಮಿ ಹಿಂತಿರುಗುತ್ತಿದ್ದ ವೇಳೆ ಕಾರು ಡಿಕ್ಕಿ ಹೊಡೆದು, ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಅರಸೀಕೆರೆ ತಾಲ್ಲೂಕು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಸಂಬಂಧಿಕರು ಮೃತದೇಹವನ್ನು ಮಂಗಳವಾರ ಅಂಬುಲೆನ್ಸ್ ನಲ್ಲಿ ತಂದು ಜಿಯೋ ಕಚೇರಿ ಎದುರು ಧರಣಿ ನಡೆಸಿದರು.
ಸ್ವಾಮಿ ಜಿಯೋ ಸಂಸ್ಥೆಯಲ್ಲಿ ಕೆಲಸ ಮಾಡಿದ್ದಕ್ಕೆ ಸೂಕ್ತ ದಾಖಲೆ ನೀಡಬೇಕು. ಕಂಪನಿ ಅಧಿಕಾರಿಗಳು ಮಾತು ನೀಡಿದಂತೆ ವಿಮೆ ಪರಿಹಾರ ಹಾಗೂ ತಕ್ಷಣಕ್ಕೆ ಒಂದು ಲಕ್ಷ ರೂಪಾಯಿ ಪರಿಹಾರ ನೀಡಬೇಕು’ ಎಂದು ಪಟ್ಟು ಹಿಡಿದರು.
ಕಚೇರಿಯ ಮೊದಲ ಮಹಡಿಯಲ್ಲಿ ಕಂಪನಿ ನೌಕರರ ಜತೆ ಮೃತನ ಸಂಬಂಧಿಕರು ಸಂಜೆ ವರೆಗೂ ಮಾತುಕತೆ ನಡೆಸಿದರೂ ನಿರ್ಧಾರಕ್ಕೆ ಬರಲು ಆಗಲಿಲ್ಲ. ಇದರಿಂದ ಬೇಸತ್ತು ಕಚೇರಿಯ ಬೀಗವನ್ನು ಕಲ್ಲಿನಿಂದ ಒಡೆಯಲು ಮುಂದಾದರು.
ಕೆ.ಆರ್.ಪುರಂ ಠಾಣೆ ಇನ್ಸ್ಪೆಕ್ಟರ್ ಕೃಷ್ಣರಾಜು ಹಾಗೂ ಸಿಬ್ಬಂದಿ ಲಘು ಲಾಠಿ ಪ್ರಹಾರ ನಡೆಸಿ ಗುಂಪು ಚದುರಿಸಿದರು. ಸ್ವಾಮಿ ಸಂಬಂಧಿಕರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.
‘ಶಾಂತ ರೀತಿಯಲ್ಲಿ ಪರಿಹಾರ ಕೇಳಬೇಕು. ಕಚೇರಿ ಬೀಗ ಮುರಿದು ಗಲಾಟೆ ಮಾಡಲು ಅವಕಾಶ ನೀಡುವುದಿಲ್ಲ’ ಎಂದು ಕೃಷ್ಣರಾಜು ಎಚ್ಚರಿಕೆ ನೀಡಿದರು.
‘ಮೃತ ನೌಕರನ ಕುಟುಂಬಕ್ಕೆ ಪರಿಹಾರ ನೀಡುವ ನಿರ್ಧಾರವನ್ನು ಮಂಗಳೂರಿನಲ್ಲಿರುವ ಮುಖ್ಯ ಕಚೇರಿ ಅಧಿಕಾರಿಗಳು ತೆಗೆದುಕೊಳ್ಳಬೇಕು. ಇದು ಶಾಖಾ ಕಚೇರಿ ಆಗಿರುವುದರಿಂದ ನಮಗೆ ಯಾವುದೇ ಅಧಿಕಾರ ಇಲ್ಲ’ಎಂದು ಶಾಖಾ ಕಚೇರಿ ನೌಕರ ಶಾಮಲ್ ತಿಳಿಸಿದರು.
ಸ್ವಾಮಿ ಅವರ ತಂದೆ ಸಣ್ಣೇಗೌಡ, ತಾಯಿ ಕಮಲಮ್ಮ, ಪತ್ನಿ ಬಿಂದು ಅವರನ್ನು ಸಂಬಂಧಿಕರು ಸಂತೈಸುತ್ತಿದ್ದರು.
CKNEWSKANNADA / BRASTACHARDARSHAN CK NEWS KANNADA