ಗೋಕಾಕ: ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಲೂಕು ಮಟ್ಟದ ಉಚಿತ ಆರೋಗ್ಯ ಮೇಳವನ್ನು ವಿಧಾನ ಪರಿಷತ್ತ ಸದಸ್ಯರಾದ ಲಖನ್ ಜಾರಕಿಹೊಳಿ ಹಾಗೂ ರಾಜ್ಯ ಸಭಾ ಸದಸ್ಯರಾದ ಈರಣ್ಣಾ ಕಡಾಡಿ ಅವರು ಚಾಲನೆ ನೀಡಿದರು.
ದೇಶ ಹಾಗೂ ಸಮಾಜ ಸುಭದ್ರವಾಗಿರಲು ಆರೋಗ್ಯ ಬಹಳ ಮುಖ್ಯ. ಈ ನಿಟ್ಟಿನಲ್ಲಿ ಸರ್ಕಾರ ಸಮಾಜದ ಕಟ್ಟ ಕಡೆ ಮನುಷ್ಯನಿಗೂ ಸುಲಭವಾಗಿ ಆರೋಗ್ಯ ಸೇವೆ ನೀಡಲು ಮುಂದೆ ಬಂದಿದೆ. ಆಯುಷ್ಮಾನ ಭಾರತ ಸೇರಿದಂತೆ ಅನೇಕ ಕಾರ್ಯಕ್ರಮದ ಮೂಲಕ ಜನರಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆ ವ್ಯವಸ್ಥೆ ಮಾಡಿದೆ’ ಎಂದು ತಿಳಿಸಿದರು.
ರಾಷ್ಟ್ರೀಯ ಆರೋಗ್ಯ ಅಭಿಯಾನ ಅಡಿಯಲ್ಲಿ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಜಿಲ್ಲಾಡಳಿತ , ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಬೆಳಗಾವಿ, ಅಪರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಚಿಕ್ಕೋಡಿ,ತಾಲೂಕು ಆಡಳಿತ ಗೋಕಾಕ , ತಾಲೂಕು ಪಂಚಾಯಿತಿ, ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಆಯುಷ್ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ನಗರದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ತಾಲೂಕು ಮಟ್ಟದ ಉಚಿತ ಆರೋಗ್ಯ ಮೇಳ ಹಾಗೂ ರಾಷ್ಟ್ರೀಯ ಕಾರ್ಯಕ್ರಮಗಳ ಜಾಗೃತಿ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಜಯಾನಂದ ಹುಣ್ಣಚ್ಯಾಳಿ, ಉಪಾಧ್ಯಕ್ಷ ಬಸವರಾಜ ಆರೆನ್ನವರ, ತಹಶೀಲ್ದಾರ್ ಪ್ರಕಾಶ್ ಹೊಳ್ಳಪ್ಪಗೋಳ, ತಾಲೂಕು ವೈದ್ಯಾಧಿಕಾರಿ ಮುತ್ತನ ಕೊಪ್ಪದ, ಡಾ ರವೀಂದ್ರ ಅಂಟಿನ್, ಹಾಗೂ ಅನೇಕ ಗಣ್ಯರು ಭಾಗವಹಿಸಿದ್ದರು.