ಶಿವಮೊಗ್ಗ: ಮಠಗಳ ಅನುದಾನಕ್ಕೆ ಸಂಬಂಧಿಸಿದಂತೆ ಕಮಿಷನ್ ಪಡೆಯುವುದು ನಡೆಯುತ್ತಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಸೋಮವಾರ ಮಾತನಾಡಿದ ಅವರು, ಮಠಗಳ ಅನುದಾನದಲ್ಲೂ ಕಮಿಷನ್ ಕೇಳಲಾಗುತ್ತಿದೆ ಎಂಬುದೆಲ್ಲ ಸುಳ್ಳು, ಆ ಬಗ್ಗೆ ನಿರ್ದಿಷ್ಟವಾಗಿ ದೂರು ಕೊಟ್ಟರೆ ಅಂತಹವರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದರು.
ಮಠಗಳ ಅನುದಾನದಲ್ಲೂ ಕಮಿಷನ್ ಕೇಳಲಾಗುತ್ತಿದೆ ಎಂದು ದಿಂಗಾಲೇಶ್ವರ ಸ್ವಾಮೀಜಿಯವರು ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ಹಾಗೆ ಕಮಿಷನ್ ಕೇಳಿದ್ದು ಯಾರು ಅಂತ ಸ್ವಾಮೀಜಿಯವರು ಹೇಳಲಿ, ಅಂಥವರ ಮೇಲೆ ನಾವು ಕ್ರಮ ಕೈಗೊಳ್ಳಲಿಲ್ಲ ಅಂದ್ರೆ ಹೇಳಿ ಎಂದು ತಿಳಿಸಿದರು.
ಗೃಹ ಸಚಿವರಾಗಲು ಜ್ಞಾನೇಂದ್ರ ಅರ್ಹರಲ್ಲ ಎಂಬ ಎಂ.ಬಿ.ಪಾಟೀಲ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಫಿಟ್-ಅನ್ಫಿಟ್ ಎಂಬ ಬಗ್ಗೆ ಅವರ ಸರ್ಟಿಫಿಕೇಟ್ ಅವಶ್ಯಕತೆ ಇಲ್ಲ. ಸಿದ್ದರಾಮಯ್ಯ ಅವರ ಆಡಳಿತದ ಕಾಲದಲ್ಲಿ ಏನಾಗಿತ್ತು, ಗೃಹ ಸಚಿವರನ್ನು ಡಮ್ಮಿ ಮಾಡಿದ್ದರು ಎಂದರು.
ಆಗ ಗೃಹ ಇಲಾಖೆಯನ್ನು ಒಬ್ಬ ನಿವೃತ್ತ ಪೊಲೀಸ್ ಅಧಿಕಾರಿಯ ಕೈಯಲ್ಲಿ ಕೊಟ್ಟಿದ್ದರು. ಒಂದೊಂದು ಪೋಸ್ಟ್ಗೂ ಏಜೆಂಟರನ್ನು ನೇಮಕ ಮಾಡಿದ್ದರು, ನನ್ನ ಅಧಿಕಾರಾವಧಿಯಲ್ಲಿ ಅವೆಲ್ಲ ಇದೆಯಾ? ಎಂದು ಗೃಹಸಚಿವರು ಹೇಳಿದ್ದಾರೆ.