ಬೆಂಗಳೂರು : ರಾಜ್ಯದ ವಿವಿಧೆಡೆ ಅಬ್ಬರಿಸುತ್ತಿರುವ ಮಳೆ, ಮುಂದಿನ 48 ಗಂಟೆಗಳು ಮತ್ತಷ್ಟು ಬಿರುಸುಗೊಳ್ಳಲಿದೆ. ಕರಾವಳಿಯ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಮತ್ತು ಹಾಸನದಲ್ಲಿ ಜುಲೈ 19, 20 ರಂದು ಅತಿ ಹೆಚ್ಚು ಮಳೆಯಾಗಲಿದೆ. ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.
ಈ ವೇಳೆ 204 ಮಿಮೀ. ಮಳೆಯಾಗುವ ಸಾಧ್ಯತೆಯಿದೆ. ಅಲ್ಲದೆ, ಈ ಭಾಗಗಳಲ್ಲಿ ಈಗಾಗಲೇ ಎಡೆಬಿಡದೆ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಸಮುದ್ರಕ್ಕೆ ಮೀನುಗಾರರು ಇಳಿಯದಂತೆ ಹಾಗೂ ಸ್ಥಳೀಯ ನಿವಾಸಿಗಳಿಗೆ ಎಚ್ಚರಿಕೆಯಿಂದಿರುವಂತೆ ಇಲಾಖೆ ತಿಳಿಸಿದೆ.
ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ದಾವಣಗೆರೆಯಲ್ಲಿ ಮುಂದಿನ 48 ಗಂಟೆ ಆರೆಂಜ್ ಅಲರ್ಟ್ ಇರಲಿದೆ.
ಬೀದರ್, ಕಲಬುರಗಿ, ಕೊಪ್ಪಳ, ವಿಜಯಪುರ, ಯಾದಗಿರಿ, ಬಳ್ಳಾರಿ, ಚಾಮರಾಜನಗರ, ಚಿತ್ರದುರ್ಗ ಮತ್ತು ಮೈಸೂರಿನಲ್ಲಿ ಮುಂದಿನ ಎರಡು ದಿನ ಯೆಲ್ಲೋ ಅಲರ್ಟ್ ಇರಲಿದೆ. ಮೂರು ದಿನಗಳಿಂದ ಬೆಂಗಳೂರಿನಲ್ಲಿ ಉತ್ತಮ ಮಳೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಮಳೆಯಾಗಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.