ಬೆಂಗಳೂರು, ಜು.21- ಕಳೆದ ಎಂಟತ್ತು ದಿನಗಳಿಂದ ರಾಜ್ಯದ ಹಲವೆಡೆ ಬೀಳುತ್ತಿರುವ ಮಳೆ ಇದೇ ರೀತಿ ಇನ್ನೂ ಒಂದು ವಾರ ಕಾಲ ಮುಂದುವರಿಯುವ ಮುನ್ಸೂಚನೆಗಳಿವೆ. ಮುಂಗಾರು ಚೇತರಿಕೆಯಾಗಿದ್ದು, ಕಳೆದ ಒಂದು ವಾರದಲ್ಲಿ ರಾಜ್ಯದಲ್ಲಿ ಉತ್ತಮ ಮಳೆಯಾಗಿದೆ. ಇದರಿಂದ ಹಲವು ಜಿಲ್ಲೆಗಳಲ್ಲಿ ಮುಂಗಾರು ಹಂಗಾಮಿನ ಮಳೆ ಕೊರತೆ ನಿವಾರಣೆಯಾಗಿದೆ.
ಕಳೆದ ಎರಡು ದಿನಗಳಿಂದ ರಾಜ್ಯದಲ್ಲಿ ಮಳೆ ಪ್ರಮಾಣ ಇಳಿಕೆಯಾಗಿದೆ. ಆದರೂ ಮೋಡ ಕವಿದ ವಾತಾವರಣ ಮುಂದುವರಿದಿದ್ದು, ಬೆಂಗಳೂರು ಸೇರಿದಂತೆ ರಾಜ್ಯದ ಒಳನಾಡಿನ ಹಲವೆಡೆ ಆಗಾಗ್ಗೆ ಹಗುರದಿಂದ ಸಾಧಾರಣ ಮಳೆಯಾಗುತ್ತಿದೆ.
ಕಳೆದ ಒಂದು ವಾರದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದರೂ ಕರಾವಳಿ, ಮಲೆನಾಡು ಹಾಗೂ ಅರೆಮಲೆನಾಡು ಭಾಗಗಳಲ್ಲಿ ಮುಂಗಾರು ಹಂಗಾಮಿನ ಮಳೆ ವಾಡಿಕೆಗಿಂತ ಕಡಿಮೆಯಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಸಂಸ್ಥಾಪಕ ಹಾಗೂ ನಿವೃತ್ತ ವಿಶೇಷ ನಿರ್ದೇಶಕ ವಿ.ಎಸ್.ಪ್ರಕಾಶ್ ಹೇಳಿದರು.
ಜುಲೈ 1ರಿಂದ ನಿನ್ನೆಯವರೆಗೆ ಮಲೆನಾಡಿನಲ್ಲಿ ಶೇ.30, ಕರಾವಳಿಯಲ್ಲಿ ಶೇ.20ರಷ್ಟು ಮಳೆ ಕೊರತೆಯಾಗಿದೆ.
ಆದರೆ, ರಾಜ್ಯದಲ್ಲಿ ವಾಡಿಕೆಗಿಂತ ಶೇ.3ರಷ್ಟು ಹೆಚ್ಚು ಮಳೆಯಾಗಿದೆ ಎಂದು ಅವರು ತಿಳಿಸಿದರು. ಜುಲೈ ಮೊದಲ ವಾರದವರೆಗೂ ರಾಜ್ಯದಲ್ಲಿ ಶೇ.15 ರಿಂದ 16ರಷ್ಟು ಮುಂಗಾರು ಮಳೆ ಕೊರತೆ ಇದ್ದು, ಇತ್ತೀಚೆಗೆ ಬಿದ್ದ ಉತ್ತಮ ಮಳೆಯಿಂದಾಗಿ ಮಳೆ ಕೊರತೆ ನಿವಾರಣೆಯಾಗಿದೆ. ಆದರೆ, ಜೂನ್ 1 ರಿಂದ ಜುಲೈ 20ರ ವರೆಗಿನ ಅವಧಿಯಲ್ಲಿ ಶಿವಮೊಗ್ಗದಲ್ಲಿ ಶೇ.23, ಚಿಕ್ಕಮಗಳೂರು ಶೇ.22, ದಕ್ಷಿಣ ಕನ್ನಡ ಶೇ.28, ಕೊಡಗು ಶೇ.31, ಹಾವೇರಿ ಶೇ.12, ಹಾಸನ ಶೇ.14ರಷ್ಟು ವಾಡಿಕೆಗಿಂತ ಕಡಿಮೆ ಮಳೆಯಾಗಿದೆ.
ಒಳನಾಡಿನಲ್ಲಿ ಸಾಧಾರಣ ಪ್ರಮಾಣದ ಮಳೆ ಮುಂದುವರಿದಿದ್ದು, ಕೃಷಿ ಚಟುವಟಿಕೆಗಳಿಗೆ ಹೆಚ್ಚು ಅನುಕೂಲವಾಗಿದೆ. ಕೊಡಗು ಹಾಗೂ ಮಲೆನಾಡು ಭಾಗಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿರುವುದರಿಂದ ಜಲಾಶಯಗಳ ಒಳ ಹರಿವು ನಿರೀಕ್ಷಿತ ಪ್ರಮಾಣದಲ್ಲಿ ಹೆಚ್ಚಾಗಿಲ್ಲ ಎಂದು ಅವರು ಹೇಳಿದರು. ಉತ್ತರ ಕರ್ನಾಟಕ ಭಾಗದಲ್ಲೂ ಶೇ.9ರಷ್ಟು ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಉಡುಪಿ ಜಿಲ್ಲೆಯಲ್ಲಿ ಶೇ.14ರಷ್ಟು ಕೊರತೆ ಈ ಅವಧಿಯಲ್ಲಿ ಕಂಡುಬಂದಿದೆ. ಹವಾ ಮುನ್ಸೂಚನೆ ಪ್ರಕಾರ ಮೋಡ ಕವಿದ ವಾತಾವರಣ ಹೆಚ್ಚು ಕಡಿಮೆ ಇನ್ನೂ ಎರಡು ವಾರ ಮುಂದುವರಿಯಲಿದೆ.
ಮಲೆನಾಡು ಹಾಗೂ ಕರಾವಳಿ ಭಾಗಗಳಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾಗುವ ಸಾಧ್ಯತೆಗಳಿದ್ದು, ರಾಜ್ಯದ ಒಳನಾಡಿನ ಬಹುತೇಕ ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಬಹುದು. ಉತ್ತರ ಒಳನಾಡಿನಲ್ಲಿ ಸಾಧಾರಣ ಮಳೆಯಾಗುವ ಮುನ್ಸೂಚನೆಗಳಿವೆ. ಜುಲೈ 28ರ ವರೆಗೂ ಮಳೆ ಪರಿಸ್ಥಿತಿ ಹೆಚ್ಚು ಕಡಿಮೆ ಇದೇ ರೀತಿ ಮುಂದುವರಿಯುವ ಸಾಧ್ಯತೆಗಳಿವೆ ಎಂದು ಪ್ರಕಾಶ್ ತಿಳಿಸಿದರು.