Breaking News

ಕರಾವಳಿ ಭಾರಿ ಮಳೆ, ಗುಡ್ಡ ಕುಸಿತ ರೈಲು ಸಂಚಾರಕ್ಕೆ ತಡೆ!


ಪುತ್ತೂರು : ಕರಾವಳಿಯಾದ್ಯಂತ ಇಂದು ಕೂಡಾ ಭಾರೀ ಮಳೆ‌ ಮುಂದುವರಿದಿದೆ. ದಕ್ಷಿಣಕನ್ನಡ ಜಿಲ್ಲೆಯ ಪ್ರಮುಖ ನದಿಗಳಾದ ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದ್ದು, ಹಲವು ಕಡೆಗಳಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಕುಮಾರಪರ್ವತ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣ ಕುಮಾರಧಾರಾ ನದಿಯು ಧುಮ್ಮಿಕ್ಕಿ ಹರಿಯಲಾರಂಭಿಸಿದ್ದು, ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಕುಮಾರಧಾರಾ ಸ್ನಾನಘಟ್ಟ ಸಂಪೂರ್ಣ ಮುಳುಗಡೆಯಾಗಿದೆ.‌ ನಿನ್ನೆ ಈ ಭಾಗದಲ್ಲಿ ಮಳೆಯ ಪ್ರಮಾಣ ಕೊಂಚ ಇಳಿಮುಖವಾದ ಕಾರಣ ಮುಳುಗಡೆಯಾಗಿದ್ದ ಕುಮಾರಧಾರಾ ಸ್ನಾನಘಟ್ಟದಲ್ಲಿ ನೀರಿನ ಮಟ್ಟ ಇಳಿದಿತ್ತು. ಆದರೆ ಮಧ್ಯಾಹ್ನದ ಬಳಿಕ ಮತ್ತೆ ನೀರಿನ ಹರಿವು ಹೆಚ್ಚಾದ ಕಾರಣ ಸ್ನಾನಘಟ್ಟ ಸೇರಿದಂತೆ ಭಕ್ತಾಧಿಗಳ ಲಗೇಜ್ ರೂಂ ಕೂಡಾ ಮುಳುಗಡೆಯಾಗಿತ್ತು.

ಇಂದು ಮತ್ತೆ ಈ ಭಾಗದಲ್ಲಿ ಭಾರೀ ಮಳೆ ಸುರಿದ ಕಾರಣ ಸ್ನಾನಘಟ್ಟ ಮತ್ತೆ ಸಂಪೂರ್ಣ ಮುಳುಗಡೆಯಾಗಿದೆ. ವೀಕೆಂಡ್ ನಲ್ಲಿ ಕ್ಷೇತ್ರಕ್ಕೆ ಭೇಟಿ ನೀಡಿರುವ ಭಕ್ತಾಧಿಗಳಿಗೆ ಸ್ನಾನಘಟ್ಟ ಮುಳುಗಡೆಯಾದ ಕಾರಣ ಭಕ್ತಾಧಿಗಳಿಗೆ ಸ್ನಾನಘಟ್ಟದಲ್ಲಿ ತೀರ್ಥಸ್ನಾನ ಮಾಡಲು ತೊಂದರೆಯಾಗಿದೆ. ನದಿಯಲ್ಲಿ ಮುಳುಗಿ ತೀರ್ಥಸ್ನಾ‌ನ ಮಾಡುವ ಬದಲು ಪ್ರವಾಹದ ನೀರಿನಲ್ಲಿ ಭಕ್ತಾಧಿಗಳು ತೀರ್ಥಸ್ನಾನವನ್ನು ನೆರವೇರಿಸುತ್ತಿದ್ದಾರೆ. ಹೊಸ್ಮಠದ ಹಳೆ ಸೇತುವೆಯೂ ಮುಳುಗಡೆಯಾಗಿದ್ದು, ಗುಂಡ್ಯಾ ಹೊಳೆಯೂ ತುಂಬಿ ಹರಿಯಲಾರಂಭಿಸಿದೆ.

ನೇತ್ರಾವತಿ ನದಿಯಲ್ಲೂ ನೀರಿನ ಹರಿವು ಹೆಚ್ಚಾಗಿದ್ದು, ಚಾರ್ಮಾಡಿ ಸೇರಿದಂತೆ ಬೆಳ್ತಂಗಡಿ ತಾಲೂಕಿನಾದ್ಯಂತ ಭಾರೀ ಮಳೆಯಾಗುತ್ತಿರುವುದರಿಂದ ನೇತ್ರಾವತಿ ನದಿಯೂ ಪ್ರವಾಹದ ಮಟ್ಟದಲ್ಲಿ ಹರಿಯಲಾರಂಭಿಸಿದೆ. ಕುಮಾರಧಾರಾ ಹಾಗೂ ನೇತ್ರಾವತಿ ನದಿ ಸಂಗಮ ಕ್ಷೇತ್ರವಾದ ಉಪ್ಪಿನಂಗಡಿಯಲ್ಲಿ ನದಿ ನೀರಿನ ಮಟ್ಟ ಏರಿಕೆಯಾಗಿದ್ದು, 27.4 ಅಡಿ ಮಟ್ಟದಲ್ಲಿ ಹರಿಯುತ್ತಿದೆ. ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿಯ ಅಪಾಯದ ಮಟ್ಟ 30 ಅಡಿ ಗಳಾಗಿದೆ. ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ಬಳಿ ಎರಡು ಬೋಟ್ ಗಳನ್ನು ಸನ್ನದ್ಧ ಸ್ಥಿತಿಯಲ್ಲಿ ನಿಲ್ಲಿಸಲಾಗಿದ್ದು, ಮುಳುಗಡೆಯಾಗುವ ನದಿಪಾತ್ರದ ಜನರನ್ನು ಸುರಕ್ಷಿತ ಸ್ಥಳಗಳಿಗೆ ತಲುಪಿಸಲು ಈ ಬೋಟ್ ಗಳನ್ನು ಬಳಸಲಾಗುತ್ತದೆ. ಸ್ಥಳದಲ್ಲಿ ಕಂದಾಯ ಇಲಾಖೆಯ ಸಿಬ್ಬಂದಿಗಳು ಸೇರಿದಂತೆ ಗೃಹರಕ್ಷಕದಳದ ಸಿಬ್ಬಂದಿಗಳನ್ನೂ ನಿಯೋಜಿಸಲಾಗಿದೆ.

ಭಾರೀ ಮಳೆಗೆ ರೈಲು ಸಂಚಾರ ವತ್ಯಯವಾಗಿದ್ದು, ಮಂಗಳೂರು- ಬೆಂಗಳೂರು ರೈಲು ಮಾರ್ಗದ ಪುತ್ತೂರಿನ ವೀರಮಂಗಲದ ಗಡಿಪಿಲ ಎಂಬಲ್ಲಿ ರೈಲು ಹಳಿಗೆ ಗುಡ್ಡ ಜರಿದು ರೈಲು ಸಂಚಾರ ವೆತ್ಯಯವಾಗಿತ್ತು. ಗಾಂಧೀಧಾಮ್- ನಾಗರಕೊಯಿಲ್ ರೈಲು ಈ ಪ್ರದೇಶದಲ್ಲಿ ಸಂಚರಿಸುತ್ತಿರುವ ಸಂಧರ್ಬದಲ್ಲೇ ಈ ಗುಡ್ಡ‌ ಕುಸಿದಿದ್ದು, ಭಾರೀ ಅನಾಹುತವೊಂದು ತಪ್ಪಿದೆ. ಗುಡ್ಡದ ಮಣ್ಣು ರೈಲಿನ ಗಾರ್ಡ್ ಗೆ ತಗುಲಿದ ಕಾರಣ ರೈಲಿಗೆ ಕೊಂಚ ಹಾನಿಯಾಗಿದೆ.

ರೈಲು ಹಳಿಯಿಂದ ಮಣ್ಣು ತೆರವುಗೊಳಿಸುವ ತನಕ ರೈಲು ದಾರಿ ಮಧ್ಯೆಯೇ ಉಳಿದಿದ್ದು, ಮಣ್ಣು ತೆರವುಗೊಂಡ ಬಳಿಕ ಪ್ರಯಾಣ ಮುಂದುವರಿಸಿದೆ. ಪುತ್ತೂರಿನಿಂದ ಪಾಜಾಜೆ ಸಂಪರ್ಕಿಸುವ ರಸ್ತೆಯ ಚೇಳ್ಯಡ್ಕ ಎಂಬಲ್ಲಿನ ಸೇತುವೆ ಇಂದು ಕೂಡಾ ಮುಳುಗಡೆಯಾಗಿದ್ದು, ಈ ರಸ್ತೆ ಮೂಲಕ ಸಾಗುವ ಪ್ರಯಾಣಿಕರು ಪರ್ಯಾಯ ರಸ್ತೆಯ ಮೂಲಕ ಸುತ್ತುಬಳಸಿ ತಮ್ಮ ಅಗತ್ಯ ಕೆಲಸಗಳನ್ನು ನಿರ್ವಹಿಸುವಂತಾಗಿದೆ. ಮಳೆ ಇನ್ನೂ ನಾಲ್ಕು ದಿನಗಳ ಕಾಲ ಮುಂದುವರಿಯುವ ಸಾಧ್ಯತೆಯಿದ್ದು, ತಗ್ಗು ಪ್ರದೇಶದ ಜನರನ್ನು ಸುರಕ್ಷಿತವಾಗಿ ಇರುವಂತೆ ಜಿಲ್ಲಾಡಳಿತ ಸೂಚಿಸಿದೆ.


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ