ಗೋಕಾಕ: ತಾಲೂಕಿನ ಗುಜನಾಳ, ವಲಯ ಅರಣ್ಯಾಧಿಕಾರಿಗಳ ಕಚೇರಿ ಅಕ್ರಮ ಚಟುವಟಿಕೆಗಳ ಅಡ್ಡೆಯಾಗಿದ್ದು ಕಚೇರಿಯ ಆವರಣ ಭಾಗಶಃ ರಾಶಿ ರಾಶಿ ಸಾರಾಯಿ ಬಾಟಲಿ ಮತ್ತು ಕಸದಿಂದ ತುಂಬಿ ತುಳುಕುತ್ತಿದೆ.
ಪರಿಸರ ಸಂರಕ್ಷಣೆ ಮಾಡಲು ಮುಂದಾಗಬೇಕಾದ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಇಂದು ಅರಣ್ಯ ಪ್ರದೇಶ ಮದ್ಯದ ಬಾಟಲಿಗಳಿಂದ ತುಂಬಿ ತುಳಕುತ್ತಿದೆ. ತಮ್ಮ ಕಚೇರಿಯನ್ನಾದರೂ ಸ್ವಚ್ಛತೆಯಿಂದಿಡಬೇಕಾದ ಇವರೇ ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿರುವುದು ಎಷ್ಟು ಸರಿ ಎಂದು ಗುಜನಾಳ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಹೌದು, ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಗೋಡೆಬರಹ ಬರೆಯಿಸುವ ಅಧಿಕಾರಿಗಳಿಗೆ ಪರಿಸರ ಸಂರಕ್ಷಣೆ ಅನ್ವಯವಾಗುತ್ತಿಲ್ಲ. ಗುಜನಾಳ ವಲಯ ಅರಣ್ಯಾಧಿಕಾರಿಗಳ ಕಚೇರಿಯಲ್ಲಿ ಕಸದ ರಾಶಿ ಬರುವವರನ್ನು ಸ್ವಾಗತಿಸುತ್ತಿದೆ.
ಸೊಳ್ಳೆಗಳು ಗೂಯಗುಟ್ಟುತ್ತಿವೆ. ಕಳೆದ ಎರಡು ವರ್ಷದಿಂದ ಕಚೇರಿಯ ಬಗ್ಗೆ ಅಧಿಕಾರಿಗಳು ಸಿಬ್ಬಂದಿ ವರ್ಗದವರು ನಿರ್ಲಕ್ಷಿಸುತ್ತ ಬಂದಿದ್ದು ರಾತ್ರಿ ವೇಳೆ ಎಲ್ಲ ರೀತಿಯ ಅಕ್ರಮ ಚಟುವಟಿಕೆಗಳು ಇಲ್ಲಿ ನಡೆಯುತ್ತಿವೆ.
ಕಿಡಿಗೇಡಿಗಳ ಎಣ್ಣೆ ಪಾರ್ಟಿಯ ಬಾಟಲಿಗಳ ರಾಶಿ, ಸಿಬ್ಬಂದಿಗಳ ಗುಟ್ಕಾ ಚೀಟಿಗಳು, ಸಿಗರೇಟ ಸೇದಿ ಬಿಸಾಡಿರುವ ಕಸ, ಟೆಟ್ರಾ ಪ್ಯಾಕ್ಗಳು, ಸ್ನಾಕ್ಸ್ ಉಪಯೋಗಿಸಿದ ಪ್ಲಾಸ್ಟಿಕ್ ಬಿಸಾಡಿದ್ದಾರೆ.
ಗುಜನಾಳ ವಲಯ ಅರಣ್ಯಾಧಿಕಾರಿಗಳ ಕಚೇರಿ ಹೊಸ ಕಟ್ಟಡದ ಮುಂದೆ ಮರದ ರೆಂಬೆಯೊಂದು ಬಿದ್ದಿದ್ದು ಅದನ್ನು ಸಹ ತೆರವುಗೊಳಿಸದ ಅಧಿಕಾರಿಗಳು, ಸಿಬ್ಬಂದಿಗಳು ಪ್ರಾಮಾಣಿಕವಾಗಿ ಹೇಗೆ ನಿಸರ್ಗ ರಕ್ಷಣೆ ಮಾಡುತ್ತಾರೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಕಚೇರಿಗೆ ಬಾರದ ಅರಣ್ಯಾಧಿಕಾರಿ:
ಕಳೆದ ಎರಡು ವರ್ಷಗಳಿಂದ ಗುಜನಾಳ ವಲಯ ಅರಣ್ಯಾಧಿಕಾರಿ ತಮ್ಮ ವಲಯ ವ್ಯಾಪ್ತಿಯಲ್ಲಿ ಸುತ್ತೋದು ಹಾಗೂ ಕಚೇರಿಗೆ ಬರುವುದು ಅಪರೂಪವಾಗಿದೆ. ಶಿರೂರ ಡ್ಯಾಂ ಈ ಪಕ್ಕದಲ್ಲಿರುವ ಈ ವಲಯದ ಸಸ್ಯ ಪಾಲನಾ ಕೇಂದ್ರಕ್ಕೂ ಇವರು ಆಗಮಿಸಲ್ಲ. ಸರಿಯಾಗಿ ಸಿಬ್ಬಂದಿಗೆ ತಿಳಿಹೇಳುವ ಕೆಲಸ ಮಾಡಿಲ್ಲ.
ಗುಜನಾಳ ವಲಯ ಅರಣ್ಯಾಧಿಕಾರಿ ವಲಯ ವ್ಯಾಪ್ತಿಗಿಂತ ಹೆಚ್ಚು ಬೆಳಗಾವಿ ನಗರದಲ್ಲಿ ಇರುತ್ತಾರೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.
ಕಟ್ಟಿಗೆಗಳ ಸ್ಥಳಾಂತರ ಯಾವಾಗ..?
ಗುಜನಾಳ ವಲಯ ಅರಣ್ಯ ಇಲಾಖೆ ಕಚೇರಿಯಲ್ಲಿ ಕಳೆದ ಕೆಲವು ವರ್ಷಗಳ ಹಿಂದೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಮರದ ಕಟ್ಟಿಗೆಗಳನ್ನು ಅರಣ್ಯ ಇಲಾಖೆ ವಶಪಡಿಸಿಕೊಂಡಿದ್ದು ವರುಷಗಳೇ ಕಳೆದರೂ ಹಲವಾರು ಅಧಿಕಾರಿಗಳು ವರ್ಗವಾದರೂ ಈವರೆಗೆ ಕೇರಿಯಿಂದ ಸ್ಥಳಾಂತರ ಮಾಡಿಲ್ಲ. ಸುಮಾರು ಒಂದು ಎಕರೆ ಪ್ರದೇಶದಲ್ಲಿರುವ ಕಚೇರಿಯ ಸುತ್ತ ಮರದ ದಿನ್ನೆ
ಒಟ್ಟಲಾಗಿದೆ. ಅದರ ಅಕ್ಕ-ಪಕ್ಕದಲ್ಲೇ ಸಾರಾಯಿ ಸೇವಿಸುವ ಕಿಡಿಗೇಡಿಗಳು ಸಾರಾಯಿ ಬಾಟಲಿ, ಪ್ಲಾಸ್ಟಿಕ್ ಎಸೆದು ಹೋಗುತ್ತಿದ್ದಾರೆ.
ತಮ್ಮ ಕಚೇರಿ ಸ್ವಚ್ಛತೆ ಮಾಡಿಕೊಳ್ಳದ ಅಧಿಕಾರಿಗಳು ಜನರಿಗೆ ಪರಿಸರ ಉಳಿಸುವಂತೆ ಜಾಥಾ ಮಾಡುತ್ತಾರೆ, ಇದೆಷ್ಟು ಸರಿ. ಕೂಡಲೇ ಈ ಕುರಿತು ಮೇಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಇಂತಹ ಬೇಜವಾಬ್ದಾರಿ ಅಧಿಕಾರಿಗಳ ಮೇಲೆ ಸೂಕ್ತ ಕ್ರಮಜರುಗಿಸಬೇಕು ಎಂಬುದು ಇಲ್ಲಿಯ ಪ್ರಜ್ಞಾವಂತ ನಾಗರಿಕರ ಆಗ್ರಹವಾಗಿದೆ.