ಗೋಕಾಕ: ಎಲ್ಲರೂ ಸಮನ್ವಯದಿಂದ ಇಲಾಖೆಯೊಂದಿಗೆ ಕೈ ಜೋಡಿಸಿ ಕಾರ್ಯನಿರ್ವಹಿಸಿದರೆ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕೊಂಡುಕೊಳ್ಳಲು ಸಾಧ್ಯ ಎಂದು ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ ಹೇಳಿದರು.
ಗುರುವಾರದಂದು ನಗರದ ತಾಲೂಕಾ ಪಂಚಾಯತ್ ಸಭಾಂಗಣದಲ್ಲಿ ತಾಲೂಕಾಡಳಿತ , ತಾಲೂಕಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವುಗಳ ಸಂಯುಕ್ತಾಶಯದಲ್ಲಿ ಗೋಕಾಕ ತಾಲೂಕಿನ ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗಗಳ ಜನರ ಯೋಗಕ್ಷೇಮ ಹಾಗೂ ಹಿತರಕ್ಷಣಾ ಕುಂದುಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸಭೆಯಲ್ಲಿ ಚರ್ಚೆಯಾದ ಎಲ್ಲಾ ವಿಷಯಗಳನ್ನು ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು.
ಸಮುದಾಯ ಸಮಸ್ಯೆ ಹಾಗೂ ವೈಯಕ್ತಿಕ ಸಮಸ್ಯೆಗೆ ಈ ಸಭೆಯ ಪೂರಕವಾಗಿದೆ. ಕೊರೋನಾ ಮಹಾಮಾರಿಯಿಂದ ಕಳೆದ ಒಂದು ವರ್ಷದಿಂದ ಸಭೆ ನಡೆಯದೆ ಸಮಸ್ಯೆಯಾಗಿದ್ದು, ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸಲು ಸೂಕ್ತ ವ್ಯವಸ್ಥೆ ಮಾಡಲಾಗುವುದು, ಸಭೆಗೆ ಹಾಜರ ಆಗದ ತಾಲೂಕಾ ಮಟ್ಟದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ ನೀಡಿ ಕ್ರಮ ಕೈಗೊಳ್ಳಲಾಗುವುದು.
ನೀರಾವರಿ ಇಲಾಖೆ ಸಂಬಂಧಪಟ್ಟ ಜಮೀನುಗಳು ಎಲ್ಲಿ ಅತಿಕ್ರಮಣವಾಗಿವೆ ಅವುಗಳನ್ನು ತೆರವುಗೊಳಿಸುವಂತೆ ಹೈಕೋರ್ಟ್ ಆದೇಶದಂತೆ ತಾಲೂಕಿನ ದೂಪದಾಳ ಗ್ರಾಮದ ಸರ್ವೇ ನಂ 120 ಮತ್ತು 121 ನೀರಾವರಿ ಇಲಾಖೆ ಸಂಬಂಧ ಪಟ್ಟ18 ಮನೆಗಳನ್ನು ತೆರವುಗೊಳಿಸಲಾಗಿದೆ ಇದಕ್ಕೂ ಪೂರ್ವದಲ್ಲಿ ಡಿ.ಸಿ ಮತ್ತು ಎಸ್.ಪಿ ಯವರೊಂದಿಗೆ ಸಮಗ್ರವಾಗಿ ಚರ್ಚಿಸಿ ಈ ತೆರವು ಕಾರ್ಯ ಮಾಡಲಾಗಿದೆ. ಹಿಂದೆ 2015 ರಿಂದ ಅತಿಕ್ರಮಣವಾದ ಜಮೀನನ್ನು ತೆರವು ಮಾಡುವ ಬಗ್ಗೆ ಚರ್ಚೆ ನಡೆದಿತ್ತು, 2018 ರಲ್ಲಿ ಅಲ್ಲಿ ವಾಸಿಸುವ ಪ್ರತಿಯೊಬ್ಬರಿಗೆ ವೈಯಕ್ತಿಕವಾಗಿ ನೋಟಿಸ ಮೂಲಕ ಸೂಚಿಸಲಾಗಿತ್ತು ತೆರವುಗೊಳ್ಳದ ಕಾರಣ ಕಾನೂನು ರೀತಿ ಕ್ರಮ ಕೈಗೊಳ್ಳಲಾಗಿದ್ದು, ತೆರವುಗೊಂಡ ಎಲ್ಲಾ ಜನರಿಗೆ ಪರ್ಯಾಯ ವ್ಯವಸ್ಥೆ ಮಾಡಲು ಉನ್ನತ ಅಧಿಕಾರಿಗೊಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಸರಕಾರಿ ಆಸ್ಪತ್ರೆ, ಪೊಲೀಸ ಇಲಾಖೆಗಳ ವಿರುದ್ಧ ದೂರಗಳ ಸುರಿಮಳೆ ಕೇಳಿ ಬಂದವು ದೂರುಗಳನ್ನು ಆಲಿಸಿದ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ ಅವರು ತಪ್ಪಿಸ್ಥ ಅಧಿಕಾರಗಳ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಸಭೆಯ ಮೊದಲು ಅಗಲಿದ ಹಿರಿಯ ಸಾಹಿತಿ ದಿ. ಸಿದ್ದಲಿಂಗಯ್ಯ ಅವರ ಆತ್ಮಶಾಂತಿಗಾಗಿ ಮೌನಾಚರಣೆ ನಡೆಸಿ ಗೌರವ ಸಲ್ಲಿಸಲಾಯಿತು.
ಸಭೆಯಲ್ಲಿ ಪೌರಾಯುಕ್ತ ಶಿವಾನಂದ ಹಿರೇಮಠ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಎಸ್.ವ್ಹಿ, ಕಲಪ್ಪನವರ, ಮುಖಂಡರಾದ ತಳದಪ್ಪ ಅಮ್ಮಣಗಿ, ವೀರಭದ್ರ ಮೈಲನ್ನವರ, ಅಜೀತ ಹರಿಜನ, ಗೋವಿಂದ ಕಳ್ಳಿಮನಿ ಸೇರಿದಂತೆ ಪರಿಶಿಷ್ಟ ಜಾತಿಯ ಮುಖಂಡರುಗಳು ಉಪಸ್ಥಿತರಿದ್ದರು.