ಗೋಕಾಕ : ತಾಲ್ಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಉದ್ಯೋಗ ನೀಡುವಂತೆ ಒತ್ತಾಯಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ನೇತೃತ್ವದಲ್ಲಿ ಕೂಲಿ ಕಾರ್ಮಿಕರು ಇಂದು ತಾಪಂ. ಕಚೇರಿ ಎದುರು ಧರಣಿ ಕುಳಿತು ಪ್ರತಿಭಟನೆ ನಡೆಸಿದರು.
ಗ್ರಾಮ ಪಂಚಾಯಿತಿಯಲ್ಲಿ ನರೇಗಾ ಕುರಿತು ಯಾವುದೇ ಮಾಹಿತಿ ನೀಡುತ್ತಿಲ್ಲ. ಅರ್ಜಿಗಳಿಗೆ ಸ್ವೀಕೃತಿ ನೀಡುವುದಿಲ್ಲ. ಕೂಲಿ ಕಾರ್ಮಿಕರು ಕೆಲಸ ನೀಡುವಂತೆ ಮನವಿ ಮಾಡಿಕೊಂಡರೆ, ಅರಣ್ಯ ಇಲಾಖೆ ಅಧಿಕಾರಿಗಳನ್ನು ಕೇಳಿ ಎಂಬ ಹಾರಿಕೆ ಉತ್ತರ ನೀಡುತ್ತಿದ್ದಾರೆ. ಇದರಿಂದ ಕೊರೊನಾ ಸೋಂಕಿನಿಂದ ಈಗಾಗಲೇ ಬದುಕಿ ಬೀದಿಗೆ ಬಂದಿದೆ. ಇಂತಹ ಸಂಕಷ್ಟದಲ್ಲಿ ಬಡವರ ಪರವಾಗಿ ನಿಲ್ಲಬೇಕಾದ ಗ್ರಾಮ ಪಂಚಾಯಿತಿ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಆರೋಪಿಸಿದರು.
ಕೂಡಲೇ ನಮಗೆ ಸರ್ಕಾರದ ನಿಯಮಗಳಂತೆ ಕೆಲಸ ನೀಡಬೇಕು. 3 ತಿಂಗಳಿಗೊಮ್ಮೆ ಕಾರ್ಮಿಕರ ಕುಂದು ಕೊರತೆ ಸಭೆ ನಡೆಸಬೇಕು ಎಂದು ಕೂಲಿ ಕಾರ್ಮಿಕರು ಒತ್ತಾಯಿಸಿದರು. ತಾಪಂ.ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಹೆಗ್ಗನಾಯಕ ಅವರಿಗೆ ಮನವಿ ಸಲ್ಲಿಸಿದರು.
ವಿ.ಎಸ್.ಹಿರೇಮಠ, ಎಂಆರ್.ಓಜಿ ಜಿ.ಪಿ.ಬನ್ನಿಬಾಗಿ, ಐ.ಸಿ.ಪಾಟೀಲ, ಶಿವನಗೌಡ ಪಾಟೀಲ, ಬಿ.ಐ.ಚಿಕ್ಕನಗೌಡ ಸೇರಿ ಅನೇಕ ಕೂಲಿ ಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.