ಘಟಪ್ರಭಾ: ಜುಲೈ 10ರಂದು ಬಕ್ರೀದ್ ಹಬ್ಬವು ಶಾಂತರೀತಿಯಿಂದ ಜರುಗುವಂತೆ ಮತ್ತು ಹಬ್ಬದ ಸಂದರ್ಭದಲ್ಲಿ ಅಹಿತಕರ ಘಟನೆ ಮತ್ತು ಯಾವುದೇ ರೀತಿಯ ಕಾಯ್ದೆ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು ಎಂದು ಘಟಪ್ರಭಾ ಪೋಲಿಸ್ ಠಾಣೆಯ ಸಿ ಪಿ ಐ ಶ್ರೀ ಶೈಲ ಬ್ಯಾಕೂಡ ಅವರು ಹೇಳಿದರು.
ಅವರು ಬಕ್ರಿದ್ ಹಬ್ಬದ ಆಚರಣೆಯ ಸಂದರ್ಭದಲ್ಲಿ ಅನಧೀಕೃತವಾಗಿ ಜಾನುವಾರುಗಳ ವಧೆ,ಜಾನುವಾರು ಸಾಗಾಣಿಕೆ ತಡೆಗಟ್ಟುವ ಕುರಿತಂತೆ ಪೋಲಿಸ್ ಠಾಣೆಯ ಸಭಾಂಗಣದಲ್ಲಿ ಜುಲೈ6ರಂದು ಸಂಜೆ ನಡೆದ ಪೂರ್ವ ಸಿದ್ಧತೆಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ 2020ರನ್ವಯ ಗೋಹತ್ಯೆ ಮಾಡುವುದನ್ನು ನಿಷೇಧಿಸಿದೆ. ಈ ಕಾಯ್ದೆಯನ್ವಯ ಎಲ್ಲ ವಯಸ್ಸಿನ ಆಕಳು, ಆಕಳ ಕರು, ಹೋರಿ, ಎತ್ತು ಅಲ್ಲದೆ 13 ವರ್ಷದೊಳಗಿನ ಎಮ್ಮೆ, ಕೋಣಗಳನ್ನು ಹತ್ಯೆ ಮಾಡುವಂತಿಲ್ಲ. ಹಾಗೂ ಉಚ್ಚ ನ್ಯಾಯಾಲಯದ ಆದೇಶದನ್ವಯ ಒಂಟಿಗಳನ್ನು ಕೂಡ ಬಕ್ರೀದ್ ಸಂದರ್ಭದಲ್ಲಿ ಹತ್ಯೆ ಮಾಡುವಂತಿಲ್ಲ. ಈ ನಿಟ್ಟಿನಲ್ಲಿ ಜುಲೈ 10ರಂದು ಜರುಗುವ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಯಾವುದೇ ರೀತಿಯ ಕಾಯ್ದೆ ಉಲ್ಲಂಘನೆಯಾಗದ ಹಾಗೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ (5 ಮಸೀದಿಯ) ಮುತವಲ್ಲಿಗಳಾದ ಶೌಕತ ಕಬ್ಬೂರ,ಇನೂಸ್ ಶೇಖ,ಮೊಹ್ಮದಸಾಬ ಮೋಮಿನ್, ಕ ಸಯ್ಯದ ಮುಸ್ತಾಕ ಖಾಜಿ, ಮುನ್ನಾ ಸೌದಾಗರ, ಕೋತಬುದ್ದಿನ ಕಡಲಗಿ, ಹೈದರಅಲಿ ಮನಿಯಾರ, ಸಲೀಮ ಕಬ್ಬೂರ, ಇಮ್ರಾನ ಬಟಕುರ್ಕಿ,ಅಕ್ಯೂಬ ಸಯ್ಯದ,ತೌಶೀಫ್ ಅತ್ತಾರ,ಜಮಾಲ ಸಯ್ಯದ,ದಸ್ತಗೀರ ದೇಸಾಯಿ, ಅಬ್ದುಲ ಪೆಂಡಾರಿ, ದಿಲಾವರ ಬಾಳೇಕುಂದ್ರಿ ಸೇರಿದಂತೆ ಘಟಪ್ರಭಾ, ಧುಪದಾಳ, ಶಿಂದಿಕುರಬೇಟ, ಸಂಗನಕೇರಿ ಗ್ರಾಮಗಳ ಮುಸ್ಲಿಂ ಸಮಾಜದ ಹಿರಿಯರು ಉಪಸ್ಥಿತರಿದ್ದರು.