Breaking News

ಬೆಳಗಾವಿ: ಸಾರ್ವಜನಿಕ ಗಣೇಶೋತ್ಸವ ಮಾರ್ಗಸೂಚಿ ಪ್ರಕಟ!


ಬೆಳಗಾವಿ,-ಜಿಲ್ಲೆಯಲ್ಲಿ ಕೋವಿಡ್-೧೯ ಸೋಂಕು ತೀವ್ರಗತಿಯಲ್ಲಿ ಹರಡುತ್ತಿರುವ ಪರಿಸ್ಥಿತಿಯನ್ನು ಪರಿಗಣಿಸಿ, ಕೋವಿಡ್-೧೯ ಸೋಂಕು ನಿಂದಾಗಿ ಸಂಭವಿಸಬಹುದಾದ ಅನಾಹುತಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಮತ್ತು ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ ಈ ವರ್ಷದ ಶ್ರೀ ಗಣೇಶೋತ್ಸವ ಹಬ್ಬವನ್ನು ಸಾರ್ವಜನಿಕ ಸ್ಥಳಗಳಲ್ಲಿ ಸಾರ್ವಜನಿಕ ಶ್ರೀ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸದೇ ಸರಳ ರೀತಿಯಲ್ಲಿ ಭಕ್ತಿಪೂರ್ವಕವಾಗಿ ಸಮೀಪದ ದೇವಸ್ಥಾನಗಳಲ್ಲಿ ಪ್ರತಿಷ್ಠಾಪಿಸುವುದು ಹಾಗೂ ಮನೆಯ ಶ್ರೀ ಗಣೇಶ ಮೂರ್ತಿಯನ್ನು ತಮ್ಮ ತಮ್ಮ ಮನೆಗಳಲ್ಲಿಯೇ ಪ್ರತಿಷ್ಠಾಪಿಸಿ ಆಚರಿಸಬೇಕು ಎಂದು‌ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಆದೇಶ ಹೊರಡಿಸಿದ್ದಾರೆ.

ಸಾರ್ವಜನಿಕರು, ದೇವಸ್ಥಾನಗಳ ಮಂಡಳಿಗಳು ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಮಂಡಳಿಗಳು ಈ ಕೆಳಕಂಡ ಎಲ್ಲ ಮಾರ್ಗಸೂಚಿಗಳನ್ನು ಪರಿಪಾಲಿಸುವ ನಿಭಂದನೆಗೊಳಪಟ್ಟು ಈ ಮೂಲಕ ಆದೇಶಿಸಲಾಗಿರುತ್ತದೆ.

ದೇವಸ್ಥಾನಗಳ ಮಂಡಳಿಗಳು ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಮಂಡಳಿಗಳು ಗಣೇಶ ಉತ್ಸವ ಆಚರಿಸಲು ಪೊಲೀಸ್/ ಮಹಾನಗರ ಪಾಲಿಕೆ/ಸ್ಥಳೀಯ ಸಂಸ್ಥೆ/ಹೆಸ್ಕಾಂ/ಆರೋಗ್ಯ/ಅಗ್ನಿಶಾಮಕ/ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಇತರೆ ಸಂಬಂಧಪಟ್ಟ ಇಲಾಖೆಗಳಿಂದ ಪೂರ್ವಾನುಮತಿಯನ್ನು ಕಡ್ಡಾಯವಾಗಿ ಪಡೆಯತಕ್ಕದ್ದು.

ಕೋವಿಡ್-೧೯ ಸಾಂಕ್ರಾಮಿಕ ರೋಗ ಹರಡುವಿಕೆ ಹೆಚ್ಚಾಗಿರುವುದರಿಂದ ಪೊಲೀಸ್/ ಮಹಾನಗರ ಪಾಲಿಕೆ/ಸ್ಥಳೀಯ ಸಂಸ್ಥೆ/ಹೆಸ್ಕಾಂ/ಆರೋಗ್ಯ/ಅಗ್ನಿಶಾಮಕ/ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಇತರೆ ಸಂಬಂಧಪಟ್ಟ ಇಲಾಖೆಯವರು ನೀಡುವ ಸೂಚನೆ/ನಿರ್ದೇಶನಗಳನ್ವಯ ನಿಯಂತ್ರಿತ ವಲಯಗಳ ಹೊರಗೆ ಇರುವ ದೇವಸ್ಥಾನಗಳಲ್ಲಿ ಈ ವರ್ಷದ ಸಾರ್ವಜನಿಕ ಗಣೇಶ ಉತ್ಸವವನ್ನು ಯಾವುದೇ ರೀತಿಯ ಡಾಲ್ಬಿ ಉಪಯೋಗಿಸದೇ, ಯಾವುದೇ ರೀತಿಯ ಪಟಾಕಿಗಳನ್ನು ಸಿಡಿಸದೇ ಮತ್ತು ಬಣ್ಣಗಳನ್ನು ಎರಚದೆ ಅತೀ ಸರಳವಾಗಿ ಆಚರಿಸತಕ್ಕದ್ದು.

ಮನೆಯಲ್ಲಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಯ ಎತ್ತರ ಗರಿಷ್ಠ ೨ ಅಡಿ (ಪೀಠ ಸಹಿತ) ಮೀರದಂತೆ ಹಾಗೂ ದೇವಸ್ಥಾನಗಳಲ್ಲಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಗಳ ಎತ್ತರ ಗರಿಷ್ಠ ೪ ಅಡಿ (ಪೀಠ ಸಹಿತ) ಮೀರತಕ್ಕದ್ದಲ್ಲ ಹಾಗೂ ಕಡ್ಡಾಯವಾಗಿ ಪಿಓಪಿ ಬಳಸದೇ ಮಣ್ಣಿನಿಂದ ತಯಾರಿಸಿದ ಮೂರ್ತಿಗಳನ್ನೇ ಪ್ರತಿಷ್ಠಾಪಿಸಬೇಕು.
ಅದೇ ರೀತಿ ಮನೆಯಲ್ಲಿ ಪ್ರತಿಷ್ಠಾಪಿಸಿದ ಶ್ರೀ ಗಣೇಶ ಮೂರ್ತಿಯನ್ನು ಅವರ ಮನೆ ಆವರಣದಲ್ಲಿಯೇ ವಿಸರ್ಜನೆ ಮಾಡಲು ಎಲ್ಲ ಅಗತ್ಯ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು.

ಒಂದು ವೇಳೆ ಈ ವ್ಯವಸ್ಥೆಯನ್ನು ಮಾಡಿಕೊಳ್ಳಲು ಆಗದೇ ಇದ್ದ ಸಂದರ್ಭದಲ್ಲಿ ಮಹಾನಗರ ಪಾಲಿಕೆ, ಬೆಳಗಾವಿ ಹಾಗೂ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಇವರು ತಯಾರಿಸಿದ ಮೊಬೈಲ ಟ್ಯಾಂಕಗಳಲ್ಲಿ ವಿಸರ್ಜನೆಯನ್ನು ನೆರವೇರಿಸತಕ್ಕದ್ದು.

ಪ್ರಸಕ್ತ ಸಾಲಿನಲ್ಲಿ ನಿಗದಿಪಡಿಸಿದ ಸಮಯದಲ್ಲಿ ಶ್ರೀ ಗಣೇಶ ಮೂರ್ತಿಯ ವಿಸರ್ಜನೆಯನ್ನು ನೆರವೇರಿಸಲು ಸಾಧ್ಯವಾಗದೇ ಇದ್ದ ಪಕ್ಷದಲ್ಲಿ, ಮುಂಬರುವ ೨೦೨೧ ನೇ ಸಾಲಿನ ಭಾದ್ರಪದ ತಿಂಗಳಿನಲ್ಲಿ ವಿಸರ್ಜನೆಯನ್ನು ನೆರವೇರಿಸಬಹುದಾಗಿರುತ್ತದೆ.

ಇದರಿಂದ ಶ್ರೀ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಕಾಲಕ್ಕೆ ಹಾಗೂ ವಿಸರ್ಜನಾ ಕಾಲಕ್ಕೆ ಜನದಟ್ಟಣೆಯಾಗುವುದನ್ನು ತಡೆಯುವುದಲ್ಲದೇ ಕುಟುಂಬ ಸದಸ್ಯರಿಗೂ ಸಹ ಕೊರೋನಾ ಸಾಂಕ್ರಾಮಿಕ ರೋಗ ಹರಡುವಿಕೆಯನ್ನು ತಡೆಯಬಹುದಾಗಿರುತ್ತದೆ.

ಶ್ರೀ ಗಣೇಶೋತ್ಸವ ಕಾಲಕ್ಕೆ ದೇವಸ್ಥಾನಗಳ ಮಂಡಳಿಗಳು ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಮಂಡಳಿಗಳು ದೇವಸ್ಥಾನಗಳಲ್ಲಿ ಜಾಹೀರಾತು ಪ್ರದರ್ಶನಗಳ ಕಾರಣಗಳಿಂದ ಯಾವುದೇ ರೀತಿಯ ಜನದಟ್ಟಣೆಯಾಗದಂತೆ ಕಟ್ಟುನಿಟ್ಟಾಗಿ ನೋಡಿಕೊಳ್ಳುವುದು.

ಕೋವಿಡ್-೧೯ ಸಾಂಕ್ರಾಮಿಕ ರೋಗ ಕುರಿತು ಜಾಗೃತಿ ಮೂಡಿಸುವ ಸಾಮಾಜಿಕ, ಆರೋಗ್ಯ ಸಂದೇಶಗಳನ್ನು ಬಿಂಬಿಸುವ ಜಾಹೀರಾತುಗಳಿಗೆ ಪ್ರಾಧಾನ್ಯತೆಯನ್ನು ನೀಡತಕ್ಕದ್ದು.

ಸಾಂಸ್ಕೃತಿಕ/ಮನರಂಜನಾ/ಭಜನೆ/ಕೀರ್ತನೆ ಹಾಗೂ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳ ಬದಲಾಗಿ ಆರೋಗ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕೊರೋನಾ, ಮಲೇರಿಯಾ, ಡೆಂಗ್ಯೂ ಇತ್ಯಾದಿ ರೋಗಗಳನ್ನು ತಡೆಗಟ್ಟಲು ಆಧ್ಯತೆ ನೀಡಬೇಕು ಹಾಗೂ ಸಾರ್ವಜನಿಕ ನೈರ್ಮಲ್ಯದ ಬಗ್ಗೆ ಜಾಗೃತಿ ಮೂಡಿಸುವದು ಮತ್ತು ಧ್ವನಿವರ್ಧಕದಿಂದ ಶಬ್ದ ಮಾಲಿನ್ಯ ಉಂಟಾಗದಂತೆ ಸರ್ಕಾರದ ನಿಯಮಗಳನ್ನು ಪಾಲಿಸುವುದು.

ಶ್ರೀ ಗಣೇಶೋತ್ಸವ ಆಚರಣೆ ಕಾಲಕ್ಕೆ ಆರತಿ ಸಮಯದಲ್ಲಿ ಗರಿಷ್ಠ ೦೫ ಜನ ಸೇರತಕ್ಕದ್ದು. ಸಾರ್ವಜನಿಕರಿಗೆ ಶ್ರೀ ಗಣೇಶನ ದರ್ಶನದ ಸೌಲಭ್ಯವನ್ನು ಕೇಬಲ್ ನೆಟ್‌ವರ್ಕ್, ವೆಬ್‌ಸೈಟ್ ಮತ್ತು ಫೇಸ್‌ಬುಕ್ ಇತ್ಯಾದಿಗಳ ಮೂಲಕ ಆನ್‌ಲೈನ್‌ನಲ್ಲಿ ಲಭ್ಯವಾಗುವಂತೆ ವ್ಯವಸ್ಥೆಯನ್ನು ಮಾಡಬಹುದು.

ಶ್ರೀ ಗಣೇಶ ಮುರ್ತಿಯನ್ನು ಪ್ರತಿಷ್ಠಾಪಿಸಿದ ದೇವಸ್ಥಾನಗಳಲ್ಲಿ ದಿನನಿತ್ಯ ಸ್ಯಾನಿಟೈಜೇಷನ್ ಮಾಡುವುದು ಹಾಗೂ ಸಾರ್ವಜನಿಕ ದರ್ಶನಕ್ಕಾಗಿ ಆಗಮಿಸುವ ಭಕ್ತಾಧಿಗಳಿಗೆ ಸ್ಯಾನಿಟೈಸರ್ ಹಾಗೂ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆಯನ್ನು ಕಲ್ಪಿಸುವುದರ ಜೊತೆಗೆ ದರ್ಶನಕ್ಕಾಗಿ ಬರುವ ಭಕ್ತರಿಗೆ ಕನಿಷ್ಠ ೬ ಅಡಿ ಸಾಮಾಜಿಕ ಅಂತರವನ್ನು ಗುರುತಿಸುವುದು ಹಾಗೂ ಅದನ್ನು ಪಾಲನೆ ಮಾಡಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳತಕ್ಕದ್ದು.ದೇವಸ್ಥಾನಕ್ಕೆ ಆಗಮಿಸುವ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸುವ ನಿಯಮವನ್ನು ಪಾಲಿಸುವಂತೆ ನೋಡಿಕೊಳ್ಳತಕ್ಕದ್ದು.
ಶ್ರೀ ಗಣೇಶೋತ್ಸವದಲ್ಲಿ ಶ್ರೀ ಗಣೇಶ ಮೂರ್ತಿಗಳನ್ನು ತರುವಾಗ ಹಾಗೂ ವಿಸರ್ಜನೆಯ ಕಾಲಕ್ಕೆ ಯಾವುದೇ ರೀತಿಯ ಮೆರವಣಿಗೆಯನ್ನು ಹೊರಡಿಸಬಾರದು. ಶ್ರೀ ಗಣೇಶ ವಿರ್ಸಜನೆಯ ಸ್ಥಳದಲ್ಲಿ ಆರತಿ ಬೆಳಗುವ ಪೂಜಾ ವಿಧಿವಿಧಾನವನ್ನು ಮನೆ ಹಾಗೂ ದೇವಸ್ಥಾನಗಳಲ್ಲಿಯೇ ನೆರವೇರಿಸಬೇಕು.

ಶ್ರೀ ಗಣೇಶ ವಿಸರ್ಜನೆಯ ಸ್ಥಳದಲ್ಲಿ ಅಗತ್ಯ ಸಮಯದವರೆಗೆ ಮಾತ್ರ ಇದ್ದು, ಹೆಚ್ಚಿನ ವೇಳೆ ಆ ಸ್ಥಳದಲ್ಲಿ ನಿಲ್ಲಬಾರದು. ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ ಸಣ್ಣ ಮಕ್ಕಳು, ಹಿರಿಯ ನಾಗರಿಕರು ಹಾಗೂ ಅನಾರೋಗ್ಯದಿಂದ/ಕೋಮ್ ಆರ್ಬಿಡ್ಸ್ಗಳಿಂದ ಬಳಲುತ್ತಿರುವವರು ಶ್ರೀ ಗಣೇಶ ಪ್ರತಿಷ್ಠಾಪನೆ/ವಿಸರ್ಜನೆಯ ಸ್ಥಳಗಳಿಗೆ ಹೋಗದಂತೆ ನೋಡಿಕೊಳ್ಳುವುದು. ದೇವಸ್ಥಾನಗಳಲ್ಲಿ ಪ್ರತಿಷ್ಠಾಪಿಸಿರುವ ಎಲ್ಲ ಶ್ರೀ ಗಣೇಶ ಮೂರ್ತಿಗಳ ವಿಸರ್ಜನೆಯನ್ನು ಏಕಕಾಲಕ್ಕೆ ಮಾಡಬಾರದು.

ದೇವಸ್ಥಾನಗಳ ಮಂಡಳಿಗಳು ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಮಂಡಳಿಗಳು ಶ್ರೀ ಗಣೇಶ ಮೂರ್ತಿಗಳ ವಿಸರ್ಜನೆಯನ್ನು ಕಡ್ಡಾಯವಾಗಿ ಅತೀ ಸಮೀಪವಾಗುವಂತಹ ಮಾರ್ಗಗಳನ್ನು ಬಳಸಿಕೊಂಡು ಬೆಳಗಾವಿ ನಗರದ ವ್ಯಾಪ್ತಿಯಲ್ಲಿ ಮಹಾನಗರ ಪಾಲಿಕೆ ವತಿಯಿಂದ ಈಗಾಗಲೇ ನಿರ್ಮಿಸಲಾದ ಹೊಂಡ ಅಥವಾ ಮೊಬೈಲ್ ಟ್ಯಾಂಕ್‌ಗಳಲ್ಲಿ ಹಾಗೂ ಜಿಲ್ಲೆಯ ಇನ್ನುಳಿದ ಸ್ಥಳಗಳಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ/ಸ್ಥಳೀಯ ಸಂಸ್ಥೆಗಳ ವತಿಯಿಂದ ಪೂರೈಸಲಾದ ಮೊಬೈಲ್ ಟ್ಯಾಂಕ್‌ಗಳನ್ನು ಬಳಸಿಕೊಂಡು ಶ್ರೀ ಗಣೇಶ ವಿಸರ್ಜನೆಯ ಕಾರ್ಯವನ್ನು ನೆರವೇರಿಸಬೇಕು.

ಕೋವಿಡ್-೧೯ ಸಾಂಕ್ರಾಮಿಕ ರೋಗ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಹಾಗೂ ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ ಸರ್ಕಾರ, ಜಿಲ್ಲಾಡಳಿತ, ಪೋಲಿಸ್, ಮಹಾನಗರ ಪಾಲಿಕೆ, ಆರೋಗ್ಯ, ಮಾಲಿನ್ಯ ನಿಯಂತ್ರಣ ಮಂಡಳಿ, ಅಗ್ನಿಶಾಮಕ ದಳ ಹಾಗೂ ಇತರೆ ಇಲಾಖೆಗಳಿಂದ ಹೊರಡಿಸಲಾದ ಸೂಚನೆ ಹಾಗೂ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.

ಶ್ರೀ ಗಣೇಶೋತ್ಸವ ಆಚರಣೆ ಕಾಲಕ್ಕೆ ಸಂದರ್ಭಕ್ಕನುಸಾರವಾಗಿ ಸರ್ಕಾರ, ಜಿಲ್ಲಾಡಳಿತ, ಪೋಲಿಸ್, ಮಹಾನಗರ ಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆಗಳಿಂದ ಹೊರಡಿಸಲಾಗುವ ಎಲ್ಲ ಆದೇಶ /ನಿರ್ದೇಶನ ಹಾಗೂ ಸೂಚನೆಗಳನ್ನು ಸಹ ಕಡ್ಡಾಯವಾಗಿ ಪಾಲಿಸಬೇಕು.

ಮೇಲಿನ ಆದೇಶವನ್ನು ಜಾರಿಗೊಳಿಸಲು ಜಿಲ್ಲೆಯ ಎಲ್ಲ ಸಾರ್ವಜನಿಕರು, ದೇವಸ್ಥಾನಗಳ ಮಂಡಳಿಗಳು ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಮಂಡಳಿಗಳು, ಪೊಲೀಸ್ ಆಯುಕ್ತರು, ಬೆಳಗಾವಿ ನಗರ, ಬೆಳಗಾವಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ ಬೆಳಗಾವಿ, ಜಿಲ್ಲಾ ಪೊಲೀಸ್ ಅಧೀಕ್ಷಕರು, ಬೆಳಗಾವಿ, ಆಯುಕ್ತರು, ಮಹಾನಗರ ಪಾಲಿಕೆ, ಬೆಳಗಾವಿ, ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ದಿ ಕೋಶ ಬೆಳಗಾವಿ, ಜಿಲ್ಲೆಯ ಎಲ್ಲ ಉಪವಿಭಾಗಾಧಿಕಾರಿಗಳು ಮತ್ತು ತಹಶೀಲದಾರರು ಹಾಗೂ ಸಂಬಂಧಪಟ್ಟ ಎಲ್ಲ ಇಲಾಖಾ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.

ಈ ಆದೇಶವನ್ನು ಉಲ್ಲಂಘಿಸುವವರ ವಿರುಧ್ಧ ವಿಪತ್ತು ನಿರ್ವಹಣಾ ಕಾಯ್ದೆ ೨೦೦೫ ಹಾಗೂ ಭಾರತೀಯ ದಂಡ ಸಂಹಿತೆ ೧೮೮ ರ ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು‌ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.
***


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

ಎರಡು ಗ್ಯಾಂಗ್ 9 ಜನ ಡಕಾಯಿತರನ್ನು ಬಂಧಿಸಿ; ಚಿನ್ನಾಭರಣ,ನಗದು ಹಣ, ವಾಹನಗಳ ವಶಕ್ಕೆ ಪಡೆದ ಗೋಕಾಕ ಪೋಲಿಸ್!

ಗೋಕಾಕ : ಗೋಕಾಕ ಶಹರ, ಅಂಕಲಗಿ ಮತ್ತು ಗೋಕಾಕ ಗ್ರಾಮೀಣ ಹಳ್ಳಿಗಳಲ್ಲಿ ದರೋಡೆ, ಸುಲಿಗೆ, ಮೋಟಾರ ಸೈಕಲ ಕಳ್ಳತನ, ಜಾನುವಾರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ