ಬೆಳಗಾವಿ/ಬಾಗಲಕೋಟೆ: ಜಿಲ್ಲೆಯಲ್ಲಿ ಕೃಷ್ಣಾ ನದಿಯಲ್ಲಿ ನೀರಿನ ಮಟ್ಟ ಇಳಿಕೆಯಾಗುತ್ತಿದ್ದರೂ ತೀರದಲ್ಲಿರುವ ಚಿಕ್ಕೋಡಿ, ಅಥಣಿ, ಕಾಗವಾಡ, ರಾಯಬಾಗ ತಾಲ್ಲೂಕುಗಳಲ್ಲಿನ ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿದೆ.
ಮಹಾರಾಷ್ಟ್ರದ ಕಡೆಯಿಂದ 3.43 ಲಕ್ಷ ಕ್ಯುಸೆಕ್ ನೀರು ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಬಳಿ ಕೃಷ್ಣಾ ನದಿಗೆ ಬಂದು ಸೇರುತ್ತಿದೆ. ಬುಧವಾರ 3.82 ಲಕ್ಷ ಕ್ಯುಸೆಕ್ ನೀರು ಬರುತ್ತಿತ್ತು. 24 ಗಂಟೆಗಳ ಅವಧಿಯಲ್ಲಿ ನೀರಿನ ಹರಿವಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ.
ಬಾಗಲಕೋಟೆ ಜಿಲ್ಲೆಯಲ್ಲಿ ಗುರು ವಾರ ಮಲಪ್ರಭಾ ಹಾಗೂ ಘಟಪ್ರಭಾ ನದಿಗಳಲ್ಲಿ ಪ್ರವಾಹ ಇಳಿಮುಖವಾಗಿದೆ. ಕೃಷ್ಣಾ ನದಿಯಲ್ಲಿ ಯಥಾಸ್ಥಿತಿ ಮುಂದುವರೆದಿದೆ.
ಮುಧೋಳ ತಾಲ್ಲೂಕಿನ ಚಿಂಚ ಕಂಡಿ ಬಳಿ ಘಟಪ್ರಭಾ ನದಿ ಸೇತುವೆ ಮುಳುಗಡೆಯಿಂದ ಸಂಪರ್ಕ ಕಡಿತ ಗೊಂಡಿದ್ದ ಮುಧೋಳ-ಬಾಗಲಕೋಟೆ ರಸ್ತೆ ಯಲ್ಲಿ ಸಂಚಾರ ಪುನಃ ಆರಂಭವಾಗಿದೆ. ಕಾರು, ಟಂಟಂ, ಬೈಕ್‌ಗಳಂತಹ ಲಘು ವಾಹನಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ಮೂರು ನದಿಗಳ ದಂಡೆಯಲ್ಲಿ ಪ್ರವಾಹ ಬಾಧಿತರಿಗೆ ಜಿಲ್ಲಾಡಳಿತ 55 ಕಡೆ ಕಾಳಜಿ ಕೇಂದ್ರಗಳ ತೆರೆದಿದೆ. ಒಟ್ಟು 11,961 ಮಂದಿ ಸಂತ್ರಸ್ತರು ಹಾಗೂ 9755 ಜಾನುವಾರು ಅಲ್ಲಿ ಆಶ್ರಯ ಪಡೆದಿವೆ.
ಕೃಷ್ಣಾ, ಮಲಪ್ರಭಾ ನದಿಗಳ ಸಂಗಮ ಸ್ಥಳ ಕೂಡಲಸಂಗಮದಲ್ಲಿ ದೇವಾಲಯ ಸಂಕೀರ್ಣಕ್ಕೆ ನೀರು ನುಗ್ಗಿರು
ವುದರಿಂದ ಗುರುವಾರದಿಂದ ಭಕ್ತರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಕೂಡಲಸಂಗಮ ಗ್ರಾಮಕ್ಕೂ ನೀರು ನುಗ್ಗಿದೆ.
ಗ್ರಾಮ ಸಂಪರ್ಕಿಸುವ ಸೇತುವೆಗಳು ಮುಳುಗಡೆ
ಯಾದಗಿರಿ: ಜಿಲ್ಲೆಯ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಗುರುವಾರ 4 ಲಕ್ಷಕ್ಕೂ ಹೆಚ್ಚು ಕ್ಯುಸೆಕ್ ನೀರು ಹರಿಸುತ್ತಿದ್ದು, ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆಗಳು ಮುಳುಗಡೆಯಾಗಿವೆ.
ಶಹಾಪುರ ತಾಲ್ಲೂಕಿನ ಮರಕಲ್-ಕೊಳ್ಳೂರು (ಎಂ), ವಡಗೇರಾ ತಾಲ್ಲೂಕಿನ ಹಯ್ಯಾಳ (ಬಿ)-ಐಕೂರು ಗ್ರಾಮದ ಮಧ್ಯದಲ್ಲಿರುವ ಸೇತುವೆ ಮುಳುಗಿದ್ದರಿಂದ ಶಹಾಪುರ-ರಾಯಚೂರಿಗೆ ತೆರಳುವ ರಸ್ತೆ ಸಂಪರ್ಕ ಕಡಿತಗೊಂಡಿದೆ. ನದಿ ಪಾತ್ರದ ಮತ್ತಷ್ಟು ಜಮೀನುಗಳಿಗೆ ನೀರು ನುಗ್ಗಿದೆ.
ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ಹೂವಿನಹೆಡಗಿ, ಅಂಜಳ, ಜೋಳದಹೆಡಗಿ, ಗೂಗಲ್, ಕೊಪ್ಪರ, ಕುರ್ಕಿಹಳ್ಳಿ, ಕರ್ಕಿಹಳ್ಳಿ, ಕೊಣಚಪ್ಪಳ್ಳಿ, ಮೇದರಗೋಳ ಗ್ರಾಮಗಳ ಕೃಷಿ ಜಮೀನುಗಳಿಗೆ ನೀರು ನುಗ್ಗಿದ್ದರಿಂದ ಸಾವಿರಾರು ಎಕರೆ ಭತ್ತದ ಬೆಳೆಹಾನಿಯಾಗಿದೆ.
ಶಿವಮೊಗ್ಗ ಅಲ್ಲಲ್ಲಿ ಮಳೆ
ಶಿವಮೊಗ್ಗ: ಜಿಲ್ಲೆಯಲ್ಲಿ ನಾಲ್ಕು ದಿನಗಳಿಂದ ಬಿಡುವು ನೀಡಿದ್ದ ಮಳೆ, ಗುರುವಾರ ಕೆಲವೆಡೆ ಬಂದಿದೆ.
ಹೊಸನಗರದಲ್ಲಿ 83.20 ಮಿ.ಮೀ, ತೀರ್ಥಹಳ್ಳಿಯಲ್ಲಿ 6.80 ಮಿ.ಮೀ, ಸೊರಬದಲ್ಲಿ 4.30 ಮಿ.ಮೀ, ಶಿವಮೊಗ್ಗದಲ್ಲಿ 2.40 ಮಿ.ಮೀ ಮಳೆಯಾಗಿದೆ.