ಬೆಂಗಳೂರು, (ಡಿ.02): ಉಪಚುನಾವಣೆ, ಪರಿಷತ್ ಜಿದ್ದಾಜಿದ್ದಿ, ಸ್ಥಳೀಯ ಸಂಸ್ಥೆಗಳ ಮತಸಮರದ ಬಳಿಕ ಬಹು ನಿರೀಕ್ಷಿತ ಗ್ರಾಮ ಪಂಚಾಯಿತಿ ಚುನಾವಣೆಗೆ ಮುಹೂರ್ತ ನಿಗದಿಯಾಗಿದೆ.
ಇದೇ ಡಿಸೆಂಬರ್ 22 ಹಾಗೂ 27ರಂದು ಎರಡು ಹಂತದಲ್ಲಿ ಚುನಾವಣೆ ನಡೆಯಲಿದ್ದು, ಡಿಸೆಂಬರ್ 30ರಂದು ಫಲಿತಾಂಶ ಪ್ರಕಟವಾಗಲಿದೆ. ಇನ್ನು ಪ್ರಮುಖವಾಗಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆದಾರರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂದು ಆಯೋಗ ಸ್ಪಷ್ಟವಾಗಿ ಹೇಳಿದೆ.
ಈ ಹಳ್ಳಿ ಫೈಟ್ ಎಷ್ಟರ ಮಟ್ಟಿಗೆ ಇರುತ್ತೆ ಅಂದ್ರೆ ಸಂಬಂಧಗಳನ್ನೇ ಹಾಳು ಮಾಡುವ ಮಟ್ಟಿಗೆ ಜಿದ್ದಾಜಿದ್ದಿಯಿಂದ ಕೂಡಿರುತ್ತವೆ. ಒಂದು ಪಕ್ಷದವರು ಒಬ್ಬರನ್ನ ಇಲ್ಲಿಸಿದ್ರೆ, ಮತ್ತೊಂದು ಪಕ್ಷದವರು ಆತನ ಸಂಬಂಧಿಯನ್ನ ಮನವೊಲಿಸಿ ಅಖಾಡಕ್ಕಿಳಿಸುತ್ತಾರೆ.
ಹೀಗಾಗಿ ಈ ಹಳ್ಳಿ ಕದನ ಯಾವುದೇ ಜಿಲ್ಲಾ ಹಾಗೂ ವಿಧಾನಸಭೆ ಚುನಾವಣೆಗೂ ಕಮ್ಮಿ ಇಲ್ಲ.
ಇನ್ನು ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧೆ ಮಾಡಬೇಕಾದರೆ ಕೆಲವೊಂದು ಅರ್ಹತೆಗಳು ಇವೆ. ಹಾಗೂ ಅದಕ್ಕೂ ಸೂಕ್ತ ದಾಖಲೆಗಳನ್ನ ಸಲ್ಲಿಸಬಹೇಕಾಗುತ್ತದೆ.
ಚುನಾವಣೆಗೆ ಸ್ಪರ್ಧೆ ಮಾಡಬೇಕಾದರೆ ಯಾವೆಲ್ಲಾ ದಾಖಲೆಗಳು ಬೇಕು ಅಂತ ಸ್ವತಃ ಅಭ್ಯರ್ಥಿಗೆ ಗೊತ್ತಿರಲ್ಲ. ಬದಲಾಗಿ ಪಕ್ಷದ ಮುಖಂಡರೇ ರೆಡಿ ಮಾಡ್ತಾರೆ. ಇನ್ನು ಕೆಲವರು ಗೊತ್ತಿದ್ದವರು ಈಗಾಗಲೇ ಬೇಕಾದ ದಾಖಲಾತಿಗಳನ್ನ ರೆಡಿ ಮಾಡಿಟ್ಟುಕೊಳ್ಳುವುದರಲ್ಲಿ ಬ್ಯುಸಿಯಾಗಿದ್ದಾರೆ.
ಹಾಗಾದ್ರೆ, ಚುನಾವಣೆಗೆ ಸ್ಪರ್ಧಿಸಲು ಯೋಚಿಸಿದ್ದರೇ ಏನೆಲ್ಲಾ ಸಲ್ಲಿಸಬೇಕು..? ಅರ್ಹತೆಗಳೇನು..? ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಲು ಅವಶ್ಯವಿರುವ ದಾಖಲೆಗಳು ಯಾವುವು? ಎನ್ನುವ ಸಂಪಕ್ಷಿಪ್ತ ಮಾಹಿತಿ ಈ ಕೆಳಗಿನಂತಿದೆ ನೋಡಿಕೊಳ್ಳಿ.
ಚುನಾವಣೆಗೆ ಸ್ಪರ್ಧಿಸಲುಬೇಕಾಗುವ ದಾಖಲೆಗಳು
* ಪತ್ರ-5ರ ನಾಮಪತ್ರ ( ಒಬ್ಬ ವ್ಯಕ್ತಿ ನಾಲ್ಕು ನಾಮಪತ್ರಗಳನ್ನು ಸಲ್ಲಿಸಬಹುದು)
* ಜಾತಿ ಪ್ರಮಾಣ ಪತ್ರ
* ಘೋಷಣಾ ಪತ್ರ (ರೂ.20ರ ಮುಖಬೆಲೆಯ 2 ಪ್ರತಿಗಳಲ್ಲಿ. ಒಂದು ಪ್ರತಿ ಝರಾಕ್ಸ್ ಅಫಿಡವಿಟ್)
* ಠೇವಣಿ ಹಣ – ಸಾಮಾನ್ಯ ಸ್ಥಾನಕ್ಕೆ ರೂ.200, ಮೀಸಲಿರಿಸಿದ ಸ್ಥಾನಗಳಿಗೆ ರೂ.100 ( ಎಸ್ ಸಿ, ಎಸ್ಟಿ, ಬಿಸಿಎ, ಬಿಸಿಬಿ ಪ್ರವರ್ಗಗಳಿಗೆ ಮತ್ತು ಮಹಿಳೆಯರಿಗೆ)
* ಮತಪತ್ರದಲ್ಲಿ ಮುದ್ರಿಸಬೇಕಾದ ಹೆಸರಿನ ಬಗ್ಗೆ ಲಿಖಿತ ಪತ್ರ
* ಅಭ್ಯರ್ಥಿಗಳು ಚುನಾವಣಾಧಿಕಾರಿಗಳಿಗೆ ಸಲ್ಲಿಸಬೇಕಾದ ಹೆಚ್ಚುವರಿ ಮಾಹಿತಿ ( ಬಯೋಡಟಾ )
* ಗ್ರಾಮ ಪಂಚಾಯಿತಿಯಿಂದ ಪಡೆದ ಬೇಬಾಕಿ ಪ್ರಮಾಣ ಪತ್ರ
* ಅಭ್ಯರ್ಥಿಗಳ 3 ಪಾಸ್ ಪೋರ್ಟ್ ಅಳತೆಯ ಭಾವಚಿತ್ರಗಳು
* ಇತ್ತೀಚಿನ ಮತದಾರರ ಗುರುತಿನ ಚೀಟಿ
* ಆಧಾರ್ ಕಾರ್ಡ್ ಝರಾಕ್ಸ್ ಪ್ರತಿ
ಗ್ರಾ.ಪಂ ಚುನಾವಣೆಗೆ ಸ್ಪರ್ಧಿಸಲು ಬೇಕಾದ ಅರ್ಹತೆಗಳು
* ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತದಾರರ ಪಟ್ಟಿಯಲ್ಲಿ ಮತದಾನದ ಹಕ್ಕು ಹೊಂದಿರಬೇಕು
* ಅಭ್ಯರ್ಥಿಗೆ 21 ವಯಸ್ಸಿಗಿಂತ ಕಡಿಮೆ ಇರಬಾರದು.
* ಸರ್ಕಾರಿ ನೌಕರನಾಗಿರಬಾರದು.
* ಗ್ರಾ. ಪಂ. ವ್ಯಾಪ್ತಿಯಲ್ಲಿ ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆದಾರರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ (ಹೊಸ ನಿಯಮ)