ಬಾಗಲಕೋಟೆ: ನಕಲಿ ಗಂಟಲು ದ್ರವ ಮಾದರಿ ಸಂಗ್ರಹಿಸಿ ಅದನ್ನು ಕೋವಿಡ್ ಪಾಸಿಟಿವ್ ಎಂದು ಖೊಟ್ಟಿ ದಾಖಲೆ ಸೃಷ್ಟಿಸಿ ಸರ್ಕಾರದಿಂದ ಪರಿಹಾರದ ಮೊತ್ತ ಪಡೆಯುವ ಪ್ರಯತ್ನ ನಡೆಸಿದ್ದ ಇಲ್ಲಿನ ಜಿಲ್ಲಾ ಆಸ್ಪತ್ರೆಯ ಇಬ್ಬರು ನೌಕರರನ್ನು ಪೊಲೀಸರು ಬಂಧಿಸಿದ್ದಾರೆ.
ಜಿಲ್ಲಾ ಆಸ್ಪತ್ರೆಯಲ್ಲಿ ಖಾಸಗಿಯವರು ನಡೆಸುವ ಸಿಟಿ ಸ್ಕ್ಯಾನ್ ವಿಭಾಗದ ಸ್ಟಾಫ್ ನರ್ಸ್ ಬಸವರಾಜ ಬಿಲಕೇರಿ ಹಾಗೂ ಆಸ್ಪತ್ರೆಯಲ್ಲಿ ಹೊರ ಗುತ್ತಿಗೆ ಮೇಲೆ ನೇಮಕವಾಗಿದ್ದ ಡಾಟಾ ಎಂಟ್ರಿ ಆಪರೇಟರ್ ಬಸನಗೌಡ ಗಿರಿಯಪ್ಪಗೌಡ ಬಂಧಿತರು.
ಜಿಲ್ಲಾ ಆಸ್ಪತ್ರೆ ಸರ್ಜನ್ ಡಾ.ಪ್ರಕಾಶ ಬಿರಾದಾರ ನೀಡಿದ ದೂರು ಆಧರಿಸಿ ಆರೋಪಿಗಳ ವಿರುದ್ಧ ನವನಗರ ಪೊಲೀಸ್ ಠಾಣೆಯಲ್ಲಿ ಮೋಸ, ವಂಚನೆಯ ದೂರು ದಾಖಲಾಗಿದೆ. ಆರೋಪಿಗಳನ್ನು ಶನಿವಾರ ಬಂಧಿಸಿ ವಿಚಾರಣೆ ನಡೆಲಾಗಿದೆ.
ಏನಿದು ನಕಲಿ ವರದಿ?
ಜಿಲ್ಲಾ ಆಸ್ಪತ್ರೆಯಲ್ಲಿ ಮೇ 2ರಂದು ಮುಧೋಳ ತಾಲ್ಲೂಕಿನ ಬಿದರಿ ಗ್ರಾಮದ 53 ವರ್ಷದ ಮಹಿಳೆ ಶೇಖವ್ವ ರೂಗಿ ಸಾವನ್ನಪ್ಪಿದ್ದರು. ಅವರಿಗೆ ಆರ್‌ಟಿಪಿಸಿಆರ್ ಪರೀಕ್ಷೆ ಆಗಿರಲಿಲ್ಲ. ಇತ್ತೀಚೆಗೆ ರಾಜ್ಯ ಸರ್ಕಾರ ಕೋವಿಡ್ ದೃಢಪಟ್ಟು ಮೃತಪಟ್ಟವರ ಕುಟುಂಬಗಳಿಗೆ ₹1 ಲಕ್ಷ ಪರಿಹಾರ ಘೋಷಣೆ ಮಾಡಿತ್ತು. ಅದನ್ನು ಪಡೆಯಲು ಶೇಖವ್ವ ಕುಟುಂಬದವರು ತಮಗೆ ಆರ್‌ಟಿಪಿಸಿಆರ್ ವರದಿ ಬೇಕು ಎಂದು ಬಂದಿದ್ದರು ಎನ್ನಲಾಗಿದೆ.
ದುಡ್ಡಿನ ಅಮಿಷಕ್ಕೆ ಒಳಗಾಗಿದ್ದ ಆರೋಪಿಗಳು, ಶೇಖವ್ವ ನಿಧನರಾದ ಒಂದು ದಿನ ಮುಂಚೆ ಅಂದರೆ ಮೇ 1ರಂದು ಗಂಟಲು ದ್ರವ ಮಾದರಿ ಸಂಗ್ರಹಿಸಿದ್ದೆವು ಎಂಬಂತೆ ನಕಲಿ ದಾಖಲೆ ಸೃಷ್ಟಿಸಿದ್ದರು. ಅದಕ್ಕಾಗಿ ಜಿಲ್ಲಾಸ್ಪತ್ರೆಯ ಯೂಸರ್ ಐಡಿ ಹಾಗೂ ಪಾಸ್‌ವರ್ಡ್ ಬಳಕೆ ಮಾಡಿಕೊಂಡು ಶೇಖವ್ವ ಅವರಿಗೆ ಕೋವಿಡ್ ಪಾಸಿಟಿವ್ ಎಂದು ಅಪ್‌ಲೋಡ್ ಮಾಡಿದ್ದರು ಎಂದು ತಿಳಿದುಬಂದಿದೆ.
‘ಈಗ ಮೊದಲಿನಂತೆ ಆರ್‌ಟಿಪಿಸಿಆರ್ ಪರೀಕ್ಷೆಯ ವರದಿ ವಿಳಂಬವಾಗುವುದಿಲ್ಲ. 24 ಇಲ್ಲವೇ 48 ಗಂಟೆಯೊಳಗೆ ಫಲಿತಾಂಶ ನೀಡಬೇಕು ಎಂದು ಸರ್ಕಾರ ನಿರ್ದೇಶಿಸಿದೆ. ಆದರೆ ಈ ಪ್ರಕರಣದಲ್ಲಿ ಎರಡು ತಿಂಗಳ ಬಳಿಕ ಪಾಸಿಟಿವ್ ವರದಿ ಬಂದಿರುವುದು ಅನುಮಾನ ಮೂಡಿಸಿತ್ತು. ಅದನ್ನು ಪರಿಶೀಲನೆಗೆ ಒಳಪಡಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ’ ಎಂದು ಜಿಲ್ಲಾ ಸರ್ಜನ್ ಡಾ.ಪ್ರಕಾಶ ಬಿರಾದಾರ ಮಾಧ್ಯಮದವರಿಗೆ ತಿಳಿಸಿದರು