ಆನೇಕಲ್: ಆನೇಕಲ್ ಪೊಲೀಸ್ ಉಪ ವಿಭಾಗದ ಏಳು ಠಾಣೆಗಳ ವ್ಯಾಪ್ತಿಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದ್ದ 100 ಬೈಕ್, ಮೊಬೈಲ್‌ಗಳು ಮತ್ತು ಚಿನ್ನಾಭರಣ ಸೇರಿದಂತೆ ಒಟ್ಟು ₹ 1.74 ಕೋಟಿ ಮೌಲ್ಯದ ವಸ್ತುಗಳನ್ನು ಹೆಬ್ಬಗೋಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ವಲಯ ಐಜಿಪಿ ಎಂ. ಚಂದ್ರಶೇಖರ್ ವಾರಸುದಾರರಿಗೆ ಹಸ್ತಾಂತರಿಸಿದರು.
ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ 37 ಪ್ರಕರಣಗಳಲ್ಲಿ 56 ಆರೋಪಿಗಳನ್ನು ಬಂಧಿಸಿ ಮಾಲನ್ನು ವಶಕ್ಕೆ ಪಡೆದಿದ್ದು, ಸಂಬಂಧಿಸಿದವರಿಗೆ ನೀಡಲಾಯಿತು.
ಹೆಬ್ಬಗೋಡಿ ಠಾಣೆ ವ್ಯಾಪ್ತಿಯಲ್ಲಿ ಮೂರು ಸುಲಿಗೆ ಪ್ರಕರಣ, ಮೂರು ಮನೆಗಳ್ಳತನ ಹಾಗೂ 25 ದ್ವಿಚಕ್ರವಾಹನ ಕಳವು ಪ್ರಕರಣ ಪತ್ತೆ ಮಾಡಿ ₹ 51.50 ಲಕ್ಷ ಮೌಲ್ಯದ ಮಾಲನ್ನು ವಶಕ್ಕೆ ಪಡೆದಿದ್ದಾರೆ. ಜಿಗಣಿ ಠಾಣೆ ವ್ಯಾಪ್ತಿಯಲ್ಲಿ ಎರಡು ಡಕಾಯಿತಿ ಪ್ರಕರಣ, ಎರಡು ಸುಲಿಗೆ ಪ್ರಕರಣ ಮತ್ತು ಮನೆಗಳ್ಳತನ, 15 ದ್ವಿಚಕ್ರವಾಹನ ಮತ್ತು 100 ಮೊಬೈಲ್ ಫೋನ್‌ಗಳು ಸೇರಿದಂತೆ ಒಟ್ಟು ₹ 47 ಲಕ್ಷ ಮೌಲ್ಯದ ಮಾಲನ್ನು ವಶಕ್ಕೆ ಪಡೆದಿದ್ದಾರೆ.
ಅತ್ತಿಬೆಲೆ ಠಾಣೆ ವ್ಯಾಪ್ತಿಯಲ್ಲಿ ಒಂದು ದರೋಡೆ ಪ್ರಕರಣ ಸೇರಿದಂತೆ ಒಟ್ಟು ಐದು ಪ್ರಕರಣಗಳಲ್ಲಿ ಹತ್ತು ಮಂದಿ ಆರೋಪಿಗಳನ್ನು ಬಂಧಿಸಿ ಒಟ್ಟು ₹ 10.63 ಲಕ್ಷ ಮೌಲ್ಯದ ಸಾಮಗ್ರಿಗಳನ್ನು ವಶಕ್ಕೆ ಪಡೆದಿದ್ದಾರೆ.
ಆನೇಕಲ್ ಠಾಣೆ ವ್ಯಾಪ್ತಿಯಲ್ಲಿ ₹ 1 ಲಕ್ಷ ಬೆಲೆಯ ಮಾಲನ್ನು ವಶಪಡಿಸಿಕೊಂಡಿದ್ದಾರೆ. ಸರ್ಜಾಪುರ ಠಾಣೆ ವ್ಯಾಪ್ತಿಯಲ್ಲಿ 2 ಸುಲಿಗೆ ಪ್ರಕರಣ, 18 ದ್ವಿಚಕ್ರವಾಹನಗಳ ಕಳವು ಪ್ರಕರಣ ಪತ್ತೆ ಮಾಡಿ ₹ 11 ಲಕ್ಷ ಮೌಲ್ಯದ ಮಾಲನ್ನು ವಶಕ್ಕೆ ಪಡೆದಿದ್ದಾರೆ.
ಬನ್ನೇರುಘಟ್ಟ ಠಾಣೆ ವ್ಯಾಪ್ತಿಯಲ್ಲಿ 3 ಕಳವು ಪ್ರಕರಣಗಳನ್ನು ಪತ್ತೆಹಚ್ಚಿ ₹ 5.96 ಲಕ್ಷ ಮೌಲ್ಯದ ಮಾಲನ್ನು ವಶಪಡಿಸಿಕೊಳ್ಳಲಾಗಿದೆ. ಸೂರ್ಯನಗರ ಠಾಣೆ ವ್ಯಾಪ್ತಿಯಲ್ಲಿ ಒಂದು ಮನೆಗಳ್ಳತನ ಪ್ರಕರಣ ಪತ್ತೆ ಮಾಡಿ 1030 ಗ್ರಾಂ ಚಿನ್ನದ ಒಡವೆಗಳು ಸೇರಿದಂತೆ ₹ 50 ಲಕ್ಷ ಮೌಲ್ಯದ ಮಾಲನ್ನು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು ಕೇಂದ್ರ ವಲಯ ಐಜಿಪಿ ಎಂ. ಚಂದ್ರಶೇಖರ್ ಮಾತನಾಡಿ, ಮಾಧ್ಯಮಗಳಲ್ಲಿ ಅಪರಾಧ ಪ್ರಕರಣಗಳ ಬಗ್ಗೆ ಮಾಹಿತಿ ನೀಡಿದಂತೆ ಪ್ರಕರಣಗಳನ್ನು ಪತ್ತೆಹಚ್ಚಿದ ವಿಚಾರದ ಬಗ್ಗೆಯೂ ಬೆಳಕು ಚೆಲ್ಲಬೇಕು. ಇದರಿಂದ ಕಾರ್ಯಾಚರಣೆಯಲ್ಲಿ ಪಾಲ್ಗೊಂಡವರಿಗೆ ಸಾಧನೆ ಮಾಡಿದ ತೃಪ್ತಿ ದೊರೆಯುತ್ತದೆ ಎಂದರು.
ಆನೇಕಲ್ ಉಪ ವಿಭಾಗದ ಎಲ್ಲಾ ಪೊಲೀಸ್ ಠಾಣೆಗಳಲ್ಲೂ ಪ್ರಕರಣ ಭೇದಿಸುವಲ್ಲಿ ಪೊಲೀಸರು ಉತ್ತಮ ಕೆಲಸ ಮಾಡಿದ್ದಾರೆ. ಹಾಗಾಗಿ ಅವರಿಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಗಿದೆ ಎಂದು ಹೇಳಿದರು.
ಮಾದಕ ವಸ್ತುಗಳ ಕಳ್ಳ ಸಾಗಾಣಿಕೆ ತಡೆಗಟ್ಟುವುದು ಸವಾಲಾಗಿದೆ. ಆರೋಪಿಗಳನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಗಂಭೀರ ಪ್ರಯತ್ನ ಮಾಡಲಾಗುತ್ತಿದೆ. ಮಾದಕ ವಸ್ತುಗಳಿಂದ ಅಪರಾಧಗಳ ಸಂಖ್ಯೆ ಹೆಚ್ಚಾಗಲು ಕಾರಣವಾಗುತ್ತಿದೆ. ಹಾಗಾಗಿ ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪೊಲೀಸರು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಎಲ್ಲಾ ಠಾಣೆ ವ್ಯಾಪ್ತಿಯಲ್ಲೂ ಕಾರ್ಯಾಚರಣೆ ಬಿಗಿಗೊಳಿಸಲಾಗಿದೆ ಎಂದು ಹೇಳಿದರು.
ದ್ವಿಚಕ್ರವಾಹನ ಕಳವು ಪ್ರಕರಣಗಳು ಹೆಚ್ಚಾಗುತ್ತಿವೆ. ಇದನ್ನು ತಡೆಯುವ ನಿಟ್ಟಿನಲ್ಲಿ ವಾಹನಗಳಿಗೆ ಲಾಕ್ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಕಂಪನಿಗಳೊಂದಿಗೆ ಸಮಾಲೋಚನೆ ನಡೆಸಲು ಚಿಂತನೆ ಮಾಡಲಾಗಿದೆ. ವಾಹನಗಳ ಕಳವಾಗದಂತೆ ಮಾಡುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕಾಗಿದೆ ಎಂದರು.
ಬೆಂಗಳೂರು ಗ್ರಾಮಾಂತರ ಎಸ್.ಪಿ ಡಾ.ಕೆ. ವಂಶಿಕೃಷ್ಣ, ಎಎಸ್‌ಪಿ ಲಕ್ಷ್ಮೀಗಣೇಶ್, ಡಿವೈಎಸ್‌ಪಿ ಡಾ.ಎಚ್.ಎಂ. ಮಹದೇವಪ್ಪ, ಸರ್ಕಲ್ ಇನ್‌ಸ್ಪೆಕ್ಟರ್‌ಗಳಾದ ಕೆ. ವಿಶ್ವನಾಥ್, ಎಚ್.ಆರ್. ಮಹಾನಂದ, ಬಿ.ಕೆ. ಶೇಖರ್, ಗೌತಮ್, ರವೀಂದ್ರ, ರಾಘವೇಂದ್ರ ಇಮ್ರಾಪುರ್ ಹಾಜರಿದ್ದರು.