ಬೆಳಗಾವಿ, ಮೇ 2(ಕರ್ನಾಟಕ ವಾರ್ತೆ): ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ವಿವಿಧ ಸಂದರ್ಭಗಳಲ್ಲಿ ತಮಗೆ ಸನ್ಮಾನದ ರೂಪದಲ್ಲಿ ಬಂದಿದ್ದ ನೂರಾರು ಶಾಲುಗಳನ್ನು ವೃದ್ಧಾಶ್ರಮಕ್ಕೆ ನೀಡುವುದರ ಜತೆಗೆ ಆಶ್ರಮದ ಹಿರಿಯ ಜೀವಗಳ ಜತೆಗೆ ಊಟ ಮಾಡಿ ಕೆಲಹೊತ್ತು ಸಂಭ್ರಮದಿಂದ ಕಳೆದರು.
ನಗರದ ಬಮನವಾಡಿಯಲ್ಲಿ ಸಮಾಜ ಸೇವಕ ಹಾಗೂ ಮಾಜಿ ಮಹಾಪೌರ ವಿಜಯ್ ಮೋರೆ ಅವರು ನಡೆಸುತ್ತಿರುವ ಶಾಂತಾಯಿ ವೃದ್ಧಾಶ್ರಕ್ಕೆ ಸೋಮವಾರ (ಮೇ 2) ಭೇಟಿ ನೀಡಿದ ಜಿಲ್ಲಾಧಿಕಾರಿಗಳು ನೂರಾರು ಶಾಲುಗಳನ್ನು ಆಶ್ರಮದ ನಿವಾಸಿಗಳಿಗೆ ವಿತರಿಸಿದರು.
ಜಿಲ್ಲಾಧಿಕಾರಿ ಹಿರೇಮಠ ಹಾಗೂ ಅವರ ಪತ್ನಿ ತನುಜಾ ಹಿರೇಮಠ ಅವರು ಆಶ್ರಮಕ್ಕೆ ತೆರಳಿ ಆಶ್ರಮದ ನಿವಾಸಿಗಳ ಜತೆ ಊಟ ಮಾಡಿ ಅಲ್ಲಿಯೇ ಕೆಲಹೊತ್ತು ಕಳೆದರು.
ಆಶ್ರಮ ನಿವಾಸಿಗಳ ಜತೆ ಹೋಳಿಗೆ ಊಟ:
ಆಶ್ರಮಕ್ಕೆ ಬಂದ ಜಿಲ್ಲಾಧಿಕಾರಿ ಕುಟುಂಬವನ್ನು ಆತ್ಮೀಯವಾಗಿ ಬರಮಾಡಿಕೊಂಡ ಅಲ್ಲಿನ ನಿವಾಸಿಗಳು, ಅವರೊಂದಿಗೆ ಹೋಳಿಗೆ ಊಟವನ್ನು ಮಾಡಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಅಡುಗೆಮನೆಗೆ ತೆರಳಿ ಅಡುಗೆ ಕೆಲಸದಲ್ಲಿ ಕೈಜೋಡಿಸಿದ ತನುಜಾ ಹಿರೇಮಠ ಅವರು ಸ್ವತಃ ಹೋಳಿಗೆ ಮಾಡುವ ಮೂಲಕ ಸರಳತೆಯನ್ನು ಮೆರೆದರು.
ಆಶ್ರಮದ ಕಾರ್ಯಚಟುವಟಿಕೆಗಳ ಕುರಿತು ವೃದ್ಧಾಶ್ರಮದ ಅಧ್ಯಕ್ಷರಾದ ವಿಜಯ್ ಮೋರೆ ಅವರು ಜಿಲ್ಲಾಧಿಕಾರಿಗಳಿಗೆ ವಿವರಿಸಿದರು.
ದಾನಿಗಳ ನೆರವಿನಿಂದ ವೃದ್ಧಾಶ್ರಮವನ್ನು ವ್ಯವಸ್ಥಿತವಾಗಿ ನಡೆಸಿಕೊಂಡು ಬರಲಾಗುತ್ತಿದ್ದು, ಸಮಾಜದ ಅನೇಕ ಜನರ ಸಹಕಾರದಿಂದ ಎಲ್ಲವೂ ಉತ್ತಮ ರೀತಿಯಲ್ಲಿ ನಡೆದಿದೆ ಎಂದರು.
ವಿಜಯ್ ಮೋರೆ ಹಾಗೂ ತಂಡದ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು, ಬದುಕಿನ ಸಂಧ್ಯಾಕಾಲದಲ್ಲಿ ಇರುವ ಹಿರಿಯರ ಆರೈಕೆ ಮಾಡುತ್ತಿರುವ ಶಾಂತಾಯಿ ಆಶ್ರಮದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.
ದಲಿತ ಸಮಾಜದ ಮುಖಂಡರಾದ ಮಲ್ಲೇಶ ಚೌಗಲೆ , ಯುವ ನಾಯಕ ಅಲನ್ ವಿಜಯ್ ಮೋರೆ .ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.