ವಿಜಯಪುರ: ರಾಜ್ಯ ಸರ್ಕಾರದ ವಿರುದ್ಧ ಶೇ.30 ಕಮಿಷನ್ ಆರೋಪ ಮಾಡಿರುವ ದಿಂಗಾಲೇಶ್ವರ ಶ್ರೀಗಳು, ಯಾರಿಗೆ ಕೊಟ್ಟರು, ಎಲ್ಲಿ ಕೊಟ್ಟರು ಎಷ್ಟು ಕೊಟ್ಟರು ಎಂಬುದಕ್ಕೆ ಸಾಕ್ಷಿ ನೀಡಲಿ. ನೀವೇಕೆ ಶೇ.30 ರಷ್ಟು ಲಂಚ ಕೊಟ್ಟು ಅನುದಾನ ಪಡೆದಿರಿ. ಅದು ತಪ್ಪಲ್ಲವೇ ಎಂಬುದನ್ನು ಸಮಾಜಕ್ಕೆ ಹೇಳಬೇಕು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದ್ದಾರೆ.ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಓರ್ವ ಮಠಾಧೀಶರಾಗಿ ಸತ್ಯ, ನ್ಯಾ, ನೀತಿ, ಧರ್ಮದ ಬಗ್ಗೆ ಪ್ರವಚನ ನೀಡುವ ಶ್ರೀಗಳು ಸಾಕ್ಷಿ ಸಮೇತ ಮಾತನಾಡಿದ ಅರ್ಥ ಬರುತ್ತದೆ. ಇಷ್ಟಕ್ಕೂ ಸತ್ಯ ಧರ್ಮದ ಬಗ್ಗೆ ಮಾತನಾಡುವ ನೀವು ಲಂಚ ಕೊಟ್ಟು ಅನುದಾನ ಪಡೆದದ್ದು ಏಕೆ ಎಂದು ಹರಿಹಾಯ್ದರು.
ಸ್ವಾಮಿಗಳಾಗಿ ಮಠದಲ್ಲಿ ಕುಳಿತು ಒಳ್ಳೆಯ ಜನರಿಗೆ ಧರ್ಮ ಸದ್ವಿಚಾರನಗಳ ಪ್ರವಚನ ಸಂದೇಶ ನೀಡುವುದು ಬಿಟ್ಟು, ರಾಜಕಾರಣ ಮಾಡಲು ಮುಂದಾಗಿದ್ದೀರಿ. ವಿಜಯೇಂದ್ರ ನೀಡಿದ ಹಣ ಪಡೆದು ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಖುರ್ಚಿಯಿಂದ ಇಳಿಸಿದರೆ ಬಿಜೆಪಿ ಸರ್ವನಾಶ ಆಗತ್ತೆ. ಬಿಜೆಪಿ ನಾಶವಾಗುತ್ತದೆ ಎಂದು ಕಾವೇರಿ ನಿವಾಸದ ಎದುರು ಪ್ರವಚನ ಮಾಡಿದ್ದೀರಿ ಎಂದು ದಿಂಗಾಲೇಶ್ವರ ಶ್ರೀಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಆಗ ವಿಜಯೇಂದ್ರ ನಿಮಗೆ ಎಷ್ಟು ಪರ್ಸೆಂಟೇಸ್ ಕೊಟ್ಟಿದ್ದರು ಎಂಬ ಬಗ್ಗೆ ದಿಂಗಾಲೇಶ್ವರರರು ಸಮಾಜಕ್ಕೆ ಉತ್ತರಿಸಬೇಕು. ಖಾವಿ ಹಾಕಿದ್ದೀರಿ ಎಂಬ ಕಾರಣಕ್ಕೆ ನಾವು ಗೌರವ ಕೊಡುತ್ತೇವೆ. ಹಾಗಂತ ಸ್ವಾಮಿಗಳಾದವರು ಬಾಯಿಗೆ ಬಂದಂತೆ ಮಾತನಾಡಿದರೆ ಸರಿಯಲ್ಲ. ಲಂಚ ಕೊಡೋದು ತಪ್ಪು ತಗೊಳ್ಳೋದು ತಪ್ಪು ಎಂಬುದು ಸ್ವಾಮಿಗಳಾದ ದಿಂಗಾಗಲೇಶ್ವರರಿಗೆ ತಿಳಿದಿಲ್ಲವೇ ಎಂದು ಪ್ರಶ್ನಿಸಿದರು.
ಡಿಕೆ.ಶಿವಕುಮಾರ ಮನೆಗೆ ಹೋಗಿ ಮುಂದಿನ ಸಿಎಂ ಎಂದು ಆಶಿರ್ವಾದ ಮಾಡುವ ಶ್ರೀಗಳು, ಕಾಂಗ್ರೆಸ್‍ನ ಮೇಕೆದಾಟು ಪಾದಯಾತ್ರೆಯಲ್ಲಿ ಸಹಿತ ಹೋಗಿ ಸೂರ್ಯ, ಚಂದ್ರ ಅಂತೆಲ್ಲ ಹೊಗಳಿಕೆ ಭಾಷಣ ಮಾಡಿದ್ದಾರೆ. ದಿಂಗಾಲೇಶ್ವರರು ಹುಬ್ಬಳ್ಳಿ ಮೂರು ಸಾವಿರ ಮಠದ ಸ್ವಾಮಿಜಿಗಳಿಗೂ ಕಿರುಕುಳ ನೀಡಿದರು. ನಿಮಗೆ ರಾಜಕಾರಣದಲ್ಲಿ ಆಸಕ್ತಿ ಇದ್ದರೆ ಖಾವಿ ತೊರೆದು ನಮ್ಮಂತೆ ಖಾದಿ ಹಾಕೊಂಡು ಬನ್ನಿ ಎಂದು ಆಹ್ವಾನ ನೀಡಿದರು.
ಜನರು ಸ್ವಾಮಿಜಿ ಎಂದರೆ ಕಾಲು ಬೀಳುತ್ತಾರೆ, ಇವರನ್ನು ನೋಡಿದ್ರೆ ಮಂತ್ರಿಗಳ ಮನೆ ಮನೆಗೆ ಅಡ್ಡಾಡಿ ಶೇ.30 ಕಮನಿಷನ್ ಕೊಟ್ಟು ಮಠಕ್ಕೆ ಹಣ ತರುತ್ತಾರೆ. ಮಠಗಳನ್ನು ಭಕ್ತರು ಕಟ್ಟಬೇಕೆ ಹೊರತು ಸರ್ಕಾರವಲ್ಲ.ಸರ್ಕಾರದ ಹಣ ಪಡೆದರೆ ಭವಿಷ್ಯದಲ್ಲಿ ಆಯಾ ಪಕ್ಷದ ಪರ ಪ್ರಚಾರ ಮಾಡಬೇಕಾಗುತ್ತದೆ ಎಂದ ಶಾಸಕ ಯತ್ನಾಳ ಕುಟುಕಿದರು.