Breaking News

ಗಂಡನನ್ನು ಕೊಲ್ಲಲು ಸುಪಾರಿ ಕೊಟ್ಟ ಹೆಂಡತಿ!


ಬೆಂಗಳೂರು: ಪೊಲೀಸರು ಆ ಕ್ಷಣ ಎಚ್ಚೆತ್ತುಕೊಂಡಿಲ್ಲ ಅಂದಿದ್ದರೆ ಮುಗ್ಧ ವ್ಯಕ್ತಿಯ ಪ್ರಾಣ ಪಕ್ಷಿ ಹಾರಿ ಹೋಗುತ್ತಿತ್ತು. ಮಾದನಾಯಕನಹಳ್ಳಿ ಪೊಲೀಸರ ಸಮಯ ಪ್ರಜ್ಞೆಯಿಂದ ಆ ವ್ಯಕ್ತಿಯ ಜೀವ ಉಳಿಸಿದೆ. ಮಾತ್ರವಲ್ಲ ಕೊಲೆಗೆ ಸ್ಕೆಚ್ ಹಾಕಿದ್ದ ಆಮಾಯಕ ವ್ಯಕ್ತಿಯ ಹೆಂಡತಿಯೇ ಇದೀಗ ಜೈಲು ಪಾಲಾಗಿದ್ದಾಳೆ. ಆರು ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಹೆಂಡತಿ ಮಾಡಿದ ಮಹಾ ಘನಂದಾರಿ ಕೆಲಸ ಇಲ್ಲಿದೆ ನೋಡಿ.

ಮಾದನಾಯಕನಹಳ್ಳಿ ಸಮೀಪ ಗಿರೀಶ್ ಎಂಬಾತ ಹೋಗುತ್ತಿದ್ದ. ಮಂಕಿ ಕ್ಯಾಪ್ ಧರಿಸಿದ್ದ ನಾಲ್ವರು ಕಿರಾತಕರು ಇನ್ನೇನು ಕೊಚ್ಚಿ ಕೊಲೆ ಮಾಡಲು ಮಚ್ಚು ಬೀಸುವ ಸಮಯದಲ್ಲೇ ಅದೃಷ್ಟವಶಾತ್ ಮಾದನಾಯಕನಹಳ್ಳಿ ಪೊಲೀಸರು ಎಂಟ್ರಿ ಕೊಟ್ಟಿದ್ದರು. ಕೊಲೆಯಾಗಿ ಹೋಗುತ್ತಿದ್ದ ಗಿರೀಶ್ ಜೀವ ಉಳಿಸಿದ್ದರು. ಆತ ನೀಡಿದ ದೂರಿನ ಮೇರೆಗೆ ಆರು ಮಂದಿಯನ್ನು ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಅದರಲ್ಲಿ ಗಿರೀಶ್ ನ ಪತ್ನಿಯೇ ಮೊದಲ ಆರೋಪಿಯಾಗಿ ಜೈಲು ಸೇರಿದ್ದಾಳೆ. ಗಿರೀಶ್ ಹತ್ಯೆಗೆ ಸಂಚು ರೂಪಿಸಿ ಕೊಲೆಗೆ ಯತ್ನಿಸಿದ ಆರೋಪದಡಿ ಬಂಧನಕ್ಕೆ ಒಳಗಾಗಿದ್ದಾರೆ.

ಅಂದಹಾಗೆ ಗಿರೀಶ್ ಆರು ವರ್ಷದ ಹಿಂದೆ ರೂಪಾ ಎಂಬಾಕೆಯನ್ನು ಮದುವೆಯಾಗಿದ್ದ. ಇಬ್ಬರೂ ಅನ್ಯೋನ್ಯವಾಗಿಯೇ ಇದ್ದರು. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ರೂಪಾಗೆ ಕಲ್ಫ್ ಕುಮಾರ್ ಜೈನ್ ಎಂಬಾತ ಪರಿಚಯವಾಗಿದ್ದ. ಇಬ್ಬರೂ ಪರಸ್ಪರ ಪ್ರೀತಿ ಮಾಡಲು ಶುರುವಾಗಿದ್ದರು. ತಾಳಿ ಕಟ್ಟಿದ ಗಂಡ ಗಿರೀಶ ಜತೆಗೆ ಪತ್ನಿ ರೂಪಾ ತಾತ್ಸಾರದಿಂದ ನಡೆದುಕೊಳ್ಳುತ್ತಿದ್ದಳು. ಹೆಂಡತಿಯ ನಡೆ ಬಗ್ಗೆ ಅನುಮಾನಗೊಂಡಿದ್ದ ಗಿರೀಶ್ ಕೆಲಸಕ್ಕೆ ಹೋಗದಂತೆ ಪತ್ನಿಗೆ ಹೇಳಿದ್ದ. ಅಕ್ರಮ ಸಂಬಂಧಕ್ಕೆ ಅಡ್ಡಿಬಂದ ಗಂಡನನ್ನೇ ಮುಗಿಸಲು ರೂಪಾ ಹಾಗೂ ಆಕೆಯ ಪ್ರಿಯಕರ ಕಲ್ಪ್ ಕುಮಾರ್ ಜೈನ್ ಪ್ಲಾನ್ ಮಾಡಿದ್ದರು.

ಕೆಲಸಕ್ಕೆ ಹೋಗದಂತೆ ಪತ್ನಿಯನ್ನು ತಡೆದ ಗಂಡ ಗಿರೀಶ್ ನನ್ನು ಹತ್ಯೆ ಮಾಡಿಸಲು ಪ್ರಿಯಕರ ಕಲ್ಪ್ ಕುಮಾರ್ ಜೈನ್ ಗೆ ರೂಪಾ ಪುಸಲಾಯಿಸಿದ್ದಳು. ಜಿಮ್ ನಲ್ಲಿ ಪರಿಚಯವಾಗಿದ್ದ ನಾಲ್ವರು ಯುವಕರಿಗೆ ಗಿರೀಶ್ ನನ್ನು ಹತ್ಯೆ ಮಾಡಿದ್ರೆ ಹದಿನೈದು ಲಕ್ಷ ರೂ. ನೀಡುವುದಾಗಿ ಸುಪಾರಿ ನೀಡಿದ್ದರು. ಮುಂಗಡವಾಗಿ ಮೂರು ಲಕ್ಷ ಹಣ ಕೊಟ್ಟು ಕೊಲೆ ಮಾಡುವಂತೆ ರೂಪಾ ಮತ್ತು ಪ್ರಿಯಕರ ಸೂಚಿಸಿದ್ದರು.

ಸುಪಾರಿ ಪಡೆದಿದ್ದ ನಾಲ್ವರು ಹಂತಕರು ಗಿರೀಶ್ ಹತ್ಯೆಗೆ ಪ್ಲಾನ್ ಮಾಡಿ ದಾಳಿ ಮಾಡಿದಾಗ ಆಕಸ್ಮಿಕ ಪೊಲೀಸರು ಎಂಟ್ರಿ ಕೊಟ್ಟಿದ್ದಾರೆ. ಕೊಲೆಗೆ ಯತ್ನಿಸಿದ ಹಂತಕರು ಸಿಕ್ಕಿಬಿದ್ದಿದ್ದು ವಿಚಾರಣೆ ನಡೆಸಿದಾಗ ಪತ್ನಿಯೇ ಸುಪಾರಿ ನೀಡಿರುವ ಸಂಗತಿ ಹೊರ ಬಿದ್ದಿದೆ.

ನಾಲ್ವರು ಬಾಡಿಗೆ ಹಂತಕರು ನೀಡಿದ ಮಾಹಿತಿ ಮೇರೆಗೆ ಗಿರೀಶ್ ನ ಪತ್ನಿ ರೂಪಾ ಹಾಗೂ ಆಕೆಯ ಪ್ರಿಯಕರ ಕಲ್ಪ್ ಕುಮಾರ್ ಜೈನ್ ನನ್ನು ಕೂಡ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಮಹೇಂದ್ರ ಅಂಡ್ ಮಹೇಂದರ ಶೋರೂಮ್ ನ ಮಾಲೀಕನಾಗಿರುವ ಕಲ್ಪ್ ಕುಮಾರ್ ಜೈನ್ , ರೂಪಾ, ಸುಪಾರಿ ಹಂತಕರಾದ ಮುನಿಯಪ್ಪ, ಕಿರಣ್, ಪ್ರಭು, ಶಿವು ಅವರನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ಬಡವನಾಗಿದ್ದರೂ ಸ್ವಲ್ಪ ಕಡಿಮೆ ಆಗದಂತೆ ನೋಡಿಕೊಂಡ ಪತಿಯನ್ನೇ ಮುಗಿಸಲು ಹೋಗಿ ಆಕೆ ಮತ್ತು ಆಕೆಯ ಪ್ರಿಯಕರನೇ ಜೈಲು ಸೇರಿವಂತಾಗಿದೆ.


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ