ಗೋಕಾಕ : ತನಗೆ, ಮಕ್ಕಳಿಗೆ ಜೀವನಾಂಶ ಕೋರಿ ಕಳೆದ ಐದು ವರ್ಷಗಳಿಂದ ಪತಿಯ ವಿರುದ್ಧ ನ್ಯಾಯಾಲಯದ ಕದ ತಟ್ಟುತ್ತಿದ್ದ ಎರಡು ಮಕ್ಕಳ ತಾಯಿ ನ್ಯಾಯಾಲಯ ನಡೆಸಿದ ರಾಜಿ ಸಂಧಾನ ಫಲವಾಗಿ ಪತಿ ಜತೆ ಒಂದಾದ ಕ್ಷಣಕ್ಕೆ ಇಲ್ಲಿನ ಪ್ರಧಾನ ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶ ರಾಜೀವ ಗೊಳಸಾರ ಸಾಕ್ಷಿಯಾದರು.
ಕೌಟುಂಬಿಕ ವಿಷಯಲ್ಲಿ ಪರಸ್ಪರ ಭಿನ್ನಾಭಿಪ್ರಾಯ ಮೂಡಿದ್ದರಿಂದ 2019ರಲ್ಲಿ ಸುಣಧೋಳಿ ನಿವಾಸಿ ಶ್ರೀದೇವಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಪತಿ ಪ್ರವೀಣ ಎಂಬುವವರ ವಿರುದ್ಧ ಜೀವನಾಂಶ ಕೋರಿದ್ದರು. ತದನಂತರ ಪತಿ ಕಾನೂನು ಪದವಿ ಸಂಪಾದಿಸಿ ವಕೀಲಿ ವೃತ್ತಿಯನ್ನು ಇದೇ ನ್ಯಾಯಾಲಯದಲ್ಲಿ ನಡೆಸುತ್ತಿದ್ದರು. ವಕೀಲಿ ವೃತ್ತಿ ನಡೆಸುತ್ತಿರುವವರು ಬೇರೊಬ್ಬರಿಗೆ ಆದರ್ಶ ಪ್ರಾಯರಾಗಿಬೇಕೆಂಬ ದೃಢ ಇಚ್ಛಾಶಕ್ತಿ ಪ್ರದರ್ಶಿಸಿದ ನ್ಯಾಯಾಧೀಶ ರಾಜೀವ ಗೋಳಸಾರ ಅವರ ಕಳೆದೆರಡು ವರ್ಷಗಳ ಸತತ ನಡೆಸಿದ ರಾಜಿ ಸಂಧಾನದ ಫಲವಾಗಿ ಶನಿವಾರ ಪತಿ ತಮ್ಮ ಪತ್ನಿ ಮತ್ತು ಮಕ್ಕಳನ್ನು ಸೇರಿದ್ದು ನ್ಯಾಯಾಲಯದಲ್ಲಿ ಮೂಡಿದ ಸಂಭ್ರಮಕ್ಕೆ ಕಾರಣವಾಯಿತು.
ಪತಿ ಮತ್ತು ಪತ್ನಿ ಪರಸ್ಪರ ಸಿಹಿ ಹಂಚಿಕೊಂಡು, ಇನ್ನು ಮುಂದೆ ಸಹಬಾಳ್ವೆಯ ಜೀವನ ನಡೆಸುವ ವಾಗ್ದಾನ ಮಾಡಿ ರಾಜಿ ಸಂಧಾನ ಪತ್ರಕ್ಕೆ ಸಹಿ ಮಾಡಿದರು ಎಂದು ಪತಿ ಪರ ವಕಾಲತ್ತು ವಹಿಸಿದ್ದ ಹಿರಿಯ ವಕೀಲ ಎಸ್.ಎಸ್.ಘಟವಾಳಿಮಠ ಮಾಧ್ಯಮ ಪ್ರತಿನಿಧಿಗಳೊಂದಿಗೆ ಪ್ರಕರಣದ ವಿವರ ಹಂಚಿಕೊಂಡರು.