Breaking News

ವಿರೋಧಿಗಳಿಗೆ ಮುಖ್ಯಮಂತ್ರಿ ಟಕ್ಕರ್! ಬಿಎಸ್​ವೈಗೆ ಎರಡು ಟಾಸ್ಕ್​ ಕೊಟ್ಟ ಹೈಕಮಾಂಡ್.


ಯಾವಾಗ ಸಿಎಂ ಬಿ. ಎಸ್​. ಯಡಿಯೂರಪ್ಪ ದೆಹಲಿಗೆ ಹೋದರೋ, ಆಗಿನಿಂದಲೂ ರಾಜ್ಯದಲ್ಲಿ ಎದ್ದ ಗಾಳಿ ಸುದ್ದಿ ಅಂದರೆ, ಬಿಎಸ್​ವೈ ರಾಜೀನಾಮೆ ನೀಡಲಿದ್ದಾರೆ ಎಂಬುದು. ಮೊದಲೇ ಕೆಲವು ತಿಂಗಳಿಂದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಬದಲಾವಣೆ ಬಗ್ಗೆ ವಿರೋಧಿಗಳು ಪದೇಪದೆ ಹೇಳಿಕೆ ಕೊಡುತ್ತಿರುವುದಕ್ಕೂ, ಬಿಎಸ್​ವೈ ದೆಹಲಿಗೆ ಹಾರಿದ್ದಕ್ಕೂ ತಾಳೆ ಆಗುವಂತೆ ಅಂತೆ-ಕಂತೆ ಜೋರಾಗಿದ್ದ ಬೆನ್ನಲ್ಲೇ ಸಿಎಂ ಇದೀಗ ಸ್ಪಷ್ಟೀಕರಣ ಕೊಟ್ಟಿದ್ದಾರೆ.

ಇದಲ್ಲದೆ, ದೆಹಲಿಯಲ್ಲಿ ಬಿ.ಎಸ್. ಯಡಿಯೂರಪ್ಪ ತಮ್ಮ ವಿರೋಧಿಗಳಿಗೆ ಠಕ್ಕರ್ ಕೂಡ ಕೊಟ್ಟಿದ್ದಾರೆ. ದೆಹಲಿಗೆ ಬಿಎಸ್​ವೈರನ್ನ ಹೈಕಮಾಂಡ್​ ಕರೆಸಿ ಕೊಳ್ಳೋದು ತೀರಾ ವಿಶಿಷ್ಟ ಸಂದರ್ಭಗಳಲ್ಲಿ ಎಂಬಂತಾಗಿರೋ ಪರಿಸ್ಥಿತಿಯಲ್ಲಿ ಬಿಎಸ್​ವೈ ರಾಜಧಾನಿಗೆ ತೆರಳಿದ್ದು ಅನೇಕ ಊಹಾಪೋಹಗಳಿಗೆ ಸಾಕ್ಷಿಯಾಗಿತ್ತು.

ಇದರ ಬೆನ್ನಲ್ಲೇ ದೆಹಲಿಯಲ್ಲಿ ಯಾವುದೇ ರೀತಿ ನಾಯಕತ್ನಕ್ಕೆ ಕುತ್ತು ತರುವಂತಹ ಘಟನೆಗಳು ನಡೆಯದೇ, ಡೋಂಟ್ ವರಿ ಅನ್ನೋ ಭರವಸೆ ಬಿಜೆಪಿ ವರಿಷ್ಟರಿಂದ ಸಿಕ್ಕಿದ್ದು ಸಿಎಂ ಬಿಎಸ್ ಯಡಿಯೂರಪ್ಪಗೆ ನೂರಾನೆ ಬಲ ನೀಡಿದೆ. ಹೀಗಾಗಿಯೇ ಬಿಎಸ್ವೈ ಎಷ್ಟು ಕಾನ್ಫಿಡೆನ್ಸ್ ಆಗಿದ್ದರು ಎಂದ್ರೆ, ರಾಜೀನಾಮೆ ನೀಡೋ ಸಂಗತಿ ನಿಜವಲ್ಲ.. ನಿಜವಲ್ಲ.. ನಿಜವಲ್ಲ.. ಅಂತಾ ಸಾರಿ ಸಾರಿ ಹೇಳಿದ್ದಾರೆ. ಯಡಿಯೂರಪ್ಪ ಉತ್ತರ ಕೊಟ್ಟ ಧಾಟಿ, ಮಾಧ್ಯಮಗಳಿಗೆ ಮಾತ್ರ ಹೇಳಿದ್ದಲ್ಲ, ಇದರ ಜತೆಗೆ ಯಡಿಯೂರಪ್ಪ ಬದಲಾಗೇ ಬಿಡ್ತಾರೆ ಅಂತಾ ಸೂಟು ಬೂಟು ಹೊಲಿಸಿಕೊಂಡಿರೋ ಭಿನ್ನ ನಾಯಕರಿಗೂ ನೇರ ಸಂದೇಶ ಕೊಟ್ಟಂತಿತ್ತು.

ಬಿಎಸ್​ವೈ ದೆಹಲಿ ಭೇಟಿ ಉದ್ದೇಶಗಳು ಹಲವಾರಿದ್ರೂ, ಎಲ್ಲರನ್ನ ಸೆಳೆದಿದ್ದು ನಾಯಕತ್ವ ಬದಲಾವಣೆ ಬಗೆಗಿನ ವದಂತಿ. ಮೇಕದಾಟು ಯೋಜನೆ ಸೇರಿದಂತೆ ನಾನಾ ಅಭಿವೃದ್ಧಿ ಕಾರ್ಯಗಳ ಬಗ್ಗೆಯೂ ಸಂಬಂಧಪಟ್ಟ ಸಚಿವರ ಜತೆ ಚರ್ಚೆಗೂ ಬಿಎಸ್​ವೈ ದೆಹಲಿಗೆ ತೆರಳಿದ್ದಾರೆ. ಆದ್ರೆ, ಇದನ್ನೇ ಕಾಯುತ್ತಿದ್ದ ಬಿಎಸ್​ವೈ ವಿರೋಧಿ ಪಡೆ, ಯಡಿಯೂರಪ್ಪ ರಾಜೀನಾಮೆ ಬಗೆಗಿನ ಗುಸುಗುಸುಗೆ ರೆಕ್ಕೆಪುಕ್ಕೆ ನೀಡಿತು ಅಂತಾನೇ ಹೇಳಬಹುದು.

ದೆಹಲಿ ಭೇಟಿಯ ಎರಡನೇ ದಿನ ಬಿಎಸ್ ಯಷಡಿಯೂರಪ್ಪ ಬಿಜೆಪಿ ಹಿರಿಯ ನಾಯಕರನ್ನ ಭೇಟಿಯಾಗಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ನಿವಾಸಕ್ಕೆ ತೆರಳಿದ ಬಿಎಸ್ ಯಡಿಯೂರಪ್ಪ, ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ. ಅಲ್ಲದೆ, ನಾಯಕತ್ವ ಬದಲಾವಣೆ ಬಗೆಗಿನ ಗೊಂದಲ ಪರಿಹಾರ ಸಂಬಂಧವೂ ಜೆಪಿ ನಡ್ಡಾ ಜತೆ ಸಿಎಂ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಈ ವೇಳೆ, ಸಿಎಂ ಬಿಎಸ್​ವೈಗೆ ಜೆಪಿ ನಡ್ಡಾ ಇದಕ್ಕೆಲ್ಲಾ ತಲೆಕೆಡಿಸಿಕೊಳ್ಳಬೇಡಿ. ನಿಮ್ಮ ಪಾಡಿಗೆ ನೀವು ಅಭಿವೃದ್ಧಿ ಕಾರ್ಯಗಳನ್ನ ಮುಂದುವರೆಸಿಕೊಂಡು ಹೋಗಿ ಎಂದು ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ. ಇದರಿಂದಾಗಿ ಬಿಜೆಪಿ ಹೈಕಮಾಂಡ್​​, ಯಡಿಯೂರಪ್ಪ ಬದಲಾವಣೆ ಬಗ್ಗೆ ಯಾವುದೇ ಒಲವು ತೋರಿಲ್ಲ ಎಂಬಂತಾಯಿತು. ಈ ಸಂದರ್ಭದಲ್ಲಿ ಸಿಎಂ ಯಡಿಯೂರಪ್ಪ ಜತೆಗೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿವೈ ವಿಜಯೇಂದ್ರ ಕೂಡ ಇದ್ದರು.

ಬಿಜೆಪಿ ನ್ಯಾಷನಲ್ ಪ್ರೆಸಿಡೆಂಟ್ ಜೆಪಿ ನಡ್ಡಾ ಭೇಟಿ ಅಲ್ಲದೆ, ದೆಹಲಿಯಲ್ಲಿ ಬಿಎಸ್ ಯಡಿಯೂರಪ್ಪ ರಕ್ಷಣಾ ಸಚಿವ ಹಾಗೂ ಪಕ್ಷದ ಹಿರಿಯ ನಾಯಕ ರಾಜನಾಥ್ ಸಿಂಗ್ ಜತೆಗೂ ಸಮಾಲೋಚನೆ ನಡೆಸಿದ್ದಾರೆ. ಈ ವೇಳೆ ಕರ್ನಾಟಕದಲ್ಲಿನ ಬಿಎಸ್​ವೈ ಆಡಳಿತದ ಬಗ್ಗೆ ಖುಷಿಪಟ್ಟ ರಾಜನಾಥ್ ಸಿಂಗ್, ಉತ್ತಮ ಕೆಲಸಗಳನ್ನ ಮಾಡುತ್ತಿದ್ದೀರಿ. ಇದನ್ನೇ ಮುಂದುವರೆಸಿಕೊಂಡು ಹೋಗಿ ಎಂದು ಬೆನ್ನುತಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಬಿಜೆಪಿಗೆ ಉಜ್ವಲ ಭವಿಷ್ಯವಿದೆ. ಪಕ್ಷವನ್ನ ಮರಳಿ ಅಧಿಕಾರಕ್ಕೆ ತರೋ ನಿಟ್ಟಿನಲ್ಲಿ ಅಭಿವೃದ್ಧಿ ಕಾರ್ಯಗಳನ್ನ ಮಾಡಿಕೊಂಡು ಹೋಗಿ. ಇದರ ಜತೆಗೆ ಪಕ್ಷ ಸಂಘ ಟನೆಗೂ ಒತ್ತುಕೊಡಬೇಕೆಂದು ರಾಜನಾಥ್ ಸಿಂಗ್ ಬಿಎಸ್​​ವೈಗೆ ಸಲಹೆ ಕೊಟ್ಟಿದ್ದಾರೆ.

ಇನ್ನ, ದೆಹಲಿಗೆ ತೆರಳಿದ ಸಿಎಂ ಬಿಎಸ್ ಯಡಿಯೂರಪ್ಪಗೆ ನಿಜಕ್ಕೂ ಅಲ್ಲಿ ಕಮಲ ವರಿಷ್ಟರಿಂದ ಸಿಕ್ಕಿದ್ದು ಶಹಬ್ಬಾಸ್​ಗಿರಿ. ಮೊದಲ ದಿನ ಪ್ರಧಾನಿ ನರೇಂದ್ರ ಮೋದಿರನ್ನ ಭೇಟಿಯಾದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪಗೆ ಪ್ರಧಾನಿ ಡೋಂಟ್ ವರಿ ಎಂದು ಅಭಯ ನೀಡಿದ್ದಾರೆ. ಜತೆಗೆ ರಾಜ್ಯದ ಸಮಗ್ರ ಅಭಿವೃದ್ಧಿ ಬಗ್ಗೆಯೂ ಮೋದಿ, ಯಡಿಯೂರಪ್ಪ ಜತೆ ಅರ್ಧಗಂಟೆಗಳ ಕಾಲ ಚರ್ಚೆ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ಸಿಎಂ ಬಿಎಸ್​ವೈ ಹಲವಾರು ಅಭಿವೃದ್ಧಿ ಯೋಜನೆಗಳಿಗಾಗಿ ಕೇಂದ್ರದ ನೆರವು ನೀಡಬೇಕೆಂದು ಕೋರಿದ್ದಾರೆ. ಇದರ ಜತೆಗೆ ಭದ್ರಾ ಮೇಲ್ದಂಡೆ ಯೋಜನೆಯನ್ನ ರಾಷ್ಟ್ರೀಯ ಯೋಜನೆ ಎಂದು ಪರಿಗಣಿಸಬೇಕು ಎಂದು ಮನವಿ ಮಾಡಿದ ಬಿಎಸ್ ಯಡಿಯೂರಪ್ಪ, ಬೆಂಗಳೂರು ಪೆರಿಫರೆಲ್ ರಿಂಗ್ ರಸ್ತೆಗಾಗಿ 6 ಸಾವಿರ ಕೋಟಿ ಅನುದಾನ ನೀಡಬೇಕೆಂದು ಪ್ರಧಾನಿ ಮೋದಿ ಬಳಿ ಕೋರಿಕೆ ಸಲ್ಲಿಸಿದ್ದಾರೆ ಎನ್ನಲಾಗಿದೆ. ಇದಕ್ಕೆ ಪೂರಕವಾಗಿ ಬಿಎಸ್​ವೈ ಮನವಿಗೆ ಸ್ಪಂದಿಸಿದ ಮೋದಿ, ಈ ಬಗ್ಗೆ ಪರಿಗಣಿಸೋದಾಗಿ ಭರವಸೆ ಕೊಟ್ಟರು ಎಂದು ಹೇಳಲಾಗಿದೆ.

ಇದರ ಜತೆಗೆ ದೆಹಲಿಯಲ್ಲಿ ಇಡೀ ಬಿಜೆಪಿ ಹೈಕಮಾಂಡ್​ ಬಿಎಸ್ ಯಡಿಯೂರಪ್ಪ ಪರ ಅಚಲವಾಗಿ ನಿಂತಿರೋದು ಪಕ್ಷದಲ್ಲಿನ ಎದುರಾಳಿಗಳ ಬಾಯ್ಮುಚ್ಚಿಸಿದೆ. ಯಾವಾಗ ಯಡಿಯೂರಪ್ಪ ಕುಟುಂಬ ಸಮೇತರಾಗಿ ದೆಹಲಿಗೆ ತೆರಳಿದಾಗ, ಇಲ್ಲೇನೋ ಇದೆ ಎಂಬ ಅನುಮಾನ ಮೂಡಿದ್ದು ಸತ್ಯ. ಮೊದಲೇ ಅನಿರೀಕ್ಷಿತ ಡಿಸಿಷನ್​ಗಳನ್ನ ತೆಗೆದುಕೊಳ್ಳೋದರಲ್ಲಿ ಬಿಜೆಪಿ ಹೈಕಮಾಂಡ್ ಎಕ್ಸ್​​ಪರ್ಟ್​. ಇತ್ತೀಚೆಗಷ್ಟೇ ಕೇವಲ 4 ತಿಂಗಳ ಆಡಳಿತ ನಡೆ ಸಿದ್ದ ಉತ್ತರ್​ಖಂಡ್ ಸಿಎಂ ತೀರಥ್ ಸಿಂಗ್ ರಾವತ್​ರನ್ನ ದೆಹಲಿಗೆ ಕರೆಸಿಕೊಂಡ ಬಿಜೆಪಿ ಹೈಕಮಾಂಡ್ ದಿಢೀರ್​ ರಾಜೀನಾಮೆ ಪಡೆದುಕೊಂಡಿತ್ತು. ಇದರ ಬೆನ್ನಲ್ಲೇ ಬಿಎಸ್​ ಯಡಿಯೂರಪ್ಪ ದೆಹಲಿ ವಿಸಿಟ್ ಕೂಡ ದೇಶಾದ್ಯಂತ ಕುತೂಹಲ ಕೆರಳಿಸಿದ್ದು ಸತ್ಯ.

ಆದ್ರೆ, ದೆಹಲಿಗೆ ಹೋದ ಬಿಎಸ್​ವೈಗೆ ಕೇಸರಿ ನಾಯಕರು, ಡಿಸ್ಟರ್ಬ್​ ಮಾಡೋಕೆ ಹೋಗದೇ, ಸಿಎಂ ಕೈಗೆ ಫುಲ್ ಪವರ್ ಕೊಟ್ಟಿದ್ದಾರೆ. ಒಟ್ಟಾರೆ, ಹೇಳ ಬೇಕೆಂದ್ರೆ ಮೋದಿ, ಅಮಿತ್ ಷಾ, ನಡ್ಡಾ, ರಾಜನಾಥ್ ಸಿಂಗ್​​ ಜತೆಗಿನ ಸಭೆ, ಸಿಎಂ ಯಡಿಯೂರಪ್ಪಗೆ ದೊಡ್ಡ ಮಟ್ಟದ ಶಕ್ತಿ ಕೊಟ್ಟಿದೆ ಅಂತಾನೇ ಹೇಳಬಹುದು. ರಾಜಾಹುಲಿ ದೆಹಲಿಯಲ್ಲಿ ಘರ್ಜಿಸಿದೆ. ಇದರಿಂದ ಪದೇಪದೇ ನಾಯಕತ್ವ ಬದಲಾವಣೆ ಗ್ಯಾರೆಂಟಿ ಅಂತಾ ಟೈಂ ಫಿಕ್ಸ್​ ಮಾಡುತ್ತಲೇ ಬಂದಿದ್ದ ಬಿಎಸ್​ವೈ ವಿರೋಧಿಗಳು ಈಗ ಸೈಲೆಂಟ್ ಆಗಿರುವಂತಾಗಿದೆ.

ನಾಯಕತ್ವ ಬದಲಿಲ್ಲ ಅಂತಾ ಯಾವಾಗ ಹೈಕಮಾಂಡ್​​ ಸಿಎಂಗೆ ಅಭಯ ಕೊಡ್ತೋ, ಬಿಎಸ್​ವೈರಲ್ಲಿ ಹೊಸ ಉತ್ಸಾಹ ಕಂಡುಬಂದಿದೆ. ಇದರ ಬೆನ್ನಲ್ಲೇ ಈಗ್ಲಾದ್ರೂ ಅತೃಪ್ತರು ಸುಧಾರಣೆ ಆಗದಿದ್ರೆ ಕಷ್ಟ ಅನ್ನೋ ಟಫ್ ಮೆಸೇಜ್ ಅನ್ನ ಸಿಎಂ ರವಾನೆ ಮಾಡಿದ್ದಾರೆ. ಇದರ ಜತೆಗೆ ಬಿಎಸ್​ವೈಗೆ ಕೇಂದ್ರ ಬಿಜೆಪಿ ಹೊಸ ಟಾಸ್ಕ್ ಕೊಟ್ಟಿದೆ. ಇದನ್ನ ಅಚ್ಚುಕಟ್ಟಾಗಿ ನಿಭಾಯಿಸಿದ್ರೆ, ಮುಂದೆಯೂ ನಿಮ್ಮ ಪರ ನಿಲ್ಲೋ ಅಭಯವನ್ನ ಬಿಜೆಪಿ ಹೈನಾಯಕರು ನೀಡಿದ್ದಾರೆ. ಇದರಿಂದ ರಾಜಾಹುಲಿ ಇನ್ನಷ್ಟು ಬಲಶಾಲಿಯಾಗಿದೆ.

ಕೊನೆಗೂ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕೊಂಚ ರಿಲೀಫ್ ಆಗಿದ್ದಾರೆ. ಸಿಎಂ ಆದಾಗಿನಿಂದಲೂ ಪದೇಪದೇ ನಾಯಕತ್ವ ಬದಲಾವಣೆ ಕೂಗು ಕೇಳಿಬರುತ್ತಿರೋ ಬೆನ್ನಲ್ಲೇ ಬಿಜೆಪಿ ವರಿಷ್ಠರು ರಾಜಾಹುಲಿಗೆ ಫ್ರೀಡಂ ಕೊಟ್ಟಿದ್ದಾರೆ. ಯಾವುದೇ ಕಾರಣಕ್ಕೂ ನಾಯಕತ್ವ ಬದಲಾವಣೆ ಇಲ್ಲ ಅಂತಾ ಸ್ಪಷ್ಟವಾಗಿ ಹೇಳಿಬಿಟ್ಟಿದೆ ಬಿಜೆಪಿ ಹೈಕಮಾಂಡ್.

ಯಾವಾಗ ಬಿಜೆಪಿ ಹೈಕಮಾಂಡ್​ ಬಿಎಸ್​​ವೈಗೆ ಫುಲ್ ಪವರ್ ಕೊಟ್ಟು ಕಳುಹಿಸಿತೋ, ಸಿಎಂ ಇನ್ನಷ್ಟು ಸ್ಟ್ರಾಂಗ್ ಆಗಿದ್ದಾರೆ. ಇನ್ನ, ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ನಾಯಕತ್ವ ಬದಲಾವಣೆ ಇಲ್ಲ ಎಂದು ಬಿಜೆಪಿ ಹೈಕಮಾಂಡ್ ಸಿಎಂ ಬಳಿ ಕ್ಲಿಯರ್ ಕಟ್ ಆಗಿ ಹೇಳಿದೆ. ಯಾವುದೇ ಕಾರಣಕ್ಕೂ ನಾಯಕತ್ವ ಬದಲಾವಣೆ ಬಗ್ಗೆ ಗೊಂದಲ ಇಲ್ಲ ಅಂತಾ ಹೈಕಮಾಂಡ್ ಸ್ಪಷ್ಟಪಡಿಸಿದೆ .

ಇಲ್ಲೀವರೆಗೂ ನಾಯಕತ್ವ ಬದಲಾವಣೆ ಅಂತಾ ಪದೇಪದೇ ಹೇಳುತ್ತಲೇ ಬಂದಿರೋ ಪಕ್ಷದಲ್ಲಿನ ವಿರೋಧಿ ಬಣಕ್ಕೆ ಬಿಎಸ್​ವೈ ಪರೋಕ್ಷ ಎಚ್ಚರಿಕೆಯನ್ನೂ ರವಾನಿಸಿದ್ದಾರೆ. ಮುಂದಿನ ದಿನಗಳಲ್ಲಾದರೂ ತಪ್ಪು ಸರಿಪಡಿಸಿಕೊಂಡು ಸುಧಾರಣೆಯಾದ್ರೆ ಒಳಿತು ಅಂತಾ ಬಿಎಸ್​ವೈ ಖಡಕ್ ವಾರ್ನ್​ ಮಾಡಿದ್ದಾರೆ. ದೆಹಲಿಗೆ ಎರಡು ದಿನಗಳ ಭೇಟಿಗಾಗಿ ತೆರಳಿದ್ದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ವಾಪಸ್ ಬರುವಾಗ ಫುಲ್ ಜೋಷ್​ನಲ್ಲೇ ಬಂದಿದ್ದಾರೆ. ದೆಹಲಿಯಲ್ಲಿ ಪ್ರಧಾನಿ ಮೋದಿ, ಗೃಹಸಚಿವ ಅಮಿತ್ ಷಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ರನ್ನ ಭೇಟಿಯಾದ ಯಡಿಯೂರಪ್ಪಗೆ ನಾಯಕರು ಡೋಂಟ್ ವರಿ ಎಂದಿರೋದು ಬಿಎಸ್​ವೈಗೆ ಹುಮ್ಮಸ್ಸನ್ನ ಡಬಲ್ ಮಾಡಿದೆ.

ಬಿಎಸ್​ವೈ ಎರಡು ಟಾಸ್ಕ್​
ಬಿಎಸ್​ವೈರನ್ನ ದೆಹಲಿಗೆ ಕರೆಸಿಕೊಂಡಾಗ ಸ್ವಲ್ಪ ಆತಂಕದಲ್ಲೇ ಹೋದ ಯಡಿಯೂರಪ್ಪಗೆ ದೆಹಲಿ ನಾಯಕರು, ರಾಜ್ಯದಲ್ಲಿ ಬಿಜೆಪಿಯನ್ನ ಮತ್ತೆ ಅಧಿಕಾರಕ್ಕೆ ತರೋ ನಿಟ್ಟಿನಲ್ಲಿ ಈಗಿನಿಂದಲೇ ಕಾರ್ಯನಿರ್ವಹಿಸಿ ಅಂತಾ ಟಾಸ್ಕ್ ಕೊಟ್ಟಿದ್ದಾರೆ. ಇದರ ಜತೆಗೆ ಮುಂದಿನ ಲೋಕಸಭಾ ಚುನಾವಣೆಯಲ್ಲೂ ಕರ್ನಾಟಕದಿಂದ ಬಿಜೆಪಿಗೆ ಹೆಚ್ಚು ಸೀಟ್ ಸಿಗೋ ರೀತಿ ಕೆಲಸ ಮಾಡಬೇಕೆಂದು ಕಮಲ ನಾಯಕರು ಸೂಚನೆ ಕೊಟ್ಟು ಕಳುಹಿಸಿದ್ದಾರೆ. ರಾಜ್ಯದಲ್ಲಿ ಬಿಎಸ್​ವೈಗೆ ಪರ್ಯಾಯ ನಾಯಕರ ಶೋಧದಲ್ಲಿ ಬಿಜೆಪಿ ಹೈಕಮಾಂಡ್ ಇದೆ ಎಂಬ ಮಾತನ್ನ ಕೂಡ ಬಿಎಸ್​ವೈ ತಳ್ಳಿ ಹಾಕಿದ್ದಾರೆ. ರಾಜ್ಯ ಬಿಜೆಪಿಯಲ್ಲಿ ನಾಯಕತ್ವಕ್ಕೆ ಕೊರತೆ ಇಲ್ಲ. ಪಕ್ಷದಲ್ಲಿ ಒಬ್ಬರಲ್ಲ..ಮತ್ತೊಬ್ಬರು ಸಮರ್ಥ ನಾಯಕರಿದ್ದಾರೆ ಎಂದು ಬಿಎಸ್​ ಯಡಿಯೂರಪ್ಪ ಪುನರುಚ್ಛರಿಸಿದ್ದಾರೆ.

ಇನ್ನ, ದೆಹಲಿಯಲ್ಲಿ ಯಾವಾಗ ಹೈಕಮಾಂಡ್​, ಮೂಂದಿನ ಚುನಾವಣೆಗೂ ನಿಮ್ಮದೇ ನಾಯಕತ್ವ ಅನ್ನೋದ ಧಾಟಿಯಲ್ಲಿ ಪವರ್ ಕೊಟ್ಟು ಕಳುಹಿಸಿತೋ, ಬಿಎಸ್​ವೈ ಇದೀಗ ಎಲ್ಲಾ ಶಾಸಕರನ್ನ ಇನ್ನಷ್ಟು ವಿಶ್ವಾಸಕ್ಕೆ ತೆಗೆದುಕೊಳ್ಳೋ ಹೆಜ್ಜೆ ಇಟ್ಟಿದ್ದಾರೆ. ಇದೇ ಜುಲೈ 26ರಂದು ಸರ್ಕಾರಕ್ಕೆ ಎರಡು ವರ್ಷ ಕಂಪ್ಲೀಟ್ ಹಿನ್ನೆಲೆ ಅಂದು ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆಯಲು ಬಿಎಸ್​ವೈ ಮುಂದಾಗಿದ್ದಾರೆ. ಈ ಮುಖಾಂತರ, ಬಹಳ ದಿನಗಳಿಂದ ವಿರೋಧೀ ಬಣ ಆಗ್ರಹಿಸ್ತಿದ್ದಂತೆ ಶಾಸಕಾಂಗ ಪಕ್ಷದ ಸಭೆ ಕರೆಯೋ ಮೂಲಕ ಭಿನ್ನಮತಕ್ಕೆ ಬ್ರೇಕ್ ಹಾಕೋ ಯತ್ನಕ್ಕೆ ಕೈಹಾಕಿದ್ದಾರೆ ಅನುಭವೀ ರಾಜಾಹುಲಿ.

ಕಳೆದ ಕೆಲವು ತಿಂಗಳಿಂದ ಆಗಾಗ್ಗೆ ಯಡಿಯೂರಪ್ಪ ಕಾಲೆಳೆಯುತ್ತಿದ್ದ ಬಿಜೆಪಿ ಅತೃಪ್ತರ ಟೀಂಗೆ ಬಿಎಸ್​ವೈ ಸರಿಯಾಗೇ ಠಕ್ಕರ್ ಕೊಟ್ಟಿದ್ದಾರೆ. ನಾಯಕತ್ವ ಬದಲಾವಣೆ ಇಲ್ಲವೇ ಇಲ್ಲ ಅಂತಾ ಬಿಜೆಪಿ ಹೈಕಮಾಂಡ್ ಕಳೆದ ತಿಂಗಳೇ ಸ್ಪಷ್ಟಪಡಿಸಿದ್ರೂ, ಪದೇ ಪದೇ ಈ ಬಗ್ಗೆ ಗುಲ್ಲೆಬ್ಬೋದು ನಿಂತಿರಲಿಲ್ಲ. ಕಳೆದ ತಿಂಗಳು ರಾಜ್ಯದಲ್ಲಿ ಅರುಣ್ ಸಿಂಗ್ 3 ದಿನಗಳ ಪ್ರವಾಸ ಬಳಿಕ ನೀಡಿದ ವರದಿ ಬೆನ್ನಲ್ಲೇ ಹೈಕಮಾಂಡ್​ ಯಡಿಯೂ ರಪ್ಪಗೆ ಫುಲ್ ಮಾರ್ಕ್​ಸ್ ಕೊಟ್ಟಿದೆ. ಜತೆಗೆ ಈಗ ನಿಮ್ಮ ಲಕ್ಷ್ಯ ಮುಂದಿನ ಅವಧಿಗೂ ಪಕ್ಷವನ್ನ ಅಧಿಕಾರಕ್ಕೆ ತರೋದು..ಹಾಗೂ ಲೋಕ ಸಭಾ ಎಲೆಕ್ಷನ್​​ನಲ್ಲೂ ಪಕ್ಷಕ್ಕೆ ಹೆಚ್ಚು ಸ್ಥಾನ ದೊರಕಿಸಿಕೊಡೋದು..ಹೀಗೆ ಎರಡು ಬೃಹತ್ ಗುರಿಯನ್ನ ಸಿಎಂಗೆ ಹೈಕಮಾಂಡ್ ನೀಡಿದೆ. ಇದೀಗ ಚೆಂಡು ಯಡಿಯೂರಪ್ಪ ಅಂಗಳಕ್ಕೆ ಬಂದಿದೆ.

ಅತ್ತ ದಿಲ್ಲಿಯಲ್ಲಿ ಬಿಎಸ್​ವೈಗೆ ಫುಲ್ ಪವರ್ ಸಿಗ್ತೋ..ಸಿಎಂ ನಿಷ್ಠರಲ್ಲಿ ಹೊಸ ಹುರುಪು ಕಂಡುಬಂದಿದೆ. ಇನ್ನ, ಇದೇ ತಿಂಗಳು 26ಕ್ಕೆ ಶಾಸಕಾಂಗ ಪಕ್ಷದ ಸಭೆ ಕರೆದಿರೋದು, ಸಿಎಂ ಪರ ಹಾಘೂ ವಿರೋಧಿ ಬಣಗಳ ಬಲಪ್ರದರ್ಶನಕ್ಕೆ ವೇದಿಕೆ ಸೃಷ್ಟಿಸುತ್ತಾ? ಅಥವಾ ಬಿಎಸ್​ವೈ ತಮ್ಮವಿರೋಧಿಗಳನ್ನ ವಿಶ್ವಾಸಕ್ಕೆ ತೆಗೆದುಕೊಳ್ಳೋ ಕೆಲಸ ಮಾಡ್ತಾರಾ? ಅಥವಾ ಖಡಕ್ ಎಚ್ಚರಿಕೆ ಕೊಡೋ ಮೂಲಕ ಸೈಲೆಂಟ್ ಮಾಡ್ತಾರಾ ಎಂಬುದೇ ಕುತೂಹಲ. ಬಿಎಸ್ ಯಡಿಯೂರಪ್ಪ ಯಾವಾಗ ಎರಡು ವರ್ಷಗಳ ಹಿಂದೆ ಸಿಎಂ ಆಗಿ ಪದಗ್ರಹಣ ಮಾಡಿದರೋ, ಆವಾಗಿನಿಂದಲೂ ಬಿಜೆಪಿಯಲ್ಲಿ ತೆರೆಮರೆ ವಿಪ್ಲವ. ಅದರಲ್ಲೂ ಒಂದು ವರ್ಷದಿಂದೀಚೆಗಂತೂ ಬಿಎಸ್​ವೈ ಮುಂದುವರೀತಾರೋ? ನಾಯಕತ್ವ ಬದಲಾವಣೆ ಆಗುತ್ತೋ? ಈ ಬಗ್ಗೆಯೇ ಬಿಸಿಬಿಸಿ ಚರ್ಚೆ.

ನಾಯಕತ್ವ ಬಗ್ಗೆ ನಿಜಕ್ಕೂ ಸವಾಲು ಎದುರಾಗಿದ್ದು ಕಳೆದ ತಿಂಗಳು. ಯಾವಾಗ ಸಚಿವ ಸಿಪಿ ಯೋಗೇಶ್ವರ್ ದೆಹಲಿಗೆ ಹಾರಿದರೋ, ವರಿಷ್ಠರಿಗೆ ಬಿಎಸ್​ವೈ ವಿರುದ್ಧ ಚಾರ್ಜ್​ಶೀಟ್ ಸಲ್ಲಿಸೋ ಯತ್ನ ಮಾಡಿದರೋ, ನೇರವಾಗಿ ಸಿಎಂ ಹಾಗೂ ಸಿಎಂ ಪುತ್ರ ಬಿವೈ ವಿಜಯೇಂದ್ರ ವಿರುದ್ಧ ದನಿ ಎತ್ತಿದರೋ, ರಾಜ್ಯದಲ್ಲಿ ಏನೋ ಆಗೇ ಹೋಗಲಿದೆ ಎಂಬಂತೆ ಬೆಂಕಿ ಹೊತ್ತುರಿದಿದ್ದು ನಿಜ. ಆ ಬಳಿಕ ಅತೃಪ್ತ ಶಾಸಕರ ಲಿಸ್ಟ್​ನಲ್ಲಿರೋ ಶಾಸಕ ಅರವಿಂದ್ ಬೆಲ್ಲದ್, ಟೆಲಿಫೋನ್ ಟ್ಯಾಪ್ ಬಗ್ಗೆ ಆರೋಪಿಸಿದ್ದು..ಪದೇಪದೇ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಾಯಕತ್ವ ಬದಲಾಗೇ ಬಿಡಲಿದೆ ಅಂತಾ ಪ್ರೊಮೋ ಕೊಡೋದು ನಡೆದುಕೊಂಡೇ ಬಂದಿದೆ.

ರಾಜ್ಯದಲ್ಲಿ ಶಾಸಕರ ಅಭಿಪ್ರಾಯ ಸಂಗ್ರಹ ವೇಳೆ ರಾಜ್ಯ ಉಸ್ತುವಾರಿ ಅರುಣ್ ಸಿಂಗ್​ಗೆ 3-4 ಶಾಸಕರನ್ನ ಬಿಟ್ರೆ, ಬಹುತೇಕ ಶಾಸಕರು ಸಿಎಂ ಪರ ನಿಂತಿದ್ದಾರೆ ಅಂತಾ ರಿಪೋರ್ಟ್​ ಕೊಟ್ಟರೋ, ಹೈಕಮಾಂಡ್ ವಾಸ್ತವ ಪರಿಸ್ಥಿತಿಯನ್ನ ಮನದಟ್ಟು ಮಾಡಿಕೊಂಡಂತಿದೆ. ಯಾರು ಏನೇ ಮಾಡಿದರೂ, ಎಷ್ಟೇ ತಂತ್ರಗಾರಿಕೆ ರೂಪಿಸಿದ್ರೂ ಬಿಎಸ್​ವೈ ಪರ ನಿಂತ ಬಹುದೊಡ್ಡ ಸಮುದಾಯ ಹೊಂದಿರೋ ನಿಷ್ಠೆ ಬದಲಿಸಿಲ್ಲ.. ಒಂದೊಮ್ಮೆ ಬಿಎಸ್​ವೈರನ್ನ ಟಚ್ ಮಾಡಿದ್ರೆ, ಪಕ್ಷಕ್ಕೆ ಬಿಗ್ ಲಾಸ್ ಗ್ಯಾರೆಂಟಿ ಅನ್ನೋ ರಿಪೋರ್ಟ್​ ಕೂಡ ಹೈ ಕಮಾಂಡ್​ಗೆ ತಲುಪಿದೆ.

ಹೀಗಾಗೇ ಬಿಎಸ್​ವೈಗೆ ದೆಹಲಿ ಕಮಲ ವರಿಷ್ಠರು ಪೂರ್ಣಾವಧಿ ನೀವೇ ಸಿಎಂ ಅಂತಾ ಹೇಳಿದ್ದಾರೆ. ಮುಂದಿನ ಬಾರಿಯೂ ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೇರುವಂತೆ ಕಾರ್ಯನಿರ್ವಹಿಸಬೇಕು..ಲೋಕಸಭಾ ಎಲೆಕ್ಷನ್​ನಲ್ಲಿ ಹೆಚ್ಚಿನ ಸ್ಥಾನ ಗಳಿಸೋ ನಿಟ್ಟಿ ನಲ್ಲಿ ಈಗಿನಿಂದಲೇ ಪಕ್ಷ ಸಂಘ ಟನೆಯಲ್ಲಿ ತೊಡಗಿಸಿಕೊಳ್ಳ ಬೇಕು ಅಂತಾ ಕಮಲ ಕಮ್ಯಾಂಡ್ ಸಿಎಂಗೆ 2 ಟಾರ್ಗೆಟ್​ಗಳನ್ನ ನೀಡಿದೆ. ಇದರೊಂದಿಗೆ ರಾಜ್ಯದಲ್ಲಿ ಈ ಅವಧಿ ಪೂರ್ಣ ಬಿಎಸ್​ವೈ ಸಿಎಂ ಆಗಿ ಕಂಟಿನ್ಯೂ ಆಗೋದು ಪಕ್ಕಾ ಆದಂತಾಯಿತು. ನಾಯಕತ್ವ ಬದಲಾವಣೆ ಬಗ್ಗೆ ವದಂತಿ ಸೃಷ್ಟಿಕೋರರಿಗೆ ಚಾಟಿ ಬೀಸಿದಂತಾಯಿತು.,

ರಾಜಾಹುಲಿ ಬಿಎಸ್​ವೈ ತಲೆ ಮೇಲೆ ತೂಗುತಿದ್ದ ತೂಗುಗತ್ತಿಯಿಂದ ಬಚಾವ್ ಆಗಿದ್ದಾರೆ. ಸಿಎಂರನ್ನ ದೆಹಲಿಗೆ ಕರೆಸಿಕೊಂಡ ಕಮಲ ಕಮ್ಯಾಂಡ್, ಇನ್ನೂ ಎರಡು ವರ್ಷ ನೀವೇ ಸಿಎಂ..ಡೋಂಟ್ ವರಿ ಅಂತಾ ಅಭಯ ನೀಡಿ ಕಳುಹಿಸಿದೆ. ಇದರಿಂದ ನಾಯಕತ್ವ ಬದಲಾವಣೆ ಇಲ್ಲವೇ ಇಲ್ಲ ಅಂತಾ ಕಮಲ ವರಿಷ್ಠ ಪಡೆ ಕ್ಲಿಯರ್ ಆಗಿ ಹೇಳಿದೆ. ಇದೀಗ ರಾಜ್ಯ ಬಿಜೆಪಿಯಲ್ಲಿ ಬಿಎಸ್​ವೈ ಏಕಮದ್ವಿತೀಯ ನಾಯಕ ಅನ್ನೋದು ಮತ್ತೊಮ್ಮೆ ಪ್ರೂವ್ ಆಗಿದೆ.


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

ಸಮಾಜ ಸೇವೆಯ ಸಾಧನೆಗೆ ಒಲಿದು ಬಂದಿತ್ತು ಗೌರವ ಡಾಕ್ಟರೇಟ್ ಪದವಿ.

ಇಂದಿನ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ರಾಜಕೀಯ ಹಾಗೂ ಪ್ರಚಾರದ ಹಿನ್ನೆಲೆಯಲ್ಲಿ ಹಲವರು ಮಾಧ್ಯಮಗಳಲ್ಲಿ ಪ್ರಚಾರದ ಮೂಲಕ ಹಾಗೂ ವೇದಿಕೆಯ ಭರ್ಜರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ