ಸಂಗೊಳ್ಳಿ ರಾಯಣ್ಣನ ಪುತ್ಥಳಿ ಅನಾವರಣ ಮಾಡಿದ ಮುಖ್ಯಮಂತ್ರಿ
ಯಾವ ತಪ್ಪು ಮಾಡಿಲ್ಲ. ಅಧಿಕಾರದಿಂದ ಕೆಳಗಿಳಿಸುವ ವಿರೋಧಿಗಳ ಹುನ್ನಾರ ನಡೆಯಲ್ಲ
ಬಾಲಚಂದ್ರ ಜಾರಕಿಹೊಳಿ ನಮ್ಮವರು. ಆದರೆ ಅವರ ಮಿತ್ರರು ನಮ್ಮವರಲ್ಲ ; ಬಾಲಚಂದ್ರರತ್ತ ಮುಖ ನೋಡಿ ಮುಗುಳ್ನಗೆ ಬೀರಿದ ಸಿದ್ದರಾಮಯ್ಯ
ಗೋಕಾಕ: ಸಂಗೊಳ್ಳಿ ರಾಯಣ್ಣ ಹುಟ್ಟಿದ ಸ್ಥಳದಲ್ಲಿ ಮ್ಯೂಜಿಯಮ್ ಮತ್ತು ಸೈನಿಕ ಶಾಲೆ ತೆರೆಯಲಾಗಿದೆ. ನಂದಗಡದಲ್ಲಿರುವ ಸಮಾಧಿಯನ್ನು ಸಹ ಅಭಿವೃದ್ದಿ ಮಾಡಲಾಗಿದೆ. ಸಂಗೊಳ್ಳಿ ಯಾತ್ರಾ ಕೇಂದ್ರವಾಗಬೇಕು. ರಾಯಣ್ಣನ ಜೀವನ ದರ್ಶನದ ಬಗ್ಗೆ ಇಂದಿನ ಯುವ ಪೀಳಿಗೆಗೆ ಅರಿವು ಮೂಡಿಸಬೇಕಾದ ಅಗತ್ಯವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿದರು.
ಸೋಮವಾರದಂದು ತಾಲೂಕಿನ ಕೌಜಲಗಿ ಪಟ್ಟಣದಲ್ಲಿ ಕಾಂತ್ರಿವೀರ ಸಂಗೊಳ್ಳಿ ರಾಯಣ್ಣನ ಕೋಟೆ ಮತ್ತು ಕಂಚಿನ ಪುತ್ಥಳಿಯನ್ನು ಅನಾವರಣಗೊಳಿಸಿ ಮಾತನಾಡಿದ ಅವರು, ರಾಯಣ್ಣನ ದೇಶಪ್ರೇಮವನ್ನು ಪ್ರತಿಯೊಬ್ಬರೂ ಕಲಿಯಬೇಕಿದೆ ಎಂದು ತಿಳಿಸಿದರು.
ಕಿತ್ತೂರು ಸಂಸ್ಥಾನದಲ್ಲಿ ಸಂಗೊಳ್ಳಿ ರಾಯಣ್ಣ ಸೈನಿಕನಾಗಿ, ಕಿತ್ತೂರ ಚೆನ್ನಮ್ಮನ ಬಲಗೈ ಬಂಟನಾಗಿ ಬ್ರಿಟಿಷರ ವಿರುದ್ಧ ಹೋರಾಟ ಮಾಡುತ್ತಿದ್ದ. ಅತ್ಯಂತ ಪರಾಕ್ರಮ ಹೋರಾಟದಿಂದ ಬ್ರಿಟಿಷರಿಗೆ ಸಿಂಹಸ್ಪಪ್ನವಾಗಿದ್ದ. ಕಿತ್ತೂರು ಸಂಸ್ಥಾನಕ್ಕೆ ಮೊದಲ ಯುದ್ಧದಲ್ಲಿ ಜಯ ಸಿಕ್ಕಿತ್ತಾದರೂ, ಎರಡನೇ ಯುದ್ಧದಲ್ಲಿ ಸೋಲನ್ನು ಅನುಭವಿಸಬೇಕಾಗುತ್ತದೆ. ಇದರಿಂದ ಕಿತ್ತೂರು ಸಂಸ್ಥಾನದ ರಾಣಿ ಚೆನ್ನಮ್ಮ ಬಂಧಿಯಾಗುತ್ತಾರೆ. ಆಗ ಸಂಗೊಳ್ಳಿ ರಾಯಣ್ಣ ಸೆರೆಯಾಗದೇ ಕಿತ್ತೂರನ್ನು ಬ್ರಿಟಿಷರ ಕಪಿಮುಷ್ಠಿಯಿಂದ ಪಾರು ಮಾಡಲು ಸೈನ್ಯ ಕಟ್ಟಿಕೊಂಡು ಗೆರಿಲ್ಲಾ ಮಾದರಿಯಲ್ಲಿ ಯುದ್ಧ ಮಾಡುತ್ತಾನೆ. ಬ್ರಿಟಿಷರಿಗೆ ರಾಯಣ್ಣ ಚಳ್ಳೆ ಹಣ್ಣು ತಿನ್ನಿಸುತ್ತಾನೆ. ಬ್ರಿಟಿಷರ ಕೈಗೆ ಸಿಗದ ರಾಯಣ್ಣನನ್ನು ಬ್ರಿಟಿಷರು ನಮ್ಮವರನ್ನೇ ಬಳಕೆ ಮಾಡಿಕೊಂಡು ಈಜುವ ಸಮಯದಲ್ಲಿ ಹಿಡಿದು ಬ್ರಿಟಿಷರಿಗೆ ಒಪ್ಪಿಸುತ್ತಾರೆ. ಇಂತಹ ದೇಶದ್ರೋಹಿಗಳು ಈಗಲೂ ಇದ್ದಾರೆಂದು ಸಿದ್ದರಾಮಯ್ಯ ಹೇಳಿದರು
ಕೌಜಲಗಿ, ಕಳ್ಳಿಗುದ್ದಿ, ಯಾದವಾಡ ಮತ್ತು ಕಲ್ಲೋಳ್ಳಿಯಲ್ಲಿ ಸಂಗೋಳ್ಳಿ ರಾಯಣ್ಣನ ಪುತ್ಥಳಿ ಅನಾವರಣಗೊಳಿಸಲು ಕಳೆದ ಒಂದು ವರ್ಷದಿಂದ ಇಲ್ಲಿನ ಬಾಂಧವರು ಸಂಪರ್ಕ ಮಾಡುತ್ತಲೇ ಇದ್ದರು. ಆದರೆ ತಡವಾಗಿಯಾದರೂ ಈಗ ಲೋಕಾರ್ಪಣೆ ಮಾಡುವ ಭಾಗ್ಯ ನನ್ನದಾಗಿದೆ. ಕಂಚಿನ ಪುತ್ಥಳಿಯನ್ನು ಉದ್ಘಾಟಿಸುತ್ತಿರುವುದು ಹೆಮ್ಮೆಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅರಭಾವಿ ಶಾಸಕ ಹಾಗೂ ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ವಹಿಸಿದ್ದರು. ಸಾನಿಧ್ಯವನ್ನು ಭಾಗೋಜಿಕೊಪ್ಪದ ಮಹಾಸ್ವಾಮಿಗಳು ವಹಿಸಿದ್ದರು.
ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ, ವಿಧಾನಸಭೆಯ ಮುಖ್ಯಸಚೇತಕ ಅಶೋಕ ಪಟ್ಟಣ, ಸ್ಥಳೀಯ ಸಂಗೊಳ್ಳಿ ರಾಯಣ್ಣ ಪ್ರತಿಷ್ಠಾನದ ಅಧ್ಯಕ್ಷ ರಾಜೇಂದ್ರ ಸಣ್ಣಕ್ಕಿ, ಮೃಣಾಲ ಹೆಬ್ಬಾಳಕರ, ಬುಡಾ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ, ಅರವಿಂದ ದಳವಾಯಿ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.
ಕೌಜಲಗಿ ತಾಲೂಕು ರಚನೆಗೆ ಆಗ್ರಹಿಸಿ ಚಾಲನಾ ಸಮಿತಿ ಮುಖಂಡ ಎಮ್.ಆರ್.ಭೋವಿ ಅವರು ಮುಖ್ಯಮಂತ್ರಿಗಳಿಗೆ ಮನವಿ ಅರ್ಪಿಸಿದರು.
ನಾನು ಯಾವ ತಪ್ಪೂ ಮಾಡಿಲ್ಲ, ಆದರೂ ಹೇಗಾದರೂ ಮಾಡಿ ನನ್ನನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎಂದು ನಮ್ಮ ವಿರೋಧಿಗಳು ಪ್ರಯತ್ನ ಮಾಡುತ್ತಿದ್ದಾರೆ. ಅದು ಸಾಧ್ಯವೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗುಡುಗಿದರು.
ಎಲ್ಲಿಯವರೆಗೆ ಜನಗಳ ಆಶೀರ್ವಾದ ಇರುತ್ತೋ ಅಲ್ಲಿಯ ತನಕ ನನ್ನನ್ನು ಯಾರೂ ಮುಟ್ಟಕ್ಕಾಗಲ್ಲ. ಹಿಂದುಳಿದವರು ಮುಖ್ಯಮಂತ್ರಿ ಆಗಿದ್ದಾರೆ ಅಂತಾ ತಡಕೊಳ್ಳುಕ್ಕೆ ನಮ್ಮ ವಿರೋಧ ಪಕ್ಷಗಳಿಗೆ ಆಗುತ್ತಿಲ್ಲ ಎಂದು ಕಿಡಿಕಾರಿದರು.
ಬಾಲಚಂದ್ರ ಜಾರಕಿಹೊಳಿ ಅವರು ಬಿಜೆಪಿ ಶಾಸಕರಿದ್ದರೂ ಅವರು ನಮ್ಮ ಪರವಾಗಿದ್ದಾರೆ. ಆದರೇ ಅವರ ಮಿತ್ರರು ಮಾತ್ರ ನಮ್ಮನ್ನು ವಿರೋಧಿಸಿಕೊಂಡು ಬರುತ್ತಿದ್ದಾರೆಂದು ಬಾಲಚಂದ್ರ ಜಾರಕಿಹೊಳಿ ಅವರತ್ತ ಮುಖ ನೋಡಿ ಸಿಎಂ ಸಿದ್ದರಾಮಯ್ಯ ಅವರು ಮುಗುಳ್ನಗೆ ಬೀರಿದರು.