ಬೆಂಗಳೂರು: ಹೈಕಮಾಂಡ್ ಬುಲಾವ್ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಇಂದು ಮಧ್ಯಾಹ್ನ ದಿಢೀರ್ ದೆಹಲಿಗೆ ಪ್ರವಾಸ ಕೈಗೊಂಡಿದ್ದಾರೆ. ಏಕಾಏಕಿ ಬಿಜೆಪಿ ಹೈಕಮಾಂಡ್ ಸಿಎಂ ಗೆ ಕರೆ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಮಳೆಯ ಅಬ್ಬರಕ್ಕೆ ತತ್ತರಿಸಿರುವ ರಾಜಧಾನಿ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಪರಿಶೀಲನೆ, ವಲಯವಾರು ಸಚಿವರ ನೇಮಕ, ಕೈಗೊಳ್ಳಬೇಕಿರುವ ಅಗತ್ಯ ಕ್ರಮಗಳ ಬಗ್ಗೆ ಚರ್ಚಿಸುತ್ತಿದ್ದ ಸಂದರ್ಭದಲ್ಲಿಯೇ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಹೈಕಮಾಂಡ್ ದೆಹಲಿಗೆ ಬರುವಂತೆ ಬುಲಾವ್ ನೀಡಿದಾರೆ.ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಕಚೇರಿಯಿಂದಲೇ ಸಿಎಂ ಬೊಮ್ಮಾಯಿ ಅವರಿಗೆ ದೂರವಾಣಿ ಕರೆ ಬಂದಿದ್ದು, ದೆಹಲಿಗೆ ತಕ್ಷಣ ಬರುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸಿಎಂ ಇಂದು ಮಧ್ಯಾಹ್ನವೇ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.
ಈಗಾಗಲೇ ಹಲವು ಬಾರಿ ಸಿಎಂ ದೆಹಲಿಗೆ ತೆರಳಿದ್ದರೂ, ವರಿಷ್ಠರನ್ನು ಭೇಟಿಯಾಗಿದ್ದರೂ ಕೂಡ ರಾಜ್ಯ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆಗೆ ಯಾವುದೇ ಅನುಮತಿ ಸಿಕ್ಕಿರಲಿಲ್ಲ. ಈ ನಿಟ್ಟಿನಲ್ಲಿ ಇದೀಗ ಸಿಎಂ ಬೊಮ್ಮಾಯಿ ಅವರಿಗೆ ವರಿಷ್ಠರು ದಿಢೀರ್ ಬುಲಾವ್ ನೀಡಿದ್ದು, ಈಗಲಾದರೂ ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ನೀಡುತ್ತಾರೆಯೇ ಎಂಬ ಕುತೂಹಲ ಹೆಚ್ಚಿದೆ.