–C L ಖಡಕಭಾಂವಿ
ಗೋಕಾಕ: ತಾಲೂಕಿನಲ್ಲಿ ದಿನೇ ದಿನೇ ಕೊರೊನಾ ಲಸಿಕೆ ಕೊರತೆ ಹೆಚ್ಚಾಗುತ್ತಿದೆ. ಲಸಿಕೆ ವಿತರಣೆಯಲ್ಲಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ವ್ಯಾಕ್ಸಿನ್ ಕೇಂದ್ರದಲ್ಲಿ ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.
ಕಳೆದ ಎರಡು ದಿನಗಳಿಂದ ನಗರ ಹಾಗೂ ಅನೇಕ ಹಳ್ಳಿಗಳಲ್ಲಿ ಜನರು ಲಸಿಕೆಗಾಗಿ ಕಾಯುತ್ತಿದ್ದಾರೆ. ನಿನ್ನೆ ಲಸಿಕೆ ಪಡೆಯಲು ಬಂದಾಗ ನಾಳೆ ಬನ್ನಿ ಎಂದಿದ್ದರು. ಆದರೆ ಇಂದು ಔಟ್ ಆಫ್ ಸ್ಟಾಕ್ ಎಂದು ಹೇಳುತ್ತಿದ್ದಾರೆ.ಈಗ “ನಾವು ಏನು ಮಾಡಬೇಕು, ಇನ್ನೂ ಏವಾಗ ಲಸಿಕೆ ಬರುತ್ತೆ” ಎಂದು ಆರೋಗ್ಯ ಅಧಿಕಾರಿಗಳ ವಿರುದ್ಧ ಜನರು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಅತ್ತ ಅನ್ ಲಾಕ್ ಆದಕಾರಣ ಕೆಲಸಕ್ಕೆ ಹೋಗುವ ಜನರಿಗೆ ಕಛೇರಿಗಳಲ್ಲಿ ಲಸಿಕೆ ಕಡ್ಡಾಯ ಹಾಕಿಸಿಕೊಳ್ಳಿ ಎಂದರೆ ಇತ್ತ ಲಸಿಕೆ ಇಲ್ಲ ಎನ್ನುತ್ತಿದ್ದಾರೆ ಅಧಿಕಾರಿಗಳು.
ಲಸಿಕೆ ಹಾಕಿಸಿಕೊಂಡು ಮೂರನೇ ಅಲೆಗೆ ಬ್ರೇಕ್ ಹಾಕಿ ಎಂದು ಕಾರ್ಯಕ್ರಮಗಳಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಕರೆ ನೀಡುತ್ತಿದ್ದಾರೆ. ಅದರಂತೆ ಲಸಿಕಾ ಅಭಿಯಾನಗಳನ್ನು ತಾಲೂಕಾಡಳಿತದಿಂದ ಹಮ್ಮಿಕೊಳ್ಳಲಾಗಿತ್ತು. ಆದರೆ, ಲಸಿಕೆ ಕೊರತೆಯಿಂದಾಗಿ ತಾಲೂಕಿನಲ್ಲಿ ಲಸಿಕಾ ಅಭಿಯಾನಕ್ಕೆ ಬ್ರೇಕ್ ಬಿದ್ದಿದೆ.
ಅದೇ ರೀತಿ ಜನರು ಕೂಡಾ ಇಷ್ಟು ದಿನ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದರು ಈಗ ಲಸಿಕೆ ಪಡೆಯಲು ಲಸಿಕಾ ಕೇಂದ್ರಗಳಿಗೆ ಮುಗಿಬೀಳುತ್ತಿದ್ದಾರೆ. ಆದರೆ, ಲಸಿಕೆ ಕೊರತೆ ಎದುರಾಗಿದೆ. ಹಾಗಾಗಿ, ಲಸಿಕೆಗಾಗಿ ಜನರು ಪರದಾಡುವಂತಾಗಿದೆ.ಗೋಕಾಕ ತಾಲೂಕಿನಲ್ಲಿ ಕೋವಿಡ್ ಲಸಿಕೆ ಖಾಲಿಯಾಗಿದೆ. ಕೋವ್ಯಾಕ್ಸಿನ್ ಇಲ್ಲ, ಕೋವಿಶೀಲ್ಡ್ ಕೂಡ ಇಲ್ಲ. ಲಸಿಕಾ ಕೇಂದ್ರಗಳ ಎದುರು ಕೋವಿಡ್ ಲಸಿಕೆ ಖಾಲಿ ಎಂಬ ಸೂಚನಾ ಪತ್ರಗಳನ್ನು ಲಗತ್ತಿಸಿರುವುದು ಕಂಡುಬರುತ್ತಿದೆ. ಲಸಿಕೆ ಪಡೆಯಲು ಬಂದವರು ಈ ಫಲಕ ನೋಡಿ ಮರಳಿ ಮನೆಗಳತ್ತ ಮುಖ ಮಾಡುತ್ತಿದ್ದಾರೆ. ಲಸಿಕೆ ಕೊರತೆಯಾಗಿರುವುದರಿಂದ ಸಾರ್ವಜನಿಕರು ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಇನ್ನೊಂದು ಕಡೆಗೆ ಇನ್ನೇನೂ ಅನ್ ಲಾಕ್ ಆಗುತ್ತಿದಂತೆ
ಮುಖ್ಯಮಂತ್ರಿಗಳ ಆಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಲಸಿಕೆ ಹಾಕಿದ ನಂತರ ಪದವಿ ತರಗತಿಗಳನ್ನು ಆರಂಭಿಸುವ ಬಗ್ಗೆ ಚರ್ಚಿಸಲಾಯಿತು. ಕಾಲೇಜು ಆರಂಭಕ್ಕೆ ಮೊದಲೇ ವಿದ್ಯಾರ್ಥಿಗಳು, ಬೋಧಕ ಸಿಬ್ಬಂದಿ ಹಾಗೂ ಸಹಾಯಕ ಸಿಬ್ಬಂದಿಗೆ ಲಸಿಕೆ ನೀಡಲು ನಿರ್ಣಯ ಕೈಗೊಳ್ಳಲಾಗಿದೆ ಎಂದಿರುವ ಅವರು ಆಯಾ ಕಾಲೇಜುಗಳಲ್ಲಿಯೇ ಲಸಿಕೆ ಅಭಿಯಾನ ಕೈಗೊಳ್ಳಲಾಗುವುದು ಎಂದಿದ್ದಾರೆ.
ಆದರೆ ಕಡ್ಡಾಯವಾಗಿ ಕಾಲೇಜ್ ಗೆ ಬರುವ 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳು ಲಸಿಕೆ ಹಾಕಿಸಿಕೊಳ್ಳಿ ಎನ್ನುತ್ತಿದ್ದಾರೆ. ತಾಲೂಕಿನಲ್ಲಿ ಬೆರಳನಿಕೆ ಕಾಲೇಜುಗಳು ಮಾತ್ರ ಲಸಿಕೆ ಅಭಿಯಾನ ಮಾಡಿ ತಮ್ಮ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಲಸಿಕೆ ಕೊಡಿಸುವ ಮೂಲಕ ಒಳ್ಳೆಯ ಕಾರ್ಯದಲ್ಲಿ ತೊಡಗಿದ್ದಾರೆ,ಇನ್ನೂ ಕೆಲವು ಕಾಲೇಜುಗಳು ಯಾವುದೇ ರೀತಿಯ ಅಭಿಯಾನ ಮಾಡಿಲ್ಲ, ಆದ್ದರಿಂದ ಕಾಲೇಜು ವಿದ್ಯಾರ್ಥಿಗಳು ಸಹ ಲಸಿಕಾ ಕೇಂದ್ರಗಳತ್ತ ಮುಖ ಮಾಡಿದ್ದಾರೆ. ಆಯಾ ಕಾಲೇಜುಗಳಲ್ಲಿ ಲಸಿಕಾ ಅಭಿಯಾನ ಮಾಡಿದರೆ ಸ್ವಲ್ಪ ಮಟ್ಟಿಗೆ ಜನ ಜಂಗುಳಿ ಕಡಿಮೆ ಮಾಡಬಹುದು ಎಂದು ವಿದ್ಯಾರ್ಥಿಗಳ ಪೋಷಕರ ಮಾತಾಗಿದೆ.
ಒಟ್ಟಾರೆಯಾಗಿ ತಾಲೂಕು ವೈದ್ಯಾಧಿಕಾರಿಗಳು ಯಾವ ರೀತಿಯಾಗಿ ಎಲ್ಲದಕ್ಕೂ ಪರಿಹಾರ ಕಂಡುಕೊಳ್ಳುತ್ತಾರೆ, ಲಸಿಕೆ ನೀಡುವಲ್ಲಿ ಯಾವ ರೀತಿಯಲ್ಲಿ ಮತ್ತೆ ಹೊಸ ಹೊಸ ಯೋಜನೆಗಳನ್ನು ಹಾಕುತ್ತಾರಾ?ಅಥವಾ ಯಾವುದೇ ರೀತಿಯಾಗಿ ಸಂಬಂಧ ಇಲ್ಲದವರ ಹಾಗೆ ಸುಮ್ಮನೆ ಇರುತ್ತಾರಾ? ಎಂದು ಕಾದು ನೋಡಬೇಕು.