ಚಿಕ್ಕೋಡಿ: ನಿಪ್ಪಾಣಿ ನಗರ ಸಭೆಯಲ್ಲಿ ನಡೆದ ಎರಡನೆ ಸರ್ವಸಾಧಾರಣ ಸಭೆಯು ಆಡಳಿತ ಮತ್ತು ವಿರೋಧ ಪಕ್ಷದ ನಡುವೆ ಮಾತಿನ ಚಕಮಕಿ ಸದ್ದು-ಗದ್ದಲದೊಂದಿಗೆ ಅರ್ಧಕ್ಕೆ ಮೊಟಕುಗೊಳಿಸಲಾಯಿತು.
ಮಂಗಳವಾರ ನಿಪ್ಪಾಣಿ ನಗರ ಸಭೆಯಲ್ಲಿ ಜನಪ್ರತಿನಿ ಧಿಗಳ ಸಭೆ ಕರೆಯಲಾಗಿತ್ತು. ಮೂರನೇ ವರ್ಷದಲ್ಲಿ ಕರೆದ 2ನೇ ಸರ್ವಸಾಧಾರಣ ಸಭೆ ಇದಾಗಿತ್ತು. ಸಭೆಯಲ್ಲಿ ಶಾಸಕರು ಮತ್ತು ಸಂಸದರು ಭಾಗವಹಿಸದೇ ಇರುವುದು ಭಾರಿ ಕೋಲಾಹಲಕ್ಕೆ ಕಾರಣವಾಯಿತು. ಆಡಳಿತ ಪಕ್ಷದ ಸದಸ್ಯರು ಮತ್ತು ವಿರೋಧ ಪಕ್ಷದ ಸದಸ್ಯರು ತಮ್ಮ ವೈಯಕ್ತಿಕ ವಿಚಾರಗಳೊಂದಿಗೆ ಸಭೆಯಲ್ಲಿ ಗದ್ದಲ ಎಬ್ಬಿಸಿದರು. ಕೆಲ ಸದಸ್ಯರು ಟೇಬಲ್ ಮೇಲೆ ಹತ್ತಿ ನಿಂತರೆ ಕೆಲ ಸದಸ್ಯರು ಮೈಕ್ ಎಸೆದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಮಾಜಿ ನಗರಾಧ್ಯಕ್ಷ ವಿಲಾಸ ಗಾಡಿವಡ್ಡರ ಮತ್ತು ಅಧ್ಯಕ್ಷ ಜಯವಂತ ಭಾಟಲೆ ನಡುವೆ ತೀವ್ರ ಜಟಾಪಟಿ ನಡೆಯಿತು.
ನಂತರದಲ್ಲಿ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಈ ಸಭೆಯಲ್ಲಿ ಎಸ್‌ಟಿಪಿ ಪ್ಲಾಂಟ್‌ಗಾಗಿ ಜಮೀನು ಖರೀದಿ, ಜವಾಹರಲಾಲ್ ಕುಡಿಯುವ ನೀರಿನ ಯೋಜನೆ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ, ಎಸ್‌ಎಫ್‌ಸಿ, ಎಸ್‌ಪಿಟಿಎಸ್‌ಪಿ ಕ್ರಿಯಾ ಯೋಜನೆ, ಹಣಕಾಸು ಯೋಜನೆ ಇನ್ನುಳಿದ ಅಭಿವೃದ್ಧಿ ಪೂರಕ ಚರ್ಚೆ ನಡೆಯಬೇಕಿತ್ತು. ಆದರೇ ಸದ್ದು ಗದ್ದಲದ ನಡುವೆ ಕೇವಲ ನಡಾವಳಿಗಳನ್ನು ಮಂಡಿಸಿ ಠರಾವು ಪಾಸ್ ಮಾಡಲಾಯಿತು. ಉಪಾಧ್ಯಕ್ಷೆ ನೀತಾ ಬಾಗಡಿ, ಸಭಾಪತಿ ಸದ್ದಾಂ ನಾಗಾರ್ಜಿ, ಬಾಳಾಸಾಹೇಬ್ ದೇಸಾಯಿ ಇನ್ನುಳಿದವರು ಇದ್ದರು.