ಕೊಪ್ಪಳ: ಜಿಲ್ಲೆಯಿಂದ 20 ಜಿಂಕೆಗಳ ಚರ್ಮವನ್ನು ಬೆಂಗಳೂರು, ಮಂಗಳೂರು ಭಾಗಕ್ಕೆ ಮಾರಾಟ ಮಾಡುತ್ತಿದ್ದ ಜಾಲವೊಂದನ್ನು ಖರೀದಿದಾರರ ವೇಷದಲ್ಲಿ ತೆರಳಿದ್ದ ಅರಣ್ಯ ಅಧಿಕಾರಿಗಳ ತಂಡವು ಬೇಧಿಸಿ, ಏಳು ಜನರನ್ನು ಬಂಧಿಸಿದೆ.
ಯಲಬುರ್ಗಾ ತಾಲೂಕಿನ ಗುನ್ನಾಳ ಗ್ರಾಮದಲ್ಲಿ ಕಳೆದ 2 ವರ್ಷದ ಹಿಂದೆ ಜಿಂಕೆ ಚರ್ಮ ಮಾರಾಟದ ಕುರಿತಂತೆ ಕೇಸ್ ದಾಖಲಾಗಿತ್ತು. ಕೇಸ್ ದಾಖಲಾದ ವ್ಯಕ್ತಿಯ ಮೊಬೈಲ್ ನಂಬರನ್ನು ಒಂದು ವರ್ಷದಿಂದ ಟ್ರ್ಯಾಕ್ ಮಾಡುತ್ತಿದ್ದ ಬೆಂಗಳೂರು ಹಾಗೂ ಮಂಗಳೂರು ಮೊಬೈಲ್ ಫಾರೆಸ್ಟ್ ಸ್ಕ್ವಾಡ್ ತಂಡವು ಜಿಂಕೆ ಚರ್ಮ ಮಾರಾಟದ ಜಾಲವನ್ನು ಪತ್ತೆ ಮಾಡಿದೆ.
ಬೆಂಗಳೂರು, ಮಂಗಳೂರು ತಂಡ ಹಾಗೂ ಕೊಪ್ಪಳ ಅರಣ್ಯ ಅಧಿಕಾರಿಗಳ ತಂಡವು ಮಾರುವೇಷದಲ್ಲಿ ನಾವು ಜಿಂಕೆ ಚರ್ಮ ಖರೀದಿ ಮಾಡಲಿದ್ದೇವೆ. ನಮಗೆ ಬೇಕಾಗಿದೆ. ದರದ ಬಗ್ಗೆ ಮಾತಾಡೋಣ ಬನ್ನಿ ಎಂದು ಚರ್ಮ ಮಾರಾಟ ಮಾಡುವ ವ್ಯಕ್ತಿಗಳನ್ನ ಕರೆದಿದ್ದಾರೆ.
20 ಜಿಂಕೆಗಳ ಚರ್ಮ, ಒಂದು ಸಣ್ಣ ಜಿಂಕೆ, ಕೃಷ್ಣಮೃಗಗಳ ಕೊಂಬನ್ನು ತೆಗೆದುಕೊಂಡು 6 ಜನರು ತೆರಳಿದ್ದಾರೆ. ಖರೀದಿ ವೇಷದಲ್ಲಿದ್ದ ಅಧಿಕಾರಿಗಳ ತಂಡ ಮಾತುಕತೆಗೆ ಕುಳಿತಂತೆ ಮಾಡಿದೆ. ಇನ್ನೊಂದು ತಂಡವು ಇವರನ್ನ ಹಿಡಿಯಲು ಸಿದ್ದತೆ ನಡೆಸಿದೆ. ಕೊನೆಗೂ ಯಲಬುರ್ಗಾ ತಾಲೂಕಿನ ಹುಣಸಿಹಾಳ ಗ್ರಾಮದ 6 ಜನರನ್ನು ಮಾಲು ಸಮೇತ ಬಂಧಿಸಿದ್ದಾರೆ.
ಮಾರಾಟಕ್ಕೆ ರುವಾರಿಯಾದ ಇಟಗಿ ಗ್ರಾಮದ ವ್ಯಕ್ತಿಯು ಸೇರಿ 7 ಜನರನ್ನು ಬಂಧಿಸಿದ್ದಾರೆ. ಬಂಧಿತರಿಂದ ನಾಲ್ಕು ಬೈಕ್, 30 ಜಿಂಕೆಗಳ ಚರ್ಮಗಳು, ಒಂದು ಜೀವಂತ ಜಿಂಕೆ, ಕೃಷ್ಣಮೃಗದ 2 ಕೊಂಬು ವಶಕ್ಕೆ ಪಡೆದು ಅವರ ಮೇಲೆ ವನ್ಯಜೀವಿಗಳ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿದ್ದಾರೆ.
ದಾಳಿ ನೇತೃತ್ವದಲ್ಲಿ ಮೊಬೈಲ್ ಸ್ಕ್ವಾಡ್ ತಂಡ, ಕೊಪ್ಪಳ ಡಿಎಫ್ ಓ ಹರ್ಷ ಬಾನು, ಅಧಿಕಾರಿ ವರ್ಗ ಎಚ್ ಹೆಚ್ ಮುಲ್ಲಾ, ಅಂದಪ್ಪ ಕುರಿ ಸೇರಿದಂತೆ ಇತರರು ಪಾಲ್ಗೊಂಡು ಜಿಂಕೆ ಜಾಲ ಪತ್ತೆ ಮಾಡಿದ್ದಾರೆ.