ಹೈದರಾಬಾದ (ಸೆ 2): ತೆಲಂಗಾಣ ಭ್ರಷ್ಟಾಚಾರ ನಿಗ್ರಹ ದಳ ಮಂಗಳವಾರ ವಿಮಾ ವೈದ್ಯಕೀಯ ಸೇವೆಗಳ ಮಾಜಿ ನಿರ್ದೇಶಕಿ ಹಾಗೂ ಇನ್ನೋರ್ವ ಅಧಿಕಾರಿಗೆ ಸೇರಿರುವ ಲೆಕ್ಕವಿಲ್ಲದ 4.47 ಕೋಟಿ ವಶ.
ವಾಣಿಜ್ಯ ಹಾಗೂ ವಸತಿ ಸ್ಥಳ ಖರೀದಿಗಾಗಿ ಹೈದರಾಬಾದ್‌ನ ಸೈಬರಾಬಾದ್ ಪ್ರದೇಶದಲ್ಲಿ ರಿಯಲ್ ಎಸ್ಟೇಟ್ ಕಂಪನಿಯೊಂದರಲ್ಲಿ ಹೂಡಿಕೆ ಮಾಡಿದ್ದ ಮಾಜಿ ಐಎಂಎಸ್ ನಿರ್ದೇಶಕಿ ದೇವಿಕಾ ರಾಣಿ ಅವರಿಂದ 3.75 ಕೋ.ರೂ. ಹಾಗೂ ಇಎಸ್‌ಐ ಫಾರ್ಮಾಸಿಸ್ಟ್ ನಾಗಾ ಲಕ್ಷ್ಮೀ ಅವರ ಲೆಕ್ಕವಿಲ್ಲದ 75 ಲಕ್ಷ ರೂ.ಹಣವನ್ನು ರಿಯಲ್ ಎಸ್ಟೇಟ್ ಕಂಪೆನಿಯಿಂದ ವಶಪಡಿಸಿಕೊಳ್ಳಲಾಗಿದೆ.
ಇಬ್ಬರು ಅಧಿಕಾರಿಗಳು ಈ ಲೆಕ್ಕವಿಲ್ಲದ ಹಣವನ್ನು ಆರು ವಸತಿ ಫ್ಲಾಟ್‌ಗಳ ಖರೀದಿಗೆ ಹಾಗೂ ಸುಮಾರು 15,000 ಚದರ ಅಡಿ ವಾಣಿಜ್ಯ ಜಾಗವನ್ನು ತಮ್ಮ ಕುಟುಂಬದ ಹೆಸರಿನಲ್ಲಿ ಹೂಡಿಕೆ ಮಾಡಿದ್ದರು. ದೇವಿಕಾ ರಾಣಿ ಕೂಡ ಬೇನಾಮಿದಾರರ ಹೆಸರಿನಲ್ಲಿ 22 ಲಕ್ಷ ರೂ.ಹೂಡಿಕೆ ಮಾಡಿದ್ದಾರೆ ಎಂದು ಎಸಿಬಿ ತಿಳಿಸಿದೆ.
ದೇವಿಕಾ ರಾಣಿಯ ಸಹ ಆರೋಪಿ ಫಾರ್ಮಾಸಿಸ್ಟ್ ನಾಗಾ ಲಕ್ಷ್ಮಿಗೂ ಸಹ ವಶಕ್ಕೆ ಪಡೆದ ಹಣದಲ್ಲಿ ಪಾಲಿದೆ ಎಂದು ತಿಳಿದುಬಂದಿದ್ದು, ತನಿಖೆ ಮುಂದುವರಿದಿದೆ.