ಬೆಂಗಳೂರು: ಹೆಮ್ಮಾರಿ ಕೊರೊನಾ ಸೋಂಕು ಹಿನ್ನೆಲೆಯಲ್ಲಿ 10 ತಿಂಗಳಿಂದ ಮುಚ್ಚಿದ್ದ ಶಾಲಾ-ಕಾಲೇಜುಗಳನ್ನು ಜನವರಿ 1ರಿಂದ ಆರಂಭಿಸಲು ಸರ್ಕಾರ ಸಿದ್ಧತೆ ನಡೆಸಿರುವ ಬೆನ್ನಲ್ಲೇ ಲಂಡನ್ ಕೊರೊನಾ ವೈರಸ್ ಆತಂಕದ ಕಾರ್ಮೋಡ ಕವಿದಿದೆ.
ಎರಡು ದಿನಗಳಿಂದ ಇಂಗ್ಲೆಂಡ್ನಲ್ಲಿ ಕೊರೊನಾ ವೈರಸ್ ರೂಪಾಂತರಗೊಂಡು ಹರಡುತ್ತಿದ್ದು, ಬ್ರಿಟನ್ನಿಂದ ರಾಜ್ಯಕ್ಕೆ ನೂರಕ್ಕೂ ಹೆಚ್ಚು ಮಂದಿ ಬಂದಿದ್ದಾರೆ.
ಹೀಗಾಗಿ ರಾಜ್ಯದಲ್ಲೂ ಲಂಡನ್ ಕೊರೊನಾ ವೈರಸ್ ಹರಡುವ ಭೀತಿ ಎದುರಾಗಿದ್ದು, ಜನವರಿ 1ರಿಂದ 10 ಹಾಗೂ 12ನೇ ತರಗತಿ ಕ್ಲಾಸ್ ಆರಂಭಿಸಲು ಮತ್ತೆ ವಿಘ್ನ ಎದುರಾಗುವ ಸಾಧ್ಯತೆ ಇದೆ. ಲಂಡನ್ ಕೊರೊನಾ ಅಲೆ ಹಿನ್ನೆಲೆಯಲ್ಲಿ ಶಾಲೆಗಳನ್ನು ಆರಂಭಿಸಲು ಇನ್ನೂ ಒಂದು ವಾರ ಕಾಲಾವಕಾಶ ಇದೆ. ಹೀಗಾಗಿ ಈ ಬಗ್ಗೆ ತಜ್ಞರ ಜತೆ ಸಭೆ ನಡೆಸಿ ಮುಂದಿನ ಹೆಜ್ಜೆ ಇಡಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.ಇಂದು ಆರೋಗ್ಯ ಸಚಿವ ಡಾ.ಸುಧಾಕರ್ ನೇತೃತ್ವದಲ್ಲಿ ಉನ್ನತಮಟ್ಟದ ಸಭೆ ನಡೆಯಲಿದೆ. ಸಭೆಯಲ್ಲಿ ಸೋಂಕು ಹರಡದಂತೆ ತಡೆಯಲು ನೈಟ್ ಕಫ್ರ್ಯೂ ಸೇರಿದಂತೆ ಕಠಿಣ ಕ್ರಮಕೈಗೊಳ್ಳುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಹೀಗಾಗಿ ಆರೋಗ್ಯ ಇಲಾಖೆ ಜತೆ ಮತ್ತೊಮ್ಮೆ ಸಭೆ ನಡೆಸಿ ಶಾಲೆ ಆರಂಭದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಜನವರಿ 1ರಿಂದ ಶಾಲೆ-ಕಾಲೇಜುಗಳ ಪುನರಾರಂಭದ ಬಗ್ಗೆ ಮತ್ತೆ ಪರಾಮರ್ಶೆ ನಡೆಯುವ ಸಾಧ್ಯತೆ ಇದ್ದು, ದಿನಾಂಕ ಮತ್ತೆ ಮುಂದಕ್ಕೆ ಹೋಗುವ ನಿರೀಕ್ಷೆ ಇದೆ. ಈಗಾಗಲೇ ಇಂಗ್ಲೆಂಡ್ನಿಂದ 150ಕ್ಕೂ ಹೆಚ್ಚು ಮಂದಿ ರಾಜ್ಯಕ್ಕೆ ಬಂದಿದ್ದಾರೆ. ಅವರ ಮೂಲಕ ಹೊಸ ಕೊರೊನಾ ಹರಡುವ ಭೀತಿ ಇದ್ದು, ಇದರ ಸಾಧಕ-ಬಾಧಕಗಳ ಬಗ್ಗೆ ನೋಡಿಕೊಂಡು ಶಾಲೆಗಳನ್ನು ಆರಂಭಿಸಲು ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಸಿಎಂ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜನವರಿ 1ರಿಂದ ಶಾಲೆ ಆರಂಭಕ್ಕೆ ಒಪ್ಪಿಗೆ ಸೂಚಿಸಲಾಗಿತ್ತು. 6ರಿಂದ 9ನೇ ತರಗತಿವರೆಗೆ ಶಾಲೆಗಳಲ್ಲೇ ವಿದ್ಯಾಗಮ ತರಗತಿ ಆರಂಭಿಸಲು ನಿರ್ಧಾರ ಮಾಡಲಾಗಿತ್ತು. ತಾಂತ್ರಿಕ ಸಲಹಾ ಸಮಿತಿ ಕೊಟ್ಟ ವರದಿ, ತಜ್ಞರು ಕೊಟ್ಟ ಸಲಹೆ ಮೇರೆಗೆ ಶಾಲೆ ಆರಂಭಿಸಲು ತೀರ್ಮಾನ ಮಾಡಲಾಗಿತ್ತು.