ಮೂಡಲಗಿ : ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರಾಮ ಲೆಕ್ಕಾಧಿಕಾರಿ ಅಶೋಕ ತಳವಾರ ಎಂಬುವವರ ಮೇಲೆ ಸೋಮವಾರ ಸಾಯಂಕಾಲ ನಾಲ್ಕು ಗಂಟೆಗೆ ಎಸಿಬಿ ದಾಳಿಯಲ್ಲಿ ಸಿಕ್ಕಿ ಬಿದ್ದಿದ್ದಾನೆ.
ಮಳೆಯ ಅನಾವೃಷ್ಟಯಿಂದ ಮನೆಗಳು ಬಿದ್ದಿರುವುದರಿಂದ ಸರ್ಕಾರ ಸಂತ್ರಸ್ತರಿಗೆ ಐದು ಲಕ್ಷ ರೂ, ಗಳ ಮನೆ ನಿರ್ಮಾಣಕ್ಕೆ ಹಣ ಘೋಷಣೆ ಹಿನ್ನೆಲೆಯಲ್ಲಿ ಫಲಾನುಭವಿಗಳ ನೋಂದಣಿ ಕಾರ್ಯಚರಣೆಯನ್ನು ಸ್ಥಳೀಯ ತಹಶೀಲ್ದಾರ ಕಚೇರಿಯಲ್ಲಿ ಪ್ರಾರಂಭಿಸಲಾಗಿತ್ತು. ಹೊಸ ತಾಲೂಕಿನ ಕಚೇರಿಯಲ್ಲಿ ಸಿಬ್ಬಂದಿಗಳ ಕೊರತೆಯಿಂದ ಈ ಫಲಾನುಭವಿಗಳ ನೋಂದಣಿ ಮಾಡಲು ತಾಲೂಕಿನ ಮಸಗುಪ್ಪಿ ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ಅಶೋಕ ತಳವಾರ ಎಂಬಾತನ್ನು ನೇಮಿಸಲಾಗಿತ್ತು.
ತಾಲೂಕಿನ ಅರಬಾಂವಿ ಗ್ರಾಮದ ತೋಟದ ನಿವಾಸಿ ಆನಂದ ಉದ್ದಪ್ಪ ಧರ್ಮಟ್ಟಿ ಎಂಬುವವರ ಮನೆಯ ಸರ್ವೆಯಲ್ಲಿ ಸಿ ಗ್ರೂಪಿನಲ್ಲಿ ಇರುವುದರಿಂದ ಅದನ್ನು ಬಿ ಗ್ರೂಪಿಗೆ ಸೇರಿಸಲು ಗ್ರಾಮ ಲೆಕ್ಕಾಧಿಕಾರಿ ಅಶೋಕ ತಳವಾರ ಮೊದಲು 40 ಸಾವಿರ ರೂ, ಬೇಡಿಕೆ ಇಟ್ಟಿದ್ದರು.
ನಂತರ 30 ಸಾವಿರ ರೂ, ಗಳಿಗೆ ವ್ಯವಹಾರ ಮುಗಿಸಲಾಗಿತ್ತು. ಆ ವ್ಯವಹಾರದಲ್ಲಿ ಮೊದಲನೇಯ ಕಂತಿನ 15 ಸಾವಿರು ಕೊಡಬೇಕು ನಂತರ ಹಣ ಜಮವಾದ ಮೇಲೆ ಉಳಿದ 15 ಸಾವಿರ ಹಣ ಕೊಡುವುದಾಗಿ ವ್ಯವಹಾರ ನಡೆಸಿದ್ದರು.
ಆನಂದ ಧರ್ಮಟ್ಟಿಯವರು ಈ ಬಗ್ಗೆ ಭ್ರಷ್ಟಾಚಾರ ನಿಗ್ರಹ ದಳ ಬೆಳಗಾವಿಯವರಿಗೆ ದೂರು ದಾಖಲು ಮಾಡಿದರಿಂದ ಸೋಮವಾರದಂದು ಮೊದಲ ಕಂತಿನ ಹಣ ತಗೆದುಕೊಳ್ಳುವಾಗ ಭ್ರಷ್ಟಾಚಾರ ನಿಗ್ರಹ ದಳದ ಬೆಳಗಾವಿ ಉತ್ತರ ವಲಯದ ಎಸ್.ಪಿ ಬಿ.ಎಸ್. ನೇಮಗೌಡರ ಅವರ ಮಾರ್ಗದರ್ಶನದಲ್ಲಿ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ಗ್ರಾಮ ಲೆಕ್ಕಾಧಿಕಾರಿ ಅಶೋಕ ತಳವಾರನ್ನು ವಶಕ್ಕೆ ಪಡೆದುಕೊಂಡು ಹೆಚ್ಚಿನ ಮಾಹಿತಿಗಾಗಿ ಇನ್ನೂ ತನಿಖೆ ಮಾಡಲಾಗುತ್ತಿದೆ ಎಂದು ಎಸಿಬಿ ಡಿಎಸ್‌ಪಿ ವೇಣುಗೋಪಾಲ ಹೇಳಿದರು.
ಈ ಸಂದರ್ಭದಲ್ಲಿ ಎಸಿಬಿ ಅಧಿಕಾರಿಗಳಾದ ಸುನೀಲಕುಮಾರ, ಅಡಿವೇಪ್ಪ ಗುದಿಗೋಪ್ಪ ಮತ್ತು ಸಿಬ್ಬಂದಿಗಳು ದಾಳಿಯಲ್ಲಿ ಭಾಗವಹಿಸಿದ್ದರು.