ನವದೆಹಲಿ: ಸಾಲ ಮನ್ನಾ ಅವಧಿಯಲ್ಲಿ ಬಡ್ಡಿಮನ್ನಾ ಮಾಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನ ಸುಪ್ರೀಂ ಕೋರ್ಟ್ ಶುಕ್ರವಾರ ನಡೆಸಿದೆ. ಕೋವಿಡ್-19 ಸಾಂಕ್ರಾಮಿಕ ರೋಗವು ಜನರ ಆರೋಗ್ಯಕ್ಕೆ ಮಾರಕವಾಗಿದ್ದು, ವಿಶ್ವದ ಇತರ ದೇಶಗಳ ಆರ್ಥಿಕ ಬೆಳವಣಿಗೆಯ ಮೇಲೆ ತನ್ನ ಕರಿನೆರಳು ಆವರಿಸಿದೆ ಎಂದು ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ಪೀಠ ಹೇಳಿದೆ.
ವಿಚಾರಣೆಯ ನಂತರ, ಕೊರೊನಾ ವೈರಸ್ ರೋಗವುಂಟಾಗಿರುವ ಹಿನ್ನೆಲೆಯಲ್ಲಿ ಎರಡು ಕೋಟಿ ರೂಪಾಯಿವರೆಗಿನ ಎಂಟು ನಿರ್ದಿಷ್ಟ ವರ್ಗದ ಸಾಲಗಳ ಮೇಲೆ ಬಡ್ಡಿಯನ್ನ ಮರುಪಾವತಿಸುವ ತನ್ನ ನಿರ್ಧಾರವನ್ನ ಅನುಷ್ಠಾನಗೊಳಿಸಲು ಎಲ್ಲಾ ಕ್ರಮಗಳನ್ನ ಕೈಗೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿತು.
ಸಾಲಗಳ ಎಂಟು ವರ್ಗಗಳಲ್ಲಿ MSME (ಮೈಕ್ರೋ, ಸಣ್ಣ ಮತ್ತು ಮಧ್ಯಮ ಉದ್ಯಮಗಳು), ಶಿಕ್ಷಣ, ವಸತಿ, ಗ್ರಾಹಕ ಬಾಳಿಕೆ, ಕ್ರೆಡಿಟ್ ಕಾರ್ಡ್, ಆಟೋಮೊಬೈಲ್, ವೈಯಕ್ತಿಕ ಮತ್ತು ಬಳಕೆ ಸೇರಿವೆ.
ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಆರ್.ಸುಭಾಷ್ ರೆಡ್ಡಿ ಮತ್ತು ಎಂ.ಆರ್.ಶಾ ಅವರನ್ನೊಳಗೊಂಡ ಪೀಠ ಡಿಸೆಂಬರ್ 2ರಂದು ಮತ್ತೆ ವಿಚಾರಣೆಯನ್ನ ಪುನರಾರಂಭಿಸಲಿದೆ.
ಅಂದ್ಹಾಗೆ, ಮಾರ್ಚ್ 1, 2020 ರಿಂದ ಮೇ 31, 2020ರ ನಡುವೆ ಬಾಕಿ ಇರುವ ಅವಧಿ ಸಾಲಗಳ ಕಂತುಗಳ ಪಾವತಿಗೆ ಸಾಲ ನೀಡುವ ಸಂಸ್ಥೆಗಳಿಗೆ ಆರ್ ಬಿಐ ಮಾರ್ಚ್ 27ರಂದು ಸುತ್ತೋಲೆ ಹೊರಡಿಸಿತ್ತು.