ಬೆಂಗಳೂರು: ಚೆಕ್ ಡ್ಯಾಮ್ ಕಾಮಗಾರಿ ನಿರ್ವಹಿಸಿದ್ದ ಗುತ್ತಿಗೆದಾರನಿಗೆ ಬಾಕಿ ಹಣ ಬಿಡುಗಡೆ ಮಾಡಲು ₹ 1.5 ಲಕ್ಷ ಲಂಚ ಪಡೆಯುತ್ತಿದ್ದ ಸಣ್ಣ ನೀರಾವರಿ ಇಲಾಖೆಯ ಬೆಂಗಳೂರು ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಎಂ.ಎನ್. ಕಿಶೋರ್ ಮತ್ತು ಅವರ ಕಚೇರಿಯ ಲೆಕ್ಕ ಅಧೀಕ್ಷಕ ದತ್ತಾತ್ರೇಯ ನಾರಾಯಣಕರ್ ಅವರನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಸೋಮವಾರ ಬಂಧಿಸಿದೆ.
ದೊಡ್ಡಬಳ್ಳಾಪುರ ನಿವಾಸಿಯಾದ ಗುತ್ತಿಗೆದಾರ ವೆಂಕಟೇಶ್ ಬಾಬು ಎಂಬುವವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆ ಹೋಬಳಿಯಲ್ಲಿ ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿಯ ಗುತ್ತಿಗೆ ಪಡೆದಿದ್ದರು. ಕಾಮಗಾರಿ ಪೂರ್ಣಗೊಂಡಿದ್ದು, ₹ 10 ಲಕ್ಷ ಬಿಲ್ ಬಾಕಿ ಇತ್ತು. ಈ ಮೊತ್ತ ಬಿಡುಗಡೆ ಮಾಡುವಂತೆ ಕಾರ್ಯನಿರ್ವಾಹಕ ಎಂಜಿನಿಯರ್ ಅವರನ್ನು ಕೋರಿದ್ದರು.
ಬಾಕಿ ಬಿಲ್ ಪಾವತಿಗೆ ₹ 3.5 ಲಕ್ಷ ಲಂಚ ನೀಡುವಂತೆ ಕಿಶೋರ್ ಮತ್ತು ದತ್ತಾತ್ರೇಯ ಬೇಡಿಕೆ ಇರಿಸಿದ್ದರು. ಬಳಿಕ ಮಾತುಕತೆ ನಡೆದಿದ್ದು, ₹ 1.5 ಲಕ್ಷ ನೀಡಿದರೆ ಹಣ ಬಿಡುಗಡೆ ಮಾಡುವ ಭರವಸೆ ನೀಡಿದ್ದರು. ಈ ಕುರಿತು ವೆಂಕಟೇಶ್ ಬಾಬು ಎಸಿಬಿ ಬೆಂಗಳೂರು ನಗರ ಘಟಕಕ್ಕೆ ದೂರು ನೀಡಿದ್ದರು.
ಎಸಿಬಿ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು, ಕಾರ್ಯಾಚರಣೆ ಆರಂಭಿಸಿದ್ದರು. ಆರೋಪಿಗಳ ಸೂಚನೆಯಂತೆ ಸೋಮವಾರ ಜಯನಗರ ಶಾಪಿಂಗ್ ಕಾಂಪ್ಲೆಕ್ಸ್‌ನಲ್ಲಿರುವ ಸಣ್ಣ ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಕಚೇರಿಗೆ ತೆರಳಿದ ವೆಂಕಟೇಶ್ ಬಾಬು, ಲಂಚದ ಹಣ ತಲುಪಿಸಿದರು. ತಕ್ಷಣ ಕಾರ್ಯಾಚರಣೆ ನಡೆಸಿದ ಎಸಿಬಿ ಅಧಿಕಾರಿಗಳು ಕಿಶೋರ್ ಮತ್ತು ದತ್ತಾತ್ರೇಯ ಅವರನ್ನು ಬಂಧಿಸಿದರು.
ಎಸಿಬಿ ಬೆಂಗಳೂರು ನಗರ ಎಸ್‌ಪಿ ಕುಲದೀಪ್ ಕುಮಾರ್ ಆರ್. ಜೈನ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಲಂಚದ ಹಣದ ಸಮೇತ ಇಬ್ಬರನ್ನೂ ಬಂಧಿಸಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.