ಬಳ್ಳಾರಿ : ಬಳ್ಳಾರಿ ಮಹಾನಗರ ಪಾಲಿಕೆ ಕಚೇರಿಗೆ ಇಂದು ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಅಲ್ಲಿನ ಲಂಚಾವತರವನ್ನು ಬಯಲಿಗೆಳಿದ್ದಾರೆ.
ಅದರಲ್ಲೂ ಪಾಲಿಕೆ ಆಯುಕ್ತೆ ತುಷಾರಮಣಿಯ ಆಪ್ತ ಸಹಾಯಕ ಮಲ್ಲಿಕಾರ್ಜುನ ತಮ್ಮ ಕಚೇರಿಯ ಜವಾನ ಭಾಷಾ ಮೂಲಕ ಲಂಚ ಪಡೆಯುತ್ತಿರುವಾಗ ದಾಳಿ ನಡೆಸಿ ಆರೋಪಿಗಳಿಬ್ಬರನ್ನು ವಶಕ್ಕೆ ಪಡೆದಿದ್ದಾರೆ.
50 ಸಾವಿರ ರುಪಾಯಿ ಲಂಚದ ಹಣದ ಸಮೇತ ಆರೋಪಿಗಳು ಸಿಕ್ಕಿ ಬಿದ್ದಿದ್ದು, ಫಾರಂ-2 ನೀಡಲು ತಿಂಗಳಗಟ್ಟಲೆ ಈ ನೌಕರರು ಸತಾಯಿಸುತ್ತಿದ್ದರಂತೆ. ಬಳ್ಳಾರಿ ನಗರದಲ್ಲಿನ ಶಾಲೆಯೊಂದರ ದಾಖಲಾತಿ ಮಾಡಿಕೊಡಲು 60 ಸಾವಿರದ ಬೇಡಿಕೆ ಇಟ್ಟಿದ್ದ ಆಯುಕ್ತೆಯ ಆಪ್ತ ಸಹಾಯಕ ಮಲ್ಲಿಕಾರ್ಜುನ, ಸಹಾಯಕರ ಕಚೇರಿಯಲ್ಲಿ 50 ಸಾವಿರ ರೂ.ಹಣ ಸ್ವೀಕರಿಸುವ ವೇಳೆ ಎಸಿಬಿ ಅಧಿಕಾರಿಗಳ ದಾಳಿಯಲ್ಲಿ ಸಿಕ್ಕಿ ಬಿದ್ದಿದ್ದಾರೆ.
ಮಹಾನಗರ ಪಾಲಿಕೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎನ್ನುವ ದೂರುಗಳು ಕೇಳಿ ಬಂದಿದ್ದವು. ಆದರೆ ಈಗ ಖಚಿತ ಮಾಹಿತಿ ಹಾಗೂ ರಾಜಶೇಖರ್ ಎಂಬುವವರ ದೂರಿನ ಮೇರೆಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಇನ್ನೂ ಈ ವಿಷಯದಲ್ಲಿ ಆಯುಕ್ತೆ ತುಷಾರಮಣಿ ಅವರ ನಡೆ ನಿಗೂಢವಾಗಿದ್ದು, ಅವರ ಆಪ್ತ ಸಹಾಯಕ ಭ್ರಷ್ಟಾಚಾರದ ದಾಳಿಗೊಳಗಾಗಿರುವುದರಿಂದ ಈ ಪ್ರಕರಣದಲ್ಲಿ ಆಯುಕ್ತೆಯ ಕೈವಾಡವಿರುವ ಶಂಕೆ ಕೂಡ ಕೇಳಿ ಬಂದಿದೆ.
ಅಲ್ಲದೆ ಎಸಿಬಿ ಅಧಿಕಾರಿಗಳು ದಾಳಿ ನಡೆಸುವ ಸಂದರ್ಭದಲ್ಲಿಯೇ ಏಕಾಏಕಿ ತಮ್ಮ ಕಚೇರಿಗೆ ಬೀಗ ಜಡಿದುಕೊಂಡು ಆಯುಕ್ತೆ ಸ್ಥಳದಿಂದ ಕಾಲ್ಕಿತ್ತಿರುವುದು ಅನುಮಾನಗಳಿಗೆ ಕಾರಣವಾಗಿದೆ.