ಬೆಂಗಳೂರು: ಪರೋಲ್ ರಜೆ ಸಾಂಕ್ಷನ್ ಮಾಡಲು ಸಜಾಬಂಧಿಯಿಂದ ಲಂಚ ಪಡೆಯುತ್ತಿದ್ದ ಜೈಲಿನ ಅಧಿಕಾರಿಯೊಬ್ಬರು ಭ್ರಷ್ಟಾಚಾರ ನಿಗ್ರಹ ಸಂಸ್ಥೆ (ಎಸಿಬಿ) ತಂಡ ನಡೆಸಿದ ದಾಳಿಯಲ್ಲಿ ಸಿಕ್ಕಿಬಿದ್ದಿದ್ದಾರೆ.
ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿದ್ದ ತುಮಕೂರು ಮೂಲದ ಅಪರಾಧಿಯೊಬ್ಬರಿಗೆ 14 ವರ್ಷ ಜೈಲು ಶಿಕ್ಷೆ ನೀಡಿ ಸೆಷೆನ್ಸ್ ನ್ಯಾಯಾಲಯ ತೀರ್ಪು ನೀಡಿತ್ತು.
ಇತ್ತೀಚೆಗೆ ಈ ವ್ಯಕ್ತಿ ಪೆರೋಲ್ ಕೋರಿ ಕೇಂದ್ರ ಕಾರಾಗೃಹಕ್ಕೆ ಅರ್ಜಿ ಹಾಕಿದ್ದರು ಎನ್ನಲಾಗಿದೆ. ಈ ವೇಳೆ ಕಾರಾಗೃಹದ ಅಧೀಕ್ಷಕ ಜಯರಾಮ್ ಅಪರಾಧಿಯನ್ನು ಬಿಡುಗಡೆ ಮಾಡಲು 10 ಸಾವಿರ ಹಣ ಕೇಳಿದ್ದಾರಂತೆ. 5 ಸಾವಿರ ಹಣ ಮುಂಗಡವಾಗಿ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.
ಹಣ ಕೊಡಲು ಇಷ್ಟವಿಲ್ಲದ ವ್ಯಕ್ತಿ ವಿಷಯವನ್ನು ತಮ್ಮ ಪತ್ನಿಗೆ ತಿಳಿಸಿದ್ದಾರಂತೆ. ಪತಿಯಿಂದ ವಿಚಾರ ತಿಳಿದ ಪತ್ನಿ ಕೂಡಲೇ ಎಸಿಬಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದ್ದು.. ಖಚಿತ ಮಾಹಿತಿ ಆಧರಿಸಿದ ಎಸಿಬಿ ಅಧಿಕಾರಿಗಳು ಜಯರಾಮ್ ಸಜಾ ಬಂಧಿತನ ಪತ್ನಿಯಿಂದ 5 ಸಾವಿರ ಲಂಚ ಪಡೆಯುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದು, ಸದ್ಯ ಕಾರಾಗೃಹದ ಅಧೀಕ್ಷಕ ಜಯರಾಮ್ ನನ್ನು ಬಂಧಿಸಿರುವ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.