ಬೆಂಗಳೂರು : ಕೊರೊನಾದಿಂದ ಬಳಲುತ್ತಿದ್ದ ಬಸವಕಲ್ಯಾಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ. ನಾರಾಯಣರಾವ್(65) ಇಂದು ನಿಧನರಾಗಿದ್ದಾರೆ. ಇದರೊಂದಿಗೆ ಕರ್ನಾಟಕದಲ್ಲಿ ಕೊರೊನಾದಿಂದ ಮೃತಪಟ್ಟ ರಾಜಕೀಯ ಜನಪ್ರತಿನಿಧಿಗಳ ಸಂಖ್ಯೆ 3ಕ್ಕೆ ಏರಿಕೆಯಾಗಿದೆ. ನಿನ್ನೆಯಷ್ಟೇ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಕೊರೊನಾದಿಂದಾಗಿ ಸಾವನಪ್ಪಿದ್ದರು. ಇದರ ಬೆನ್ನಲ್ಲೆ ಈಗ ಮತ್ತೊಬ್ಬ ಜನಪ್ರತಿನಿಧಿ ಕೊರೊನಾಗೆ ಬಲಿಯಾಗಿರುವುದು, ಇಡೀ ಕರ್ನಾಟಕವನ್ನು ಬೆಚ್ಚಿಬಿಳಿಸಿದೆ.
ಸುಮಾರು 25 ದಿನಗಳಿಂದ ಕರೊನಾ ಸೋಂಕಿನಿಂದ ಬಳಲುತ್ತಿದ್ದ ಶಾಸಕರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಸೆಪ್ಟೆಂಬರ್ 1 ರಂದು ದಾಖಲಾಗಿದ್ದರು. ಶ್ವಾಸಕೋಶಕ್ಕೆ ಸೋಂಕು, ನ್ಯೂಮೋನಿಯಾ, ಅಧಿಕ ರಕ್ತದೊತ್ತಡ ಹಾಗೂ ಶುಗರ್ ನಿಂದಾಗಿ ಆರಂಭದಲ್ಲಿಯೇ ಅವರ ಆರೋಗ್ಯ ಬಿಗಡಾಯಿಸಿತ್ತು.
ಹೀಗಾಗಿ ಆಸ್ಪತ್ರೆಗೆ ದಾಖಲಾದ ಎರಡನೇ ದಿನವೇ ಅವರಿಗೆ ಕೃತಕ ಉಸಿರಾಟ ವ್ಯವಸ್ಥೆ ಮಾಡಲಾಗಿತ್ತು. ಕಳೆದ ಮಂಗಳವಾರ ರಾತ್ರಿಯಿಂದ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರವಾಗಿತ್ತು. ಚಿಕಿತ್ಸೆ ಫಲಿಸದೆ ಗುರುವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ.