ಬೆಂಗಳೂರು: ಇಂದು ಬೆಳಗ್ಗೆ ಬಿಬಿಎಂಪಿ ಎಂಜಿನಿಯರ್ ಹಾಗೂ ಬ್ರೋಕರ್ ಗಳ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ಏಕಕಾಲದಲ್ಲಿ ಬೆಂಗಳೂರಿನ ನಾಲ್ಕು ಸ್ಥಳಗಳಲ್ಲಿ ಎಸಿಬಿ ತಂಡ ದಾಳಿ ನಡೆಸಿದೆ. ಅಕ್ರಮ ಟಿಡಿಆರ್ ಹಗರಣ ಸಂಬಂಧಿಸಿ ಇಬ್ಬರು ಮಧ್ಯವರ್ತಿಗಳು, ಜಮೀನು ಮಾಲೀಕ ಹಾಗೂ ಓರ್ವ ಸಹಾಯಕ ಇಂಜನಿಯರ್ ಮನೆಗಳ ಮೇಲೆ ದಾಳಿ ಮಾಡಲಾಗಿದೆ.
ಸಹಾಯಕ ಇಂಜನಿಯರ್ ದೇವರಾಜು, ಮಧ್ಯವರ್ತಿಗಳಾದ ನಾಗೇಶ್, ನಾಗರಾಜು ಮತ್ತು ಜಮೀನು ಮಾಲೀಕನೆಂದು ಮೋಸ ಮಾಡಿದ್ದ ನಿವೃತ್ತ ಗ್ರಾಮ ಲೆಕ್ಕಿಗ ಸುಬ್ಬಾರಾವ್ ಮನೆ ಮೇಲೆ ದಾಳಿ ನಡೆದಿದೆ.
ಅಕ್ರಮ ಟಿಡಿಆರ್ ಸೃಷ್ಟಿ ಮಾಡಿ ಬಿಲ್ಡರ್ ಗಳಿಗೆ ಕೋಟ್ಯಾಂತರ ರೂ. ಮಾರಾಟ ಮಾಡಿದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಬಿಬಿಎಂಪಿ ಎಂಜಿನಿಯರ್ ಹಾಗೂ ಬ್ರೋಕರ್ ಗಳ ಮನೆ ಮೇಲೆ ದಾಳಿ ನಡೆಸಲಾಗಿದೆ.
ಬೆಂಗಳೂರು ಪೂರ್ವ ತಾಲೂಕು ರಾಂಪುರದ ಸರ್ವೆ ನಂಬರ್ 149 ರಲ್ಲಿ ಆಕ್ರಮ ಟಿಡಿಆರ್ ಮಂಜೂರಾಗಿತ್ತು. ಸುಮಾರು 28 ಕೋಟಿ ನಷ್ಟ ಎಂದು ಅಂದಾಜಿಸಿ ದೂರು ದಾಖಲಾಗಿತ್ತು. ಈ ಕುರಿತು ಎಸಿಬಿಯಲ್ಲಿ FIR ದಾಖಲಾಗಿತ್ತು. ಹೀಗಾಗಿ ಇಂದು ಎಸಿಬಿ ಎಸ್ಪಿ ಕಲಾಕೃಷ್ಣ ಸ್ವಾಮಿ ನೇತೃತ್ವದ ತಂಡದಿಂದ ನಾಲ್ಕು ಕಡೆ ದಾಳಿ ನಡೆದಿದೆ.