ಬೆಂಗಳೂರು: ರಾಜ್ಯದಲ್ಲಿ ಮತ್ತೆ ಒಂದು ವಾರ ಕಾಲ ಲಾಕ್ ಡೌನ್ ವಿಸ್ತರಣೆ ಮಾಡಿ ಮುಖ್ಯಮಂತ್ರಿ ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ.
ಇಂದು ಸಂಜೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಕೊರೊನಾವನ್ನು ಸಂಪೂರ್ಣ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಜೂನ್ 7 ರ ಬೆಳಿಗ್ಗೆ 6 ಗಂಟೆಯಿಂದ ಜೂ. 14ರ ಬೆಳಿಗ್ಗೆ 6 ಗಂಟೆಯವರೆಗೆ ಲಾಕ್ ಡೌನ್ ವಿಸ್ತರಣೆ ಮಾಡಲಾಗಿದೆ” ಎಂದು ತಿಳಿಸಿದರು.
ಆರೋಗ್ಯ ಪರಿಣಿತರ ಸಲಹೆಯ ಆಧಾರದ ಮೇಲೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಪ್ರಸ್ತುತ ಜಾರಿಯಲ್ಲಿರುವ ಕಟ್ಟುನಿಟ್ಟಿನ ಕ್ರಮಗಳು ಯಥಾಸ್ಥಿತಿಯಲ್ಲಿ ಮುಂದುವರೆಯಲಿವೆ ಎಂದು ಮಾಹಿತಿ ನೀಡಿದರು.
ವಿವಿಧ ವರ್ಗದವರಿಗೆ 500 ಕೋಟಿ ರೂ. ಪರಿಹಾರ ಪ್ಯಾಕೇಜ್ ಘೋಷಣೆ:
ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರು ವಿವಿಧ ವರ್ಗದ ಜನರಿಗೆ 500 ಕೋಟಿ ರೂ. ಪರಿಹಾರ ಪ್ಯಾಕೇಜ್ ಘೋಷಣೆ ಮಾಡಿದರು.
ಅಸಂಘಟಿತ ಕಾರ್ಮಿಕರು, ಆಶಾ ಕಾರ್ಯಕರ್ತೆಯರು, ನೇಕಾರರು, ಸಿನಿಮಾ ಕಾರ್ಮಿಕರು, ಚಲನಚಿತ್ರ ಮತ್ತು ದೂರದರ್ಶನ ಕಲಾವಿದರು, ಅರ್ಚಕರು, ಅಡುಗೆ ಕೆಲಸಗಾರರು, ಮೀನುಗಾರರಿಗೆ ತಲಾ 3,000 ಪರಿಹಾರ ಘೋಷಣೆ ಮಾಡಿದರು. ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ತಲಾ 2,000 ರೂ. ಪರಿಹಾರ ನೀಡುವುದಾಗಿ ಹೇಳಿದರು.