ನೆಲಮಂಗಲ: ಧಾರಾಕಾರ ಮಳೆಯಿಂದಾಗಿ ಮನೆ ಮೇಲೆ ಪಕ್ಕದ ಗೋಡೆ ಕುಸಿದು ಬಿದ್ದು, ಸ್ಥಳದಲ್ಲೇ ಅಣ್ಣ-ತಂಗಿ ಇಬ್ಬರೂ ಮೃತಪಟ್ಟ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ನಗರದ ಬಿನ್ನಮಂಗಲ ಗ್ರಾಮದಲ್ಲಿ ಸೋಮವಾರ ರಾತ್ರಿ ಸಂಭವಿಸಿದೆ.
ವೇಣುಗೋಪಾಲ(22) ಮತ್ತು ಕಾವ್ಯ(20) ಮೃತ ದುರ್ದೈವಿಗಳು. ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಸಿ.ಎಸ್.ಪುರ ಮೂಲದ ಅಣ್ಣ-ತಂಗಿ ಇಬ್ಬರೂ ವಿದ್ಯಾಭ್ಯಾಸದ ಸಲುವಾಗಿ ನೆಲಮಂಗಲದಲ್ಲಿ ಹನುಮಂತರಾಯಪ್ಪ ಎಂಬುವರಿಗೆ ಸೇರಿದ ಸೀಟಿನ ಮನೆಯಲ್ಲಿ ಬಾಡಿಗೆಗೆ ವಾಸವಿದ್ದರು.
ಸೋಮವಾರ ರಾತ್ರಿ ಎಂದಿನಂತೆ ಊಟ ಮುಗಿಸಿ ಅಣ್ಣ-ತಂಗಿ ಮತ್ತು ಸಂಬಂಧಿ ಸಂಪ್ರತ್ ಮನೆಯಲ್ಲಿ ಮಲಗಿದ್ದರು. ಈ ವೇಳೆ ಮನೆ ಸಮೀಪ ಖಾಲಿ ನಿವೇಶನದ ಕಾಂಪೌಂಡ್ ಗೋಡೆ ಕುಸಿದು ತಗ್ಗು ಪ್ರದೇಶದಲ್ಲಿದ್ದ ಸೀಟಿನ ಮನೆ ಮೇಲೆ ಬಿದ್ದಿದ್ದು, ನಿದ್ರೆಯಲ್ಲಿದ್ದವರ ಪೈಕಿ ಇಬ್ಬರು ದುರಂತ ಅಂತ್ಯ ಕಂಡಿದ್ದಾರೆ.
ಅವಶೇಷದಡಿ ಸಿಲುಕಿದ್ದ ಅಣ್ಣ-ತಂಗಿ ಶವಗಳನ್ನು ಅಗ್ನಿಶಾಮಕ ಸಿಬ್ಬಂದಿ ಹೊರತೆಗೆದಿದ್ದು, ಗಾಯಗೊಂಡಿದ್ದ ಮತ್ತೊಬ್ಬನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನೆಲಮಂಗಲ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.