ಬೆಂಗಳೂರು : ಸರ್ಕಾರಿ ಮತ್ತು ಅನುದಾನಿತ ಶಾಲಾ ಮಕ್ಕಳಿಗೆ ಎರಡು ತಿಂಗಳಿಗೆ ಅರ್ಧ ಕೆಜಿ ಕೆನೆಭರಿತ ಪೌಷ್ಠಿಕ ಹಾಲಿನ ಪುಡಿಯನ್ನು ಅವರ ಮನೆಗೆ ವಿತರಿಸಲು ಕೆಎಂಎಫ್ ಮಾಡಿಕೊಂಡ ಮನವಿಗೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಗುರುವಾರ ರಾತ್ರಿ ಮುಖ್ಯಮಂತ್ರಿಗಳ ಗೃಹ ಕಛೇರಿಗೆ ತೆರಳಿ ಅಭಿನಂದನೆ ಸಲ್ಲಿಸಿದ್ದಾರೆ. ಈ ಮೂಲಕ ಮಕ್ಕಳ ಮನೆಗೆ ನೇರವಾಗಿ ತಿಂಗಳಿಗೆ ಅರ್ಧ ಕೆಜಿ ಹಾಲಿನ ಪುಡಿ ವಿತರಣೆ ಆಗಲಿದೆ.
ಕೋವಿಡ್ ಎರಡನೇ ಅಲೆಯ ಸಂದಿಗ್ಧ ಪರಿಸ್ಥಿತಿಯಲ್ಲೂ ರೈತರು ಮತ್ತು ಕೆಎಂಎಫ್ ಹಿತ ಕಾಯಲು ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಮುಂದಾಗಿದ್ದಾರೆ.
ಕೋವಿಡ್ ಹಿನ್ನೆಲೆಯಲ್ಲಿ ಶಾಲಾ ಮಕ್ಕಳಿಗೆ ಕ್ಷೀರ ಭಾಗ್ಯ ಯೋಜನೆಯಡಿ ಹಾಲು ನೀಡಲು ಸಾಧ್ಯವಾಗಿರಲಿಲ್ಲ. ಇದನ್ನು ಮನಗಂಡ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಮುಂದಿನ ಎರಡು ತಿಂಗಳಿಗೆ ಒಂದು ಮಗುವಿಗೆ ಅರ್ಧ ಕೆಜಿ ಹಾಲಿನ ಪುಡಿ ನೀಡುವುದು ಸೂಕ್ತ. ಇದರಿಂದ ಲಾಕ್‍ಡೌನ್ ವೇಳೆ ರೈತರ ಹಿತ ಕಾಯಲು ಸಾಧ್ಯವಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದರು.
ಕೆಎಂಎಫ್ ಸಲ್ಲಿಸಿದ ಮನವಿಯಲ್ಲಿ ಏನಿತ್ತು? : ರಾಜ್ಯದಲ್ಲಿರುವ ಒಟ್ಟು 64 ಲಕ್ಷ ಶಾಲಾ ಮಕ್ಕಳಿದ್ದು, ಅವರಿಗೆ ತಿಂಗಳಿಗೆ ಅರ್ಧ ಕೆಜಿ ಕೆನೆಭರಿತ ಹಾಲಿನ ಪುಡಿಯನ್ನು ನೀಡಬೇಕು. ಅರ್ಧ ಕೆಜಿಗೆ ರೂ. 144.37 ಆಗಲಿದೆ(ಸರ್ಕಾರದ ದರ ರೂ. 288.75 ಪ್ರತಿ ಕೆಜಿಗೆ). ಇದಕ್ಕಾಗಿ ರಾಜ್ಯ ಸರ್ಕಾರವು ರೂ. 92.32 ಕೋಟಿ ಹಣವನ್ನು ಸರ್ಕಾರ ಭರಿಸಿದರೆ ಸಾಕು. ಇದರಿಂದ ಮುಂದಿನ ಎರಡು ತಿಂಗಳು ಮಟ್ಟಿಗಾದರೂ ಹಾಲು ಉತ್ಪಾದಕರ ನೆರವಿಗೆ ಸರ್ಕಾರ ಧಾವಿಸಿದಂತಾಗುತ್ತದೆ. ಪ್ರತಿನಿತ್ಯ ಮಕ್ಕಳು ಒಂದು ಲೋಟ ಹಾಲನ್ನು ಸೇವಿದಂತಾಗುತ್ತದೆ ಎಂದು ಮುಖ್ಯಮಂತ್ರಿಗಳಿಗೆ ನೀಡಿದ ಮನವಿಯಲ್ಲಿ ಕೆಎಂಎಫ್ ಕೇಳಿಕೊಂಡಿತ್ತು.
ಅರ್ಧ ಕೆಜಿ ಕೆನೆಭರಿತ ಹಾಲಿನ ಪುಡಿಯನ್ನು ರಾಜ್ಯದ 64 ಲಕ್ಷ ಮಕ್ಕಳಿಗೆ ನೀಡಿದರೆ ಒಂದು ತಿಂಗಳಿಗೆ 3200 ಮೆಟ್ರಿಕ್ ಟನ್ ಪುಡಿಯನ್ನು ನೀಡಿದಂತಾಗುತ್ತದೆ. ಅಂದರೆ 2.62 ಲಕ್ಷ ಲೀ. ಹಾಲನ್ನು ವಿತರಣೆ ಮಾಡಿದಂತಾಗುತ್ತದೆ. ಮಾತ್ರವಲ್ಲ, ಇಷ್ಟೇ ಪ್ರಮಾಣದ ಹಾಲನ್ನು ರೈತರಿಂದ ಹಾಲು ಖರೀದಿಸಿದಂತಾಗುತ್ತದೆ ಎಂದು ಕೆಎಂಎಫ್ ಮನವಿಯಲ್ಲಿ ಹೇಳಿಕೊಂಡಿತ್ತು. ಇದಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಸೂಕ್ತ ಕ್ರಮಕೈಗೊಂಡು ಪ್ಯಾಕೇಜ್ ಪ್ರಕಟಿಸಿದ್ದರಿಂದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಅಭಿನಂದಿಸಿದ್ದಾರೆ. ಇದರ ನಡುವೆ ಈಗ ರೈತರಿಂದ ಹಾಲನ್ನು ನಿರಂತರವಾಗಿ ಖರೀದಿ ಮಾಡುವ ನಿಟ್ಟಿನಲ್ಲಿ ನಿತ್ಯ ಗ್ರಾಹಕರಿಗೆ 1 ಲೀ ಹಾಲಿಗೆ 40 ಎಂಎಲ್ ಹೆಚ್ಚುವರಿ ಉಚಿತವಾಗಿ ನೀಡುತ್ತಿರುವುದು ಕೊರೋನಾ ನಡುವೆಯೂ ಗ್ರಾಹಕರನ್ನು ಸೆಳೆಯುವಲ್ಲಿ ಕೆಎಂಎಫ್ ಯಶಸ್ವಿಯಾಗಿದೆ.
ಮೊದಲಿನಿಂದಲೂ ರೈತ ಪರವಾಗಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ರೈತರ ಹಿತಕ್ಕಾಗಿ ಮತ್ತು ಅಭ್ಯುದಯಕ್ಕಾಗಿ ಹಗಲಿರುಳು ಕೆಲಸ ಮಾಡುತ್ತಲೇ ಇದ್ದಾರೆ. ರೈತರಿಗೆ ಪ್ರೋತ್ಸಾಹಧನವನ್ನು ಸಹ ಪ್ರಕಟಿಸಿ ರೈತರ ನೆರವಿಗೆ ಧಾವಿಸಿದ್ದಾರೆ. ಕೆಎಂಎಫ್ ಮಾಡಿಕೊಂಡ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಪ್ಯಾಕೇಜ್ ನೀಡಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ರೈತ ಕಾಳಜಿಗೆ ಬಾಲಚಂದ್ರ ಜಾರಕಿಹೊಳಿ ಅವರು ಅಭಿನಂದಿಸಿ ನಂದಿನಿ ಸಿಹಿ ಉತ್ಪನ್ನ ನೀಡಿ ಕೃತಜ್ಞತೆ ಅರ್ಪಿಸಿದ್ದಾರೆ.
Check Also
ರೈತರ ಖಾತೆಗಳಿಗೆ ಪರಿಹಾರವನ್ನು ಜಮೆ ಮಾಡಿ; ಅಧಿಕಾರಿಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸೂಚನೆ
ಗೋಕಾಕ : ಕಳೆದ ಆಗಷ್ಟ್ ತಿಂಗಳಲ್ಲಿ ಸಂಭವಿಸಿದ ಅತಿವೃಷ್ಟಿ ಮತ್ತು ಪ್ರವಾಹದಿಂದ ಹಾನಿಗೀಡಾಗಿರುವ ರೈತರ ಬೆಳೆಗಳಿಗೆ ಪರಿಹಾರ ಮೊತ್ತವನ್ನು ವಿತರಿಸುವ …