ಗೋಕಾಕ : ಇತ್ತೀಚೆಗೆ ಮಳೆ ಹಾಗೂ ಪ್ರವಾಹದಿಂದಾಗಿ ಗೋಕಾಕ ಹಾಗೂ ಮೂಡಲಗಿ ತಾಲೂಕುಗಳಲ್ಲಿ ರೈತರ ಬೆಳೆಗಳು ಅಪಾರ ಪ್ರಮಾಣದಲ್ಲಿ ಹಾನಿಯಾಗಿದ್ದು, ಕೂಡಲೇ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸಮೀಕ್ಷಾ ಕಾರ್ಯಗಳನ್ನು ಕೈಗೊಳ್ಳುವಂತೆ ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಗೋಕಾಕ ಹಾಗೂ ಮೂಡಲಗಿ ತಹಶೀಲ್ದಾರರಿಗೆ ಸೂಚನೆ ನೀಡಿದ್ದಾರೆ.
ಕಳೆದೊಂದು ವಾರದಿಂದ ಮಹಾರಾಷ್ಟ್ರ ಹಾಗೂ ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಸುರಿದ ಮಳೆಯಿಂದಾಗಿ ಗೋಕಾಕ ಮತ್ತು ಮೂಡಲಗಿ ತಾಲೂಕುಗಳಲ್ಲಿ ಕೋಟ್ಯಾಂತರ ರೂ.ಗಳ ಬೆಳೆಗಳ ನಷ್ಟ ಉಂಟಾಗಿದೆ. ಆದ್ದರಿಂದ ಖುದ್ದಾಗಿ ರೈತರ ಜಮೀನುಗಳಿಗೆ ತೆರಳಿ ಅಧಿಕಾರಿಗಳು ಸಮೀಕ್ಷೆ ನಡೆಸಿ ವಾರದೊಳಗೆ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ.
ಘಟಪ್ರಭಾ ನದಿ ತೀರದ ಗ್ರಾಮಗಳಲ್ಲಿ ಕೃಷಿ ಬೆಳೆಗಳು ನಾಶವಾಗಿವೆ. ಕಬ್ಬು, ಗೋವಿನ ಜೋಳ, ಹೆಸರು, ಸೋಯಾಬಿನ್, ಸೂರ್ಯಕಾಂತಿ, ಹತ್ತಿ ಬೆಳೆಗಳು ಮತ್ತು ತೋಟಗಾರಿಕೆಯ ಟೋಮೆಟೋ, ಕ್ಯಾಬೀಜ್, ಮೆಣಸಿನಕಾಯಿ, ಉಳ್ಳಾಗಡ್ಡಿ ಬೆಳೆಗಳು ಅಪಾರ ಪ್ರಮಾಣದಲ್ಲಿ ನಾಶವಾಗಿವೆ. ಮಳೆಯ ರಭಸಕ್ಕೆ ವಿದ್ಯುತ್ ಕಂಬಗಳು, ವಿದ್ಯುತ್ ಪರಿವರ್ತಕಗಳು ಹಾನಿಯಾಗಿವೆ. ಜೊತೆಗೆ ರಸ್ತೆಗಳು ಸಹ ಹಾಳಾಗಿವೆ. ಆದ್ದರಿಂದ ಪ್ರವಾಹದಿಂದ ಹಾನಿಗೀಡಾಗಿರುವ ಬೆಳೆಗಳ ಕುರಿತು ಅಧಿಕಾರಿಗಳು ಜಂಟೀ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಕಳೆದ 2019ರ ಅಗಸ್ಟ್-ಅಕ್ಟೋಬರ್ ತಿಂಗಳಲ್ಲಿ ಸಂಭವಿಸಿದ ನಿರಂತರ ಮಳೆ ಹಾಗೂ ಭಾರೀ ಪ್ರವಾಹದಿಂದಾಗಿ ಗೋಕಾಕ ಮತ್ತು ಮೂಡಲಗಿ ತಾಲೂಕುಗಳಲ್ಲಿ ಸಾವಿರಾರು ಮನೆಗಳು ಜಲಾವೃತಗೊಂಡಿದ್ದವು. ಅಧಿಕಾರಿಗಳು ಹಾನಿಗೀಡಾದ ಮನೆಗಳಿಗೆ ತೆರಳಿ ಸಂಪೂರ್ಣ ಬಿದ್ದ ಮನೆಗಳ ಮತ್ತು ಭಾಗಶಃ ಬಿದ್ದ ಮನೆಗಳ ಸಮೀಕ್ಷೆ ಕಾರ್ಯಗಳನ್ನು ಮಾಡಿದ್ದರು. ಆದರೆ ಮನೆಗಳನ್ನು ಕಳೆದುಕೊಂಡ ನಿರಾಶ್ರಿತ ಕುಟುಂಬಗಳಿಗೆ ವಸತಿ ನಿಗಮದಿಂದ ಬಿಲ್ ಮಂಜೂರಾಗಿದ್ದು, ಕೊರೊನಾ ಹಿನ್ನೆಲೆಯಲ್ಲಿ ನಿರಾಶ್ರಿತರಿಗೆ ವಿಳಂಬವಾಗಿ ಹಂತಹಂತವಾಗಿ ಬಿಡುಗಡೆಯಾಗುತ್ತಿದೆ. ಅಲ್ಲದೇ ಕೆಲವೆಡೆ ಮನೆಗಳ ಸ್ಥಳ ಬದಲಾವಣೆ ಕಾರಣಗಳಿಂದ ಮನೆಗಳ ನಿರ್ಮಾಣಕ್ಕೆ ವಿಳಂಬವಾಗುತ್ತಿದೆ.
ಈಗಾಗಲೇ ರಾಜೀವ ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಾಗಿದ್ದು, ಕೂಡಲೇ ಬಾಕಿ ಇರುವ ಮನೆಗಳ ನಿರ್ಮಾಣಕ್ಕೆ ಹಣವನ್ನು ಬಿಡುಗಡೆ ಮಾಡಬೇಕು. ಮತ್ತು ಡಿಲೀಟ್ ಆಗಿರುವ ನಿರಾಶ್ರಿತ ಫಲಾನುಭವಿಗಳ ಹೆಸರುಗಳನ್ನು ಸೇರ್ಪಡೆಗೊಳಿಸಲು ಅವಕಾಶ ಕಲ್ಪಿಸಿಕೊಡುವಂತೆ ಅವರಲ್ಲಿ ಕೋರಲಾಗಿದೆ ಎಂದು ಶಾಸಕ ಮತ್ತು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.