ಗೋಕಾಕ : ಗೋಕಾಕ ಹಾಗೂ ಮೂಡಲಗಿ ತಾಲೂಕುಗಳಲ್ಲಿ ಮಹಾಮಾರಿ ಕೊರೋನಾ ನಿಯಂತ್ರಿಸಲು ಅಧಿಕಾರಿಗಳು ಸಕಲ ಸಿದ್ಧತೆಯೊಂದಿಗೆ ಸಮರೋಪಾದಿಯಲ್ಲಿ ಕಾರ್ಯಪ್ರವೃತ್ತರಾಗಬೇಕೆಂದು ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗುರುವಾರದಂದು ನಗರದ ಪ್ರವಾಸಿ ಮಂದಿರದಲ್ಲಿ ಗೋಕಾಕ ಹಾಗೂ ಮೂಡಲಗಿ ತಾಲೂಕಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೋನಾ ಎರಡನೇ ಅಲೆಯನ್ನು ನಿಯಂತ್ರಿಸಿ, ಮುಂದಾಗುವ ಅನಾಹುತಗಳನ್ನು ತಪ್ಪಿಸುವಂತೆ ತಿಳಿಸಿದರು.
ಇದುವರೆಗೆ ಗೋಕಾಕ ತಾಲೂಕಿನಲ್ಲಿ 79 ಹಾಗೂ ಮೂಡಲಗಿ ತಾಲೂಕಿನಲ್ಲಿ 21 ಜನರಿಗೆ ಕೊರೋನಾ ಸೋಂಕು ತಗಲಿದ್ದು, ಅವರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಎರಡೂ ತಾಲೂಕುಗಳ ಸೊಂಕಿತರಿಗಾಗಿ ಬೆಡ್‍ಗಳ ವ್ಯವಸ್ಥೆ ಮಾಡಲಾಗಿದೆ. ಮಲ್ಲಾಪೂರ ಪಿಜಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಆಕ್ಷಿಜನ್ ಸಿಲಿಂಡರ್ ಒಳಗೊಂಡ ಕೋವಿಡ್ ಕೇಂದ್ರವಿದ್ದು, ಅವಶ್ಯಕತೆ ಬಿದ್ದರೆ ಮೂಡಲಗಿಯಲ್ಲೂ ಪ್ರಾರಂಭಿಸಲಾಗುವುದು. ಜನತೆ ಯಾವುದೇ ಆತಂಕಕ್ಕೆ ಒಳಗಾಗದೇ ಎಲ್ಲರೂ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ಸರ್ಕಾರ ನಿಗಧಿಪಡಿಸಿದ ನಿರ್ದೇಶನಗಳನ್ನು ಪಾಲಿಸಿ ಕೊರೋನಾ ನಿಯಂತ್ರಣಕ್ಕೆ ಸಹಕಾರ ನೀಡಬೇಕೆಂದು ಜನತೆಯಲ್ಲಿ ಜಾಗ್ರತಿ ಮೂಡಿಸುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದರು.
ಜ್ವರ, ಕೆಮ್ಮು, ನೆಗಡಿ, ಉಸಿರಾಟ ತೊಂದರೆ, ಮೈಕೈ ನೋವು, ಬೇದಿ, ನಾಲಿಗೆ ರುಚಿ ಹಾಗೂ ವಾಸನೆ ಕಳೆದುಕೊಳ್ಳುವಿಕೆ ಇತ್ಯಾದಿ ರೋಗ ಲಕ್ಷಣಗಳು ಕಂಡುಬಂದಲ್ಲಿ ನಿರ್ಲಕ್ಷ್ಯವಹಿಸಿದೇ ತಮ್ಮ ಸಮೀಪದ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆದುಕೊಳ್ಳುವಂತೆ ಇದೇ ಸಂದರ್ಭದಲ್ಲಿ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.
ತಹಶೀಲ್ದಾರ ಮತ್ತು ಡಿವಾಯ್‍ಎಸ್‍ಪಿ ನೇತೃತ್ವದಲ್ಲಿ ಟಾಸ್ಕ್‍ಫೋರ್ಸ್ ಸಮೀತಿ ರಚಿಸಿ, ಕೊರೋನಾ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಬೇಕು. ಇದೊಂದು ಸಾಮಾಜಿಕ ಸೇವೆ ಎಂದು ಅವರ ಮಾರ್ಗದರ್ಶನದಲ್ಲಿ ಎಲ್ಲ ಅಧಿಕಾರಿಗಳು ಕೊರೋನಾ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಜಿಲ್ಲಾ ಪಂಚಾಯತ ವ್ಯಾಪ್ತಿಯಲ್ಲಿ ಸಮೀತಿ ರಚಿಸಿ ಅವರೂ ಸಹ ನಿಯಂತ್ರಣಕ್ಕೆ ಶ್ರಮಿಸಬೇಕು. ಉಭಯ ತಾಲೂಕುಗಳಲ್ಲಿಯ ಹೆಚ್ಚು ಜನಸಂಖ್ಯೆ ಇರುವ ಗ್ರಾಮ ಹಾಗೂ ಪಟ್ಟಣಗಳಲ್ಲಿ ಕೊರೋನಾ ನಿಯಂತ್ರಣ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು. ನಾಳೆ ಶುಕ್ರವಾರದಂದು ಮೂಡಲಗಿ ಮತ್ತು ಗೋಕಾಕ ನಗರಗಳಲ್ಲಿ ವ್ಯಾಪಾರಸ್ಥರ ಸಭೆ ಕರೆದು, ಜನರಿಗೆ ದಿನಬಳಕೆಯ ವಸ್ತುಗಳಿಗೆ ತೊಂದರೆಯಾಗದಂತೆ ಸಮಯ ನಿಗದಿಪಡಿಸಿ ಸ್ವಯಂ ಪ್ರೇರಣೆಯಿಂದ ಲಾಕ್‍ಡೌನ್ ಮಾಡುವಂತೆ ಅವರ ಮನವೊಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಮತ್ತು ಗ್ರಾಮ ಲೆಕ್ಕಾಧಿಕಾರಿಗಳು ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ತಮ್ಮ ವ್ಯಾಪ್ತಿಯಲ್ಲಿ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಟಾಸ್ಕ್‍ಫೋರ್ಸ್ ಸಮೀತಿಯವರು ನೀಡುವ ನಿರ್ದೇಶನಗಳನ್ನು ಪಾಲಿಸುವಂತೆ ತಿಳಿಸಿದ ಅವರು, ಇದೊಂದು ಮಹತ್ ಕಾರ್ಯವೆಂದು ಎಲ್ಲರೂ ಜವಾಬ್ದಾರಿಯಿಂದ ಈ ಮಹಾಮಾರಿ ಕರೋನಾವನ್ನು ನಿಯಂತ್ರಿಸಲು ಕೈ ಜೋಡಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗೋಕಾಕ ತಹಶೀಲ್ದಾರ ನವೀನ ಹುಲ್ಲೂರ, ಗೋಕಾಕ ಡಿವಾಯ್‍ಎಸ್‍ಪಿ ಜಾವೇದ ಇನಾಮದಾರ, ತಾಲೂಕಾ ಆರೋಗ್ಯಾಧಿಕಾರಿ ಡಾ.ಎಂ.ಎಸ್. ಕೊಪ್ಪದ, ಮುಖ್ಯ ವೈದ್ಯಾಧಿಕಾರಿ ಡಾ.ರವೀಂದ್ರ ಆಂಟಿನ್, ಹಿರಿಯ ತಜ್ಞ ವೈದ್ಯ ಡಾ.ಆರ್.ಎಸ್. ಬೆಣಚಿನಮರಡಿ, ಡಾ.ಎಂ.ಎಸ್. ಕೋಣಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅಜೀತ ಮನ್ನಿಕೇರಿ, ಜಿ.ಬಿ. ಬಳಗಾರ, ಸಿಪಿಐ ಗೋಪಾಲ ರಾಠೋಡ, ಸತೀಶ ಕನ್ವೇಶ್ವರ, ಶ್ರೀಶೈಲ ಬ್ಯಾಕೂಡ ಸೇರಿದಂತೆ ತಾಲೂಕಾ ಮಟ್ಟದ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.