ಬೆಂಗಳೂರು: ರಾಸಲೀಲೆ ಸಿಡಿ ಪ್ರಕರಣದಲ್ಲಿ ಸಚಿವ ಹುದ್ದೆಗೆ ರಾಜೀನಾಮೆ ನೀಡಿದ್ದ ರಮೇಶ್ ಜಾರಕಿಹೋಳಿ ಅವರ ವಿರುದ್ದ ಷಟ್ಯಂತ್ರ ಮಾಡಲಾಗಿದೆ ಎಂದು ಅವರ ಸಹೋದರ, ಕೆಎಂಎಫ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೋಳಿ ಹೇಳಿದರು.
ಭಾನುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಈ ಷಡ್ಯಂತ್ರದಲ್ಲಿ ನಾಲ್ಕು ಮಂದಿ ಭಾಗಿಯಾಗಿದ್ದಾರೆ. ಹಾಗೂ ಸಂತ್ರಸ್ಥ ಯುವತಿಗೆ 50 ಲಕ್ಷದ ಆಮಿಷವೊಡ್ಡಿದ್ದಾರೆ ಎಂದು ಆರೋಪಿಸಿದರು. ಆದರೆ ನಾಲ್ವರ ಹೆಸರನ್ನು ಈಗಲೇ ಬಹಿರಂಗಪಡಿಸಲ್ಲ. ಷಡ್ಯಂತ್ರದ ಹಿಂದೆ ಕಾಣದ ಕೈಗಳ ಕೈವಾಡ ಇದೆ. ಸಚಿವ ರಮೇಶ್ ಜಾರಕಿಹೋಳಿ ಅವರ ತೇಜೋವಧೆ ಮಾಡಲು ಹನಿ ಟ್ರ್ಯಾಪ್ ರೀತಿಯಲ್ಲಿ ಪ್ಲಾನ್ ಮಾಡಲಾಗಿದೆ.
ವಿಡಿಯೋದಲ್ಲಿರುವ ಯುವತಿ ಸಂತ್ರಸ್ಥೆ ಅಲ್ಲ. ದುಬೈನಲ್ಲಿ ಯುವತಿಗೆ ಕೆಲಸ ಕೊಡಿಸುವ ಆಮಿಷವೊಡ್ಡಿದ್ದಾರೆ. ಹಾಗಾಗಿ, ಆಕೆಯನ್ನು ಸಂತ್ರಸ್ಥ ಮಹಿಳೆ ಎಂದು ಕರೆಯಬೇಡಿ ಎಂದು ಮನವಿ ಮಾಡಿದ್ದಲ್ಲದೇ, ಆಕೆಗೆ ಅನ್ಯಾಯವಾಗಿದ್ದರೆ ನ್ಯಾಯ ಕೊಡಿಸುವೆ ಎಂದು ಇದೇ ವೇಳೆ ಭರವಸೆ ನೀಡಿದರು.
17 ಸರ್ವರ್ ಗಳಲ್ಲಿ ನಕಲಿ ಸಿಡಿ ರಿಲೀಸ್: ಈ ನಕಲಿ ಸಿಡಿ ಬಗ್ಗೆ ಸಿಬಿಐ ತನಿಖೆಯಾಗಲೇಬೇಕು. ರಷ್ಯಾದಲ್ಲಿ 17 ಸರ್ವರ್ ಗಳನ್ನು ಬುಕ್ ಮಾಡಲಾಗಿತ್ತು. 15 ಕೋಟಿ ಖರ್ಚು ಮಾಡಿ ಸರ್ವರ್ ಬುಕ್ ಮಾಡಲಾಗಿದೆ. ನಾವೇ ಈ ಎಲ್ಲ ಮಾಹಿತಿ ಕಲೆ ಹಾಕುತ್ತಿದ್ದೇವೆ ಎಂದು ಬಾಲಚಂದ್ರ ಜಾರಕಿಹೊಳಿ ಮಾಧ್ಯಮದವರಿಗೆ ತಿಳಿಸಿದರು.